ಮಿನಿ ವಿಧಾನಸೌಧ, ಪ್ರವಾಸಿ ಮಂದಿರ, ಟ್ರೀ ಪಾರ್ಕ್, ಕೆಇಬಿ ಕಟ್ಟಡ, ಸರಕಾರಿ ಬಸ್ ನಿಲ್ದಾಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ
ಬಂಟ್ವಾಳ, : ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ ತಿಂಗಳ ಅಂತ್ಯದಲ್ಲಿ ಬಂಟ್ವಾಳಕ್ಕೆ ಆಗಮಿಸುವ ನಿರೀಕ್ಷೆ ಇದ್ದು ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮುತುವರ್ಜಿಯಿಂದ ಅವರ ತವರು ಕ್ಷೇತ್ರವಾದ ಬಂಟ್ವಾಳದಲ್ಲಿ ನಿರ್ಮಾಣಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅವರ ಕನಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಅದರೆ ಉದ್ಘಾಟನೆಗೆ ದಿನಾಂಕ ನಿಗದಿಗಾಗಿ ಸಚಿವ ರಮಾನಾಥ ರೈ ಒಂದೆರಡು ಬಾರಿ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರಾದರೂ ಇದುವರೆಗೂ ದಿನಾಂಕ ನಿಗದಿಯಾಗಿಲ್ಲ. ಮೇ ಅಂತ್ಯದಲ್ಲಿ ಬಂಟ್ವಾಳಕ್ಕೆ ಆಗಮಿಸಲು ದಿನಾಂಕ ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ದಿವಸ ಬಂಟ್ವಾಳದಲ್ಲೇ ಇರಲಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಅಭಿವೃದ್ಧಿ ಕಾಮಗಾರಿಯಲ್ಲಿ ಪ್ರಮುಖವಾಗಿ ಮಿನಿ ವಿಧಾನಸೌಧ ಉದ್ಘಾಟನೆಯಾಗಿದೆ. ಬಿ.ಸಿ.ರೋಡ್ ಹಳೆ ತಾಲೂಕು ಕಚೇರಿಯನ್ನು ಧರೆಗುರುಳಿಸಿ ಸುಸಜ್ಜಿತ, ಸುಂದರವಾಗಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧ ಕಟ್ಟಡದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಇನ್ನೇನು ಎರಡು ವಾರದಲ್ಲಿ ಕಟ್ಟಡದ ಕಾಮಗಾರಿ ಸಂಪೂರ್ಣ ಮುಕ್ತಾಯಗೊಳ್ಳಲಿದೆ.

1
ಬಿ.ಸಿ.ರೋಡಿಗೆ ಹೊಸ ಮೆರಗು ನೀಡುತ್ತಿರುವ ಮಿನಿ ವಿದಾನಸೌಧ ಲೋಕಾರ್ಪಣೆ ಬಳಿಕ ತಾಲೂಕು ಕಚೇರಿ, ಸಬ್ ರಿಜಿಸ್ಟ್ರಾರ್, ಗ್ರಾಮಕರಣಿಕ, ಸರ್ವೇ ಇಲಾಖೆ, ನೆಮ್ಮದಿ ಕೇಂದ್ರ, ಭೂದಾಖಲೆ ನಿರ್ದೇಶಕರ ಕಚೇರಿ, ನಾಡಕಚೇರಿ, ತಹಶೀಲ್ದಾರ್ ಕಚೇರಿ ಸಹಿತ ತಾಲೂಕಿನ ಎಲ್ಲ ಪ್ರಮುಖ ಕಚೇರಿಗಳು ಇಲ್ಲಿ ಕಾರ್ಯಾ ನಿರ್ವಹಿಸಲಿದೆ. ಪ್ರಸ್ತುತ ಅಲ್ಲೊಂದು, ಇಲ್ಲೊಂದು ಬಿಡಿ ಬಿಡಿಯಾಗಿ ತಾಲೂಕು ಕಚೇರಿಯ ವಿವಿಧ ಶಾಖೆಗಳು ಚದುರಿರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಮುಂದೆ ಒಂದೇ ಕಟ್ಟಡದಲ್ಲಿ ಎಲ್ಲ ಶಾಖೆಗಳು ಕಾರ್ಯ ನಿರ್ವಹಿಸಲಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲಕರವಾಗಲಿದೆ.
ಜಿಲ್ಲೆಯಲ್ಲೇ ಅತೀ ದೊಡ್ಡದಾಗಿರುವು ಈ ಮಿನಿ ವಿಧಾನಸೌಧ ಸುಮಾರು 33 ಸೆಂಟ್ಸ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ. ನೆಲ, ಮೊದಲ, ಎರಡನೆ ಮಹಡಿಯನ್ನು ಹೊಂದಿದ್ದು ಪ್ರತಿಯೊಂದು ಮಹಡಿ 1075 ಚದರ ಮೀಟರ್‍ನಂತೆ ಒಟ್ಟು 3225 ಚ.ಮೀ. ವಿಸ್ತೀರ್ಣ ಇದೆ. ನೆಲ ಅಂತಸ್ತಿನಲ್ಲಿ ತಾಲೂಕು ಸಬ್ ಟ್ರೆಜರಿ ಕಚೇರಿ, ತಾಲೂಕು ಕಚೇರಿ ಇದ್ದರೆ ಮೊದಲ ಅಂತಸ್ತಿನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ, ಭೂ ದಾಖಲೆ ನಿರ್ದೇಶಕರ ಕಚೇರಿ, ನಾಡ ಕಚೇರಿ, ತಾಲೂಕು ಕಚೇರಿ ಇದೆ. ಎರಡನೆ ಅಂತಸ್ತಿನಲ್ಲಿ ವಾಣಿಜ್ಯ ತೆರಿಗೆ ಕಚೇರಿ, ಭೂ ದಾಖಲೆ ಹಾಗೂ ತಾಲೂಕು ಕಚೇರಿಗೆ ಸಂಬಂಧಿಸಿದ ಇತರ ಕಚೇರಿಗಳು. ಅಲ್ಲದೆ 230 ಚ.ಮೀ. ವಿಸ್ತೀರ್ಣದ ವಿಶಾಲ ರೆಕಾರ್ಡ್ ಕೊಠಡಿಯನ್ನು ಹೊಂದಿದೆ.
ಹಾಗೆಯೇ ಬಂಟ್ವಾಳದಲ್ಲಿ ನಿರ್ಮಾಣವಾಗಿರುವ ನೂತನ ಪ್ರವಾಸಿ ಮಂದಿರ ಹಾಗೂ ಅದರ ಪಕ್ಕದಲ್ಲೇ ನಿರ್ಮಾಣವಾಗಿರುವ ಟ್ರೀ ಪಾರ್ಕ್, ಬಿ.ಸಿ.ರೋಡ್ ಕೈಕುಂಜೆಯಲ್ಲಿ ನಿರ್ಮಾಣವಾಗಿರುವ ಕೆಇಬಿ ಕಟ್ಟಡ, ಬಿ.ಸಿ.ರೋಡ್ ಸರಕಾರಿ ಬಸ್ ನಿಲ್ದಾಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ. ಕೆಲವು ತಿಂಗಳ ಹಿಂದೆ ಬಂಟ್ವಾಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿ.ಸಿ.ರೋಡ್ ನಾರಾಯಣಗುರು ವೃತ್ತದ ಬಳಿ ನಿರ್ಮಾಣವಾಗಿರುವ ಜೋಡುಮಾರ್ಗ ಉದ್ಯಾನವನವನ್ನು ಲೋಕಾರ್ಪಣೆಗೊಳಿಸಿದ್ದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಕನಸಿನ ಯೋಜನೆಯಾದ ಮಿನಿ ವಿಧಾನಸೌಧ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಪ್ರವಾಸಿ ಮಂದಿರ, ಕೆಇಬಿ ಕಟ್ಟಡ, ಟ್ರೀ ಪಾರ್ಕ್, ಸರಕಾರಿ ಬಸ್ ನಿಲ್ದಾಣದವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಉದ್ಘಾಟಿಸುವ ಬಗ್ಗೆ ಯೋಚಿಸಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಯವರಲ್ಲಿ ಚರ್ಚಿಸಲಾಗಿದ್ದು ನಿರ್ದಿಷ್ಠ ದಿನಾಂಕ ನಿಗದಿಯಾಗಿಲ್ಲ. ಮೇ ಅಂತ್ಯದಲ್ಲಿ ಅಥವಾ ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಾಂಕ ನಿಗದಿ ಪಡಿಸಿ ಬಂಟ್ವಾಳಕ್ಕೆ ಆಗಮಿಸಿ ಎಲ್ಲ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಲಿದ್ದಾರೆ.
– ಬಿ.ರಮಾನಾಥ ರೈ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ

By Suddi9

Leave a Reply

Your email address will not be published. Required fields are marked *