ಬಂಟ್ವಾಳ: ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಹಾಗೂ ಎಲ್ಲೆಂದರಲ್ಲಿ ಮಣ್ಣಿನ ರಾಶಿ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅಡಚಣೆ ಉಂಟು ಮಾಡುತ್ತಿದ್ದರೆ ಇದೀಗ ನೀರಿನ ಪೈಪ್ ಮತ್ತೆ ಒಡೆದು ಬಿ.ಸಿ.ರೋಡ್ ರಸ್ತೆಯಲ್ಲೇ ಹರಿದುಹೋಗುತ್ತಿದೆ.
ಬಿ.ಸಿ.ರೋಡ್ ಹಳೇ ಎಲ್ಲೈಸಿ ಕಚೇರಿ ಇದ್ದ ಬಳಿ ತಿರುವಿನಲ್ಲಿ ರಸ್ತೆಯೊಂದು ಹೋಗುತ್ತಿದ್ದು ಅದರ ಜಂಕ್ಷನ್ ನಲ್ಲಿರುವ ನೀರಿನ ಪೈಪ್ ಕಳೆದ ಒಂದೆರಡು ತಿಂಗಳಿಂದ ಆಗಾಗ್ಗೆ ಸಮಸ್ಯೆ ನೀಡುತ್ತಿದೆ. ಇದೇ ವೇಳೆ ವಿವಿಧ ಇಲಾಖೆಗಳಿಗೆ ಸಂಬಂಸಿ ರಸ್ತೆ ಬದಿಯಲ್ಲಿ ಮಣ್ಣು ಅಗೆದುಹಾಕುವ ಕಾರ್ಯಗಳು ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ಕಾರಣ ಪೈಪ್ ಗೆ ಘಾಸಿ ಉಂಟಾಗಿ ಒಡೆದು ಹೋಗಿತ್ತು. ಈ ಕುರಿತು ಸಾಕಷ್ಟು ದೂರುಗಳನ್ನು ಸ್ಥಳೀಯರು ನೀಡಿದ್ದರೂ ಒಮ್ಮೆ ಸರಿಯಾಗುವ ಪೈಪ್ ಮತ್ತೊಮ್ಮೆ ಒಡೆದು ಹೋಗುತ್ತಿದ್ದು, ಬುಧವಾರವಂತೂ ವಿಪರೀತಕ್ಕೆ ಹೋಯಿತು. ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಬಿ.ಸಿ.ರೋಡ್ ಹೆದ್ದಾರಿಯಲ್ಲಿಡೀ ಹೊಳೆಯಂತೆ ನೀರು ಹರಿದು ಹೋಯಿತು. ಈ ಬಗ್ಗೆ ದೂರುಗಳು ಹೋದ ಬಳಿಕ ನೀರು ಸರಬರಾಜನ್ನು ಸ್ಥಗಿತಗೊಳಿಸಿ ತಾತ್ಕಾಲಿಕವಾಗಿ ಸಮಸ್ಯೆಗೆ ಉಪಶಮನ ನೀಡಲಾಯಿತು.
ಕೆಳವು ದಿನಗಳಿಂದ ಬಿ.ಸಿ.ರೋಡಿನಲ್ಲಿ ನಡೆಯುತ್ತಿರುವ ಅಗೆತದಿಂದಾಗಿ ರಸ್ತೆಯಾಗಲೀ ಕಾಲು ದಾರಿಯಾಗಲೀ ಸುಸ್ಥಿತಿಯಲ್ಲಿರದೆ ಸಾರ್ವಜನಿಕರು ಹಾಗೂ ವಾಹನ ಸವಾರರು ಸಾಕಷ್ಟು ಅನುಭವಿಸುತ್ತಿದ್ದಾರೆ. ಈ ನಡುವೆ ಹೆದ್ದಾರಿಯ ರಾಜ ರಸ್ತೆಯಲ್ಲಿ ಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ತಾತ್ಕಾಲಿಕವಾಗಿ ಚರಂಡಿ ತೋಡಿದ್ದರೂ ಕೊಳಚೆ ನೀರು ಶೇಕರಣೆಯಾಗಿ ಪರಿಸರವಿಡೀ ದುರ್ವಾಸನೆ ಬೀರುತ್ತಿದೆ. ಪುರಸಭೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದತ್ತ ಬೆರಳು ತೋರಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಇತ್ತ ಸುಳಿಯುತ್ತಿಲ್ಲ. ಮೊದಲ ಮಳೆಗೆಯೇ ಬಿ.ಸಿ.ರೋಡಿನ ಅವ್ಯವಸ್ಥೆ ದರ್ಶನವಾಗಿತ್ತು. ಆದರೂ ಇದನ್ನು ಸರಿಪಡಿಸಿ ಸುಸ್ಥಿತಿಗೆ ತರುವತ್ತ ಯಾರೊಬ್ಬರೂ ಮನಸ್ಸು ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ.


