ಬಂಟ್ವಾಳ: ಹಲವು ಬಾರಿ ಸಭೆಗಳು ನಡೆದು, ಸಾಕಷ್ಟು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಕಾರ್ಯರೂಪಕ್ಕೆ ಬಾರದ ಬಂಟ್ವಾಳ ಪೇಟೆ ರಸ್ತೆ ಅಗಲೀಕರಣಕ್ಕೆ ಮತ್ತೆ ಬಂಟ್ವಾಳ ವರ್ತಕರು ಹಾಗೂ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರನ್ನು ಶನಿವಾರ ಬಡ್ಡಕಟ್ಟೆಯಲ್ಲಿ ಭೇಟಿ ಮಾಡಿದ ಅವರು ಸಚಿವರಿಗೆ ಮನವಿ ಸಲ್ಲಿಸಿ ರಸ್ತೆ ಅಗಲೀಕರಣದ ಅವಶ್ಯಕತೆಯನ್ನು ಸಚಿವರಿಗೆ ಮನದಟ್ಟು ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಸಚಿವರು ನಾನು ರಸ್ತೆ ಅಗಲೀಕರಣದ ವಿರೋಧಿಯಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.
IMG-20170529-WA0051
ಜಿಲ್ಲಾ ಧಿಕಾರಿಯ ಅಂಗಳದಲ್ಲಿರುವ ಬಂಟ್ವಾಳ ಪೇಟೆ ರಸ್ತೆ ಅಗಲೀಕರಣ ಪ್ರಸ್ತಾಪ ಮತ್ತೆ ಪ್ರತಿಧ್ವನಿಸಿದೆ. ಪೇಟೆ ವರ್ತಕರು ಹಾಗೂ ರಿಕ್ಷಾ ಚಾಲಕರು ಮನವಿ ಸಲ್ಲಿಸುವ ಮೂಲಕ ಹಲವು ವರ್ಷಗಳ ಕನಸಿಗೆ ಜೀವ ತುಂಬಿದ್ದಾರೆ.
ಬಂಟ್ವಾಳ ಪೇಟೆ ರಸ್ತೆ ಅಗಲೀಕರಣ ಇಲ್ಲಿನ ವರ್ತಕರ ಹಲವು ವರ್ಷಗಳ ಹಿಂದಿನ ಬೇಡಿಕೆ. ಕಿರಿದಾದ ರಸ್ತೆಯಿಂದಾಗಿ ಪೇಟೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು, ಇಲ್ಲಿನ ಅಂಗಡಿಗಳಿಗೆ ಬರುವ ಗ್ರಾಹಕರು ತೀವ್ರ ತೊಂದರೆ ಪಡಬೇಕಾಗುತ್ತದೆ. ಸರಿಯಾದ ವಾಹನ ಪಾರ್ಕಿಂಗ್‍ಗೆ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿಯೇ ಪಾರ್ಕಿಂಗ್ ಮಾಡಬೇಕಾದ ಅನಿವಾರ್ಯತೆಯಿಂದ ಪ್ರತಿದಿನ ಟ್ರಾಫಿಕ್ ಜಾಂ, ವಾಹನ ಚಾಲಕರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಅಂಗಡಿಗಳಿಗೆ ಸರಕುಗಳನ್ನು ಹೊತ್ತು ತರುವ ವಾಹನಗಳು ಲೋಡಿಂಗ್, ಅನ್‍ಲೋಡಿಂಗ್ ಮಾಡಲು ತೊಂದರೆ ಪಡಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ಪರಿಹಾರ ಕಾಣಬೇಕಾದರೆ ರಸ್ತೆ ಅಗಲೀಕರಣ ಅಗತ್ಯ ಎನ್ನುವ ಬೇಡಿಕೆಯನ್ನು ವರ್ತಕರು ಹಾಗೂ ರಿಕ್ಷಾ ಚಾಲಕರು ಸ್ಥಳೀಯಾಡಳಿತದ ಮುಂದೆ ಇಡುತ್ತಲೆ ಬಂದಿದ್ದಾರೆ. ಈ ಬಗ್ಗೆ ಹಲವು ಬಾರಿ ಸಭೆಗಳು ನಡೆದಿವೆ. ಪರ- ವಿರೋಧದ ಚರ್ಚೆಯ ನಡುವೆ ಹಲವು ವರ್ಷಗಳಿಂದ ಈ ಬೇಡಿಕೆ ನೆನಗುದಿಗೆ ಬಿದ್ದಿದ್ದು ಪರಿಹಾರ ಕಾಣದ ಜಟಿಲ ಸಮಸ್ಯೆಯಾಗಿ ಉಳಿದುಕೊಂಡಿದೆ.

ಬಿ.ಸಿ.ರೋಡಿನಿಂದ ಬಸ್ತಿಪಡ್ಪು, ಬಂಟ್ವಾಳ ಕೆಳಗಿನ ಪೇಟೆ, ಬಡ್ಡಕಟ್ಟೆ, ಜಕ್ರಿಬೆಟ್ಟು ಮೂಲಕ ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆ ರಾಜ್ಯ ಹೆದ್ದಾರಿಗೆ ಸಂಪರ್ಕ ಪಡೆಯುತ್ತದೆ. ತೀರಾ ಕಿರಿದಾದ ಈ ರಸ್ತೆಯಲ್ಲಿ ಸುಗಮ ವಾಹನ ಸಂಚಾರ ಎನ್ನುವುದು ಕನಸಿನ ಮಾತು. ಟ್ರಾಫಿಕ್ ಪೊಲೀಸ್ ನಿಯೋಜಿಸಿದರೂ ಸುಧಾರಣೆ ಕಾಣದ ಜಟಿಲ ಸಮಸ್ಯೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆಗಾಲದಲಲಿ ರಸ್ತೆಯಲ್ಲೇ ನೀರು ಹರಿದು ಹೋಗುವುದರಿಂದ ಜನರಿಗೆ ನಡೆದಾಡಲು ಅಸಾಧ್ಯವಾಗುತ್ತಿದೆ. ನಾವೂರು, ಸರಪಾಡಿ, ವಾಮದಪದವು, ಮೂಡಬಿದಿರೆ ಮೊದಲಾದೆಡೆಗಳಿಗೆ ಹೋಗುವ ಬಸ್ಸುಗಳು ಈ ಕಿರಿದಾದ ರಸ್ತೆಯನ್ನೇ ಅವಲಂಬಿಸ ಬೇಕಾಗಿದೆ. ಬಿ.ಸಿ.ರೋಡು ಮುಖ್ಯವೃತ್ತದಿಂದ ಜಕ್ರಿಬೆಟ್ಟುವರೆಗಿನ ಈ ರಸ್ತೆ ಅಗ್ನಿಶಾಮಕ ದಳದ ಕಚೇರಿ, ಧ.ಗ್ರಾ. ಯೋ. ಕಚೇರಿ, ಕಲ್ಯಾಣ ಮಂಟಪ, ದೇವಸ್ಥಾನ, ದೈವಸ್ಥಾನ, ಮದರಸ, ಮಸೀದಿ, ನಿರೀಕ್ಷಾಣ ಮಂದಿರ, ಲೋಕೋಪಯೋಗಿ ಇಂಜಿನಿಯರ್‍ಗಳ ಕಚೇರಿ, ಗ್ರಾಮಂತರ ಹಾಗೂ ವೃತ್ತ ನಿರೀಕ್ಷಕರ ಕಚೇರಿ, ಅಂಚೆ ಕಚೇರಿ, ಮೆಸ್ಕಾಂ ಕಚೇರಿ, ಬಂಟ್ವಾಳ ಸರಕಾರಿ ಆರೋಗ್ಯ ಕೇಂದ್ರ, ಪುರಸಭಾ ಕಾರ್ಯಾಲಯ, ನಾಡ ಕಚೇರಿ, ಪುರಸಭೆ ವಾಣಿಜ್ಯ ಸಂಕೀರ್ಣ, ಶಾಲೆ, ಅಂಗನವಾಡಿ ಕೇಂದ್ರ, ರಾಷ್ಟ್ರೀಕೃತ, ಖಾಸಗಿ ಹಾಗೂ ಸಹಕಾರಿ ಬ್ಯಾಂಕು, ಹಿಂದೂ ರುರಭೂಮಿ ಸೇರಿದಂತೆ ಹಲವಾರು ಜುವೆಲ್ಲರಿ ಅಂಗಡಿಗಳು, ಜವಳಿ ಮಳಿಗೆಗೆಗಳು, ಹೊಟೇಲು, ಅಂಗಡಿಗಳಿಗೆ ಸಂಪರ್ಕದ ಕೊಂಡಿಯಾಗಿದೆ. ಇದರ ಮಧ್ಯೆ ಕಾರು ಪಾರ್ಕ್, ಬಸ್ ಪಾರ್ಕ್, ಆಟೋ ರಿಕ್ಷಾ ಪಾರ್ಕ್, ದ್ವಿಚಕ್ರ ವಾಹನಗಳ ಪಾರ್ಕ್, ಖಾಸಗಿ ವಾಹನಗಳ ಪಾರ್ಕ್ ಸೇರಿದಂತೆ ಅಂಗಡಿಗಳಿಗೆ ಸರಕು ತರವ ವಾಹನಗಳ ಪಾರ್ಕಿಂಗ್ ರಸ್ತೆಯಲ್ಲಿಯೇ ನಡೆಯುತ್ತದೆ. ಇದರಿಂದಾಗಿ ಇಷ್ಟು ವರ್ಷಗಳ ಕಾಲ ಸಾರ್ವಜನಿಕರು ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಕೆಲ ಅಂಗಡಿದಾರರು ರಸ್ತೆ ವರೆÀಗೂ ಅಂಗಡಿ ಸಾಮಾನುಗಳನ್ನು ವಿಸ್ತರಿಸಿ ಇಡುವುದರಿಂದ ರಸ್ತೆ ಯಾವುದು, ಅಂಗಡಿ ಯಾವುದು ಎನ್ನುವಷ್ಟರವರೆಗೆ ಅವ್ಯವಸ್ಥೆಯ ಆಗರವಾಗಿದೆ. ರಸ್ತೆ ಅಗಲೀಕರಣವೇ ಇದಕ್ಕೆ ಶಾಶ್ವತ ಪರಿಹಾರ ಎನ್ನುವುದು ಇಲ್ಲಿನ ಬಹುತೇಕ ವರ್ತಕರು ಹಾಗೂ ವಾಹನ ಚಾಲಕರ ಅಭಿಪ್ರಾಯವಾಗಿದ್ದು ಇವರ ಮನವಿಗೆ ಜಿಲ್ಲಾಡಳಿತ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಬಂಟ್ವಾಳ ಪೇಟೆ ವಟಪುರ ಕ್ಷೇತ್ರ ವೆಂದೆ ಗುರುತಿಸಿಕೊಂಡಿರುವ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಹಾಗೂ ಮಹಾಲಿಂಗೇಶ್ವರ ದೇವಸ್ಥಾನಗಳಿಂದ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಪೇಟೆಯ ಒಂದು ಪಾರ್ಶದಲ್ಲಿ ಜಿಲ್ಲೆಯ ಜೀವನದಿ ನೇತ್ರಾವತಿ ಮೈಯೊಡ್ಡು ಹರಿಯುತ್ತಿದ್ದಾಳೆ. ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಜಕ್ರಿಬೆಟ್ಟು ಜಂಕ್ಷನ್‍ವರೆಗೆ 35ಕ್ಕೂ ಅಧಿಕ ಕಚೇರಿಗಳು ಇವೆ. ದೇವಸ್ಥಾನ, ದೈವಸ್ಥಾನ, ಮಸೀದಿ, ಮಂದಿರಗಳಿವೆ. ಇಂತಹ ಪೇಟೆಯ ಸಮಗ್ರ ಅಭಿವೃದ್ದಿಗೆ ತೊಡಕ್ಕಾಗಿರುವುದು ಕಿರಿದಾದ ರಸ್ತೆ. ರಸ್ತೆ ಅಗಲೀಕರಣಗೊಂಡರೆ ಕೆಲ ವ್ಯಾಪರಿಗಳಿಗೆ ತೊಂದರೆಯಾಗುವುದುದಂತೂ ಸತ್ಯ. ಅದರ ಜೊತೆಗೆ ಸಮಸ್ಯೆಗಳಿಂದ ನಲುಗಿರುವ ಬಂಟ್ವಾಳ ಪೇಟೆ ಸಮಸ್ಯೆ ಮುಕ್ತಗೊಂಡು ಸುಂದರ ನಗರವಾಗಿ ರೂಪುಗೊಳ್ಳುವುದೂ ಅಷ್ಟೇ ಸತ್ಯ.

ಬಂಟ್ವಾಳ ಪೇಟೆ ರಸ್ತೆ ಅಗಲೀಕರಣ ಬಗ್ಗೆ ಹಲವು ಬಾರಿ ಸಭೆ, ಚರ್ಚೆಗಳು ನಡೆದಿವೆ. ಆದರೆ ಅದರಿಂದ ಈವರೆಗೆ ಯಾವುದೇ ಪ್ರಯೋಜನ ಲಭಿಸಲದ ಹಿನ್ನಲೆಯಲ್ಲಿ ಹಾಗೂ ಇಲ್ಲಿ ಜನರನ್ನು ಕಾಡುವ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಬಂಟ್ವಾಳ ಪೇಟೆ ವರ್ತಕರು ಹಾಗೂ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ- ವಿಶ್ವನಾಥ ಚೆಂಡ್ತಿಮಾರ್, ರಿಕ್ಷಾ ಚಾಲಕ ಬಡ್ಡಕಟ್ಟೆ.

By Suddi9

Leave a Reply

Your email address will not be published. Required fields are marked *