ಬಂಟ್ವಾಳ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ‘ನಾಳೆಗೊಂದು ನೆರಳು’ ಎಂಬ ಘೋಷ ವಾಕ್ಯದೊಂದಿಗೆ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಜೂನ್ 5ರಂದು ಜಿಲ್ಲಾ ವ್ಯಾಪ್ತಿಯ ವಿವಿಧ ಕೇಂದ್ರಗಳಲ್ಲಿ ನಡೆಯುವ ಸಸಿ ವಿತರಣಾ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ರವಿವಾರ ಬಿ.ಸಿ.ರೋಡಿನಲ್ಲಿರುವ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಎಸ್ಸಾರ್ಟಿಸಿ ಡಿಪ್ಪೊ ಮೆನೇಜರ್ ಇಸ್ಮಾಯೀಲ್, ಸಸಿ ನೆಡುವ ಕಾರ್ಯಕ್ರಮಗಳು ಸಾಂಕೇತಿಕಕ್ಕೆ ಸೀಮಿತವಾಗಿರದೆ ನೆಟ್ಟ ಸಸಿಗಳನ್ನು ಪೋಷಿಸಿ ಬೆಳೆಸುವ ಕಾರ್ಯ ಪ್ರತೀಯೊಬ್ಬರಿಂದ ಆಗಬೇಕು ಎಂದು ಹೇಳಿದರು.

SSF 3
ಹೆಚ್ಚುತ್ತಿರುವ ತಾಪಮಾನದ ನಿಯಂತ್ರಣಕ್ಕೆ ಕಾಡು ಬೆಳೆಸುವುದೊಂದೇ ಪರಿಹಾರವಾಗಿದೆ. ಕಾಡು ಇದ್ದರೆ ಮಾತ್ರ ಮಳೆಯಾಗುತ್ತದೆ ಮತ್ತು ಜಲ ಸಂರಕ್ಷಣೆ ಸಾಧ್ಯವಾಗುತ್ತದೆ. ಪ್ರತೀ ಮನೆಯಲ್ಲಿ ವರ್ಷಕ್ಕೆ ಕನಿಷ್ಠ 1 ಗಿಡವನ್ನು ನೆಟ್ಟು ಬೆಳೆಸುವ ಕಾರ್ಯ ಆಗಬೇಕು ಎಂದು ಹೇಳಿದ ಅವರು, ಪರಿಸರ ಸಂರಕ್ಷಣೆಗಾಗಿ ಎಸ್ಸೆಸ್ಸೆಫ್ ಗಿಡ ನೆಡುವ ಕಾರ್ಯಕ್ರಮಕ್ಕೆ ಒತ್ತು ನೀಡುತ್ತಾ ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಮಾತನಾಡಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಜಗತ್ತಿಗೆ ಸವಾಲಾಗಿದೆ. ಪರಿಸರ ಸಮಾತೋಲನೆಗೆ ಮರಗಳನ್ನು ಬೆಳೆಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಸೆಸ್ಸೆಫ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ಡಿವಿಶನ್‍ಗಳಲ್ಲಿ ಜೂನ್ 5ರಂದು ಹತ್ತು ಸಾವಿರ ಗಿಡಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪರಿಸರ ಮಾಲಿನ್ಯವಾದರೆ ಜನರು ಮಾರಕ ರೋಗಗಳಿಗೆ ತುತ್ತಾಗುತ್ತಾರೆ. ಇಸ್ಲಾಮ್ ಧರ್ಮವು ಪರಿಸರ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿದೆ. ಪರಿಸರ ಮತ್ತು ಮನಸ್ಸನ್ನು ಶುದ್ದೀಕರಿಸುವುದು ವಿಶ್ವಾಸದ ಭಾಗವಾಗಿದೆ ಎಂದು ಪ್ರವಾದಿ ಮುಹಮ್ಮದ್ (ಸ.ಅ.) ಸಾರಿದ್ದಾರೆ ಎಂದು ಹೇಳಿದ ಅವರು ನಾಳೆ ಅಂತ್ಯದಿನ ಸಂಭವಿಸಲಿದೆ ಎಂದು ತಿಳಿದರೂ ಇಂದು ನೀನು ಗಿಡವನ್ನು ನೆಡು ಎಂದು ಪ್ರವಾದಿ ಮುಹಮ್ಮದ್ (ಸ.ಅ.) ಪ್ರತಿಪಾದಿಸಿರುವುದು ಇಸ್ಲಾಮ್ ಪರಿಸರಕ್ಕೆ ನೀಡಿರುವ ಮಹತ್ವವನ್ನು ತಿಳಿಸುತ್ತದೆ ಎಂದು ಹೇಳಿದರು. ಜೂನ್ 5ರಂದು ನಡೆಯುವ ಸಸಿ ವಿತರಣಾ ಕಾರ್ಯಕ್ರಮದ ಸಾಂಕೇತಿಕವಾಗಿ ಕಾರ್ಯಕ್ರಮದಲ್ಲಿ ಸಸಿಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲಂದರ್ ಪದ್ಮುಂಜೆ, ಕೋಶಾಧಿಕಾರಿ ರಝಾಕ್ ಸಖಾಫಿ, ಎಸ್‍ವೈಎಸ್ ದಕ್ಷಿಣ ಕನ್ನಡ ಸದಸ್ಯ ಖಲೀಲ್ ಮುಸ್ಲಿಯಾರ್, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ಬಿ.ಸಿ.ರೋಡ್ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಲಿ ತುರ್ಕಲಿಕೆ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *