ಬಂಟ್ವಾಳ: ಕಳೆದ ಫೆಬ್ರವರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಪುರಸಭೆ ಮಂಡಿಸಿರುವ ಬಜೆಟ್ ನಲ್ಲಿ ಲೋಪದೋಷಗಳಿವೆ ಎಂಬ ಕುರಿತು ಸಲ್ಲಿಸಿದ ದೂರಿನನ್ವಯ ನಡೆಸಿದ ತನಿಖೆಯಲ್ಲಿ ವ್ಯತ್ಯಾಸ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಭೆಗೆ ಆಗಮಿಸಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷ ಸದಸ್ಯ ದೇವದಾಸ ಶೆಟ್ಟಿ ಗುರುವಾರ ನಡೆದ ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಧರಣಿ ಕುಳಿತ ಪ್ರಸಂಗ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ರಾಮಕೃಷ್ಣ ಆಳ್ವ , ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮುಖ್ಯಾಧಿಕಾರಿ ಸುಧಾಕರ ಸದಸ್ಯ ಇಕ್ಬಾಲ್ ಗೂಡಿನಬಳಿ ಸೇರಿದಂತೆ ಸದಸ್ಯರು ಧರಣಿ ಕುಳಿತ ದೇವದಾಸ ಶೆಟ್ಟಿಯವರನ್ನು ಮನವೊಲಿಸಲು ಯತ್ನಿಸಿದರಾದರೂ ಪಟ್ಟು ಬಿಡದ ದೇವದಾಸ ಶೆಟ್ಟಿ ಧರಣಿ ಮುಂದುವರಿಸಿದರು. ಈ ಹಂತದಲ್ಲಿ ಸಭಾಧ್ಯಕ್ಷರು ಪ್ರತಿಕ್ರಿಯಿಸಿ ಸದಸ್ಯರು ಧರಣಿ ಕುಳಿತುಕೊಳ್ಳುವ ಬಗ್ಗೆ ಲಿಖಿತವಾಗಿ ಮನವಿ ಸಲ್ಲಿಸಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಇದೇ ವೇಳೆ ಸದಸ್ಯರಾದ ಬಿ.ಮೋಹನ್, ವಾಸು ಪೂಜಾರಿ ಮತ್ತಿತರ ಸದಸ್ಯರು ಸಭೆ ಮುಂದುವರಿಸಬೇಕು ಇಲ್ಲ ಯೋಜನಾ ನಿರ್ದೇಶಕರು ಬರುವ ತನಕ ಮುಂದೂಡುವಂತೆ ಒತ್ತಾಯಿಸಿದರು. ದೇವದಾಸ ಶೆಟ್ಟಿಯವರು ಧರಣಿಯ ಬಗ್ಗೆ ಲಿಖಿತ ಮನವಿ ನೀಡದ ಹಿನ್ನಲೆಯಲ್ಲಿ ಸಭೆಯನ್ನು ಮುಂದುವರಿಸುವಂತೆ ರೂಲಿಂಗ್ ನೀಡಿದರು. ಅದರಂತೆ ಸಭೆ ಮುಂದುವರಿಯಿತು. ಇದನ್ನು ಬಲವಾಗಿ ಆಕ್ಷೇಪಿಸಿದ ಹಿರಿಯ ಸದಸ್ಯ ಗೋವಿಂದ ಪ್ರಭು ಅವರು ಸದಸ್ಯರಾದ ಸುಗುಣಾ ಕಿಣಿ, ಭಾಸ್ಕರ್, ಸಂಧ್ಯಾ ನಾಯ್ಕ್ ಅವರೂ ದೇವದಾಸ ಶೆಟ್ಟಿ ಅವರ ಜೊತೆಗೂಡಿ ಧರಣಿಗೆ ಸಾಥ್ ನೀಡಿದರು.ಒಂದೆಡೆ ಧರಣಿ ನಡೆಯುತ್ತಿದ್ದಂತೆ ಸಭೆ ಮುಂದುವರಿದು ವಂದನಾರ್ಪಣೆಯೂ ನಡೆಯಿತು. ಬಿಜೆಪಿ ಸದಸ್ಯರು ಯೋಜನಾ ನಿರ್ದೇಶಕರು ಆಗಮಿಸಬೇಕು ಎಂದು ಪಟ್ಟುಹಿಡಿದು ಉಪವಾಸ ಕುಳಿತರು. ಸಭೆ ಮುಗಿದರೂ ಧರಣಿ ನಿಲ್ಲಲಿಲ್ಲ.
ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದೇವದಾಸ ಶೆಟ್ಟಿ, ಪುರಸಭೆ ಮಂಡಿಸಿದ ಬಜೆಟ್ ನ ಹಣಕಾಸಿನ ಅಂಕಿ ಅಂಶದಲ್ಲಿ ಕೋಟ್ಯಂತರ ರೂಪಾಯಿ ವ್ಯತ್ಯಾಸವಾಗಿರುವ ಕುರಿತು ಅನುಮಾನಗಳು ಇದ್ದು, ಈ ಕುರಿತು ತಾನು ನೀಡಿದ ದೂರಿನ ತನಿಖೆ ಪುತ್ತೂರಿನ ಲೆಕ್ಕಾಧಿಕಾರಿಯವರಿಂದ ಆಗಿದೆ. ಇದರಲ್ಲಿ ಲೋಪದೋಷಗಳು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಯೋಜನಾ ನಿರ್ದೇಶಕರು ಆಗಮಿಸಿ ಸ್ಪಷ್ಟ ವಿವರಣೆ ನೀಡಬೇಕು. ಸಭೆಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಯೋಜನಾ ನಿರ್ದೇಶಕರು ಮಂಗಳೂರಿನ ಪಿಲಿಕುಲದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಅವರು ತಕ್ಷಣ ಬರಲು ಅಸಾಧ್ಯ , ಇದಕ್ಕಾಗಿ ವಿಶೇಷ ಸಭೆ ಕರೆಯೋಣ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ತಿಳಿಸಿದರು. ಆದರೆ ಬಿಜೆಪಿ ಐವರು ಸದಸ್ಯರು ಸದನದ ಬಾವಿಯಲ್ಲಿ ಕುಳಿತು ಧರಣಿ ಮುಂದುವರಿಸಿದರು.
. ಪುರಸಭಾ ಮೀಟಿಂಗ್ ಹಾಲ್‍ಗೆ ಎ.ಸಿ.ಅಳವಡಿಸುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು. ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿದ್ದಾರೆ. ಹಲವಾರು ಕಡೆ ಸರಕಾರಿ ಭೂಮಿ ಅತಿಕ್ರಮಣಗೊಳ್ಳುತ್ತಿವೆ ಎಂದು ಗಮನ ಸೆಳೆದ ವಾಸು ಪೂಜಾರಿ, ರೆಕಾರ್ಡ್ ರೂಮ್ ಸ್ಥಿತಿ ಶೋಚನೀಯವಾಗಿದ್ದು ಮೊದಲು ಅದನ್ನು ಸರಿಪಡಿಸಿ ಸಾಧನೆ ಮಾಡಿ ಎಂದು ಸಭೆಯ ಗಮನ ಸೆಳೆದರು.
ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದ ಬಳಿ ಇರುವ ಸರಕಾರಿ ಜಾಗದಲ್ಲಿ ಆರ್.ಟಿ.ಒ. ಕಚೇರಿ ಹಾಗೂ ಅರಸು ಭವನ ನಿರ್ಮಿಸಲು ಜಾಗ ಮಂಜೂರುಗೊಳಿಸುವ ಕುರಿತು ತಹಶೀಲ್ದಾರ್ ಬರೆದಿರುವ ಪತ್ರದ ಕುರಿತು ಚರ್ಚೆ ನಡೆಯಿತು. ಆ ಜಾಗದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸುವುದೇ ಸೂಕ್ತ ಎಂದು ಸದಾಶಿವ ಬಂಗೇರ ನೀಡಿದ ಸಲಹೆಯನ್ನು ಪರಿಗಣಿಸಲಾಯಿತು.
ಮಫತ್ ಲಾಲ್ ಲೇಔಟ್ ನಲ್ಲಿ ಅತಿಕ್ರಮಣ ಮಾಡಿದ ಜಾಗವನ್ನು ತೆರವುಗೊಳಿಸಬೇಕು ಎಂದು ಮಹಮ್ಮದ್ ಶರೀಫ್ ಆಗ್ರಹಪಡಿಸಿದರು. ಈ ಸಂದರ್ಭ ವಿಚಾರವನ್ನು ಜಿಲ್ಲಾ ಸರ್ವೆಗೆ ಬರೆಯುವಂತೆ ಸದಾಶಿವ ಬಂಗೇರ ಸೂಚಿಸಿದರು. ಸದಸ್ಯರಾದ ಮೊನೀಶ್ ಆಲಿ, ಗಂಗಾಧರ್, ವಸಂತಿ ಚಂದಪ್ಪ, ಚಂಚಲಾಕ್ಷಿ, ಜಗದೀಶ ಕುಂದರ್, ನಾಮನಿರ್ದೇಶಿತ ಸದಸ್ಯ ಲೋಕೇಶ ಸುವರ್ಣ ಮೊದಲಾದವರು ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಕಳೆದ ಕೆಲವು ತಿಂಗಳಿಂದ ಪುರಸಭೆ ಸಾಮಾನ್ಯ ಸಭೆಗೆ ಬಂದರೂ ನಾಮನಿರ್ದೇಶಿತ ಸದಸ್ಯರೊಂದಿಗೆ ದೂರ ಕುಳಿತು, ಮೌನವಾಗಿ ಬಂದು ಹೋಗುತ್ತಿದ್ದ ಆಡಳಿತ ಪಕ್ಷದ ಸದಸ್ಯ ಸದಾಶಿವ ಬಂಗೇರ ಅವರು ಈ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತು ಅಧ್ಯಕ್ಷರಿಗೆ ಸಲಹೆ ಸೂಚನೆಯನ್ನು ನೀಡಿ ಗಮನ ಸೆಳೆದರು.
ಇದೇ ವೇಳೆ ಧರಣಿ ಕುಳಿತ ಸದಸ್ಯ ದೇವದಾಸ ಶೆಟ್ಟಿ ಸುದ್ದಿಗಾರರೋಂದಿಗೆ ಮಾತನಾಡಿ ಪುರಸಭೆ ಬಜೆಟ್ ಲೋಪದೋಷಗಳ ಕುರಿತು ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ನಾನು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಬಿ.ಸಿ.ರೋಡಿನಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮದ ವೇಳೆ ಇದನ್ನು ಅವರ ಗಮನ ಸೆಳೆಯುವೆ ಎಂದು ತಿಳಿಸಿದರು.
