ಬಂಟ್ವಾಳ: ಖ್ಯಾತ ರಂಗಭೂಮಿ ಕಲಾವಿದ, ಕಿರುತೆರೆ ನಿರ್ದೇಶಕ ಕೊಲ್ನಾಡು ಗ್ರಾಮದ ಮಂಚಿ ಶಿಂಗಾರಕೋಡಿ ನಿವಾಸಿ ಕೊರಗಪ್ಪ ಶಿಂಗಾರಕೋಡಿ(51) ಗುರುವಾರ ಸಂಜೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.
ತನಿಯಾ ಮತ್ತು ಸೀತು ದಂಪತಿಯ ಪುತ್ರನಾಗಿರುವ ಕೊರಗಪ್ಪ ಶಿಂಗಾರಕೋಡಿರವರು ಮಂಚಿಯಲ್ಲಿ ವೀಣಾ ಪ್ರಿಂಟರ್ಸ್ ಎಂಬ ಹೆಸರಿನ ಪ್ರಿಂಟಿಂಗ್ ಪ್ರೆಸ್‍ನ್ನು ನಡೆಸುತ್ತಿದ್ದರು. ಇವರಿಗೆ ಗುರುವಾರ ಮಧ್ಯಾಹ್ನ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ದೇರಳಕಟ್ಟೆ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆಯ ವೇಳೆಗೆ ಅವರು ಕೊನೆಯುಸಿರು ಎಳೆದಿದ್ದಾರೆ. ಪತ್ನಿ ವಿಜಯಕುಮಾರಿ, ಮಕ್ಕಳಾದ ವೀಣಾ, ವಿಮಲೇಶ್ ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

IMG-20170504-WA0050

IMG-20170504-WA0036 (1)
ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಅವರು ಬಂಟ್ವಾಳ ಭೈರ ಸಂಘದ ಸ್ಥಾಪಕ ಕಾರ್ಯದರ್ಶಿ ಆಗಿಯೂ ಕಾರ್ಯ ನಿರ್ವಹಿಸಿದ್ದರು. ರಂಗಭೂಮಿಯಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಮಂಚಿಯಲ್ಲಿ ಬೊಲ್ಪು ಕಲಾ ತಂಡವೊಂದನ್ನು ಸ್ಥಾಪಿಸಿದ್ದರು.
ನಾಟಕ, ಕಿರುತೆರೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದ ಅವರು ಕೆಲ ಸಮಯದ ಹಿಂದೆ ದೂರದರ್ಶನದಲ್ಲಿ ಇವರು ನಿರ್ದೇಶಿಸಿದ ‘ಪಾಪದ ಪಿರವು’ ದಾರವಾಹಿಯು ಪ್ರಸಾರಗೊಂಡಿತ್ತು. ಇಪ್ಪತ್ತಕ್ಕೂ ಹೆಚ್ಚು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದ ಇವರ ‘ಬೆಳಕು’, ‘ತೆಂಕರ’ ಎಂಬ ಪುಸ್ತಕಗಳು ಪ್ರಕಟವಾಗಿದ್ದರೆ ‘ಪಾಪದ ಪಿರವು’, ‘ಮೂಲು ದಾನೆ ಇಂಚ’, ‘ಭೈರನ ಬದ್‍ಕ್’ ಮೊದಲಾದ ಇವರ ನಾಟಕಗಳು ಜನಪ್ರಿಯಗೊಂಡಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯುವಜನ ಕ್ರೀಡಾ ಇಲಾಖೆಯ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಇವರಿಗೆ ಸಂದಿದೆ. ರಂಗ ಭೂಮಿ ಮಾತ್ರವಲ್ಲದೆ ಜಾನಪದ ಕ್ಷೇತ್ರದಲ್ಲೂ ಇವರು ಸಾಧನೆ ಮಾಡಿರುತ್ತಾರೆ. ಇವರ ಅಕಾಲಿಕ ನಿಧನಕ್ಕೆ ರಂಗಭೂಮಿ ಕಲಾವಿದರು ಸೇರಿದಂತೆ ಹಲವಾರು ಗಣ್ಯರು, ಸ್ಥಳೀಯ ಮುಖಂಡರು ಶೋಕ ವ್ಯಕ್ತಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *