ಮೂಡುಬಿದಿರೆ :ಹಳೆಯ ಮೂರು ಒನ್‍ವೇಗಳು, ಆರು ತಿಂಗಳ ಹಿಂದೆ ಮತ್ತೆ ಮೂರು ಹೊಸ ಒನ್‍ವೇಗಳು. ಪೇಟೆಯಲ್ಲಿ ವಾಹನದಟ್ಟನೆ ಕಡಿಮೆ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಒನ್‍ವೇ ನಿಯಮ ಮೂಡುಬಿದಿರೆಯಲ್ಲಿ ಪಾಲನೆಗಳಲ್ಲ ಎಂಬಂತಾಗಿದೆ. ಒನವೇನಲ್ಲಿ ದ್ವಿಮುಖ ಸಂಚಾರವಿರುವುದರಿಂದ ಈ ನಿಯಮ ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎಂಬಂತಾಗಿದೆ.
*ಹಿಂದಿನ ಒನ್‍ವೇ ಹಿಂದೆ:
ಮೂಡುಬಿದಿರೆಯಲ್ಲಿ ಹಿಂದೆ ಬಸ್‍ನಿಲ್ದಾಣ ಆಗಮನ, ನಿರ್ಗಮನ ಹಾಗೂ ಅಮರಶ್ರೀ ಟಾಕೀಸು ಬಳಿಯಿಂದ ಬೆಳ್ತಂಗಡಿ,ಬಂಟ್ವಾಳದ ಕಡೆಗೆ ಹೋಗುವ ಶಾರ್ಟ್‍ಕಟ್ ರಸ್ತೆಗಳನ್ನು ಒನ್‍ವೇ ನಿಯಮ ಜಾರಿಗೊಳಿಸಲಾಗಿತ್ತು. ಆದರೆ ನಾಮ್‍ಕೇ ವಾಸ್ತೆ ಎಂಬಂತಾಗಿದ್ದ ಈ ಒನ್‍ವೇಗಳಲ್ಲಿ ರಾಜಾರೋಷವಾಗಿ ದ್ವಿಮುಖ ಸಂಚಾರವಿದೆ. ಅಮರಶ್ರೀ ಟಾಕೀಸು ಎದುರಿನಲ್ಲಿರುವ ರಸ್ತೆಯ ಬಳಿಯಿಂದ ವಾಹನಗಳು ಹೋಗಲು ಅವಕಾಶವಿದೆ. ಆದರೆ ಮೂಡುಬಿದಿರೆ ಪೇಟೆಯಿಂದ ಬೆಳ್ತಂಗಡಿ, ಬಂಟ್ವಾಳ ಕಡೆಗೆ ಹೋಗುವ, ಬರುವ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಒನ್‍ವೇ ನಿಯಮ ಉಲ್ಲಂಘಿಸಿಯೇ ಸಂಚಾರ ಮಾಡುತ್ತಿವೆ. ಅಮರಶ್ರೀ ಟಾಕೀಸು ಬಳಿಯಿಂದ ನಿರ್ಗಮಿಸುವ ವಾಹನಗಳು ತಿರುವು ಪಡೆಯುವುದರಿಂದ, ನಿಯಮ ಉಲ್ಲಂಘಿಸಿ ಬರುವ ವಾಹನಗಳು ಸುಲಭದಲ್ಲಿ ಗೋಚರವಾಗುವುದಿಲ್ಲ. ಇದು ಅಪಘಾತಕ್ಕೂ ಕಾರಣವಾಗಿದೆ. ಮೂಡುಬಿದಿರೆ ಬಸ್‍ನಿಲ್ದಾಣದ ಪ್ರವೇಶಧ್ವಾರವು ಇಳಿಜಾರಿನಿಂದ ಕೂಡಿದ್ದು, ಇಲ್ಲಿ ಬಸ್ ಹಾಗೂ ಇತರ ವಾಹನಗಳಿಗೆ ಪ್ರವೇಶಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಇಲ್ಲಿಂದ ಮುಖ್ಯರಸ್ತೆಗೆ ವಾಹನಗಳು ಇಳಿಯುವುದನ್ನು ನಿಷೇಧಿಸಲಾಗಿತ್ತು. ಆದರೆ ನಿಯಮವನ್ನು ಗಾಳಿಗೆ ತೂರಿ ಇಲ್ಲೂ `ಒನ್‍ವೇ’ಯನ್ನು ಮೂಲೆಗುಂಪು ಮಾಡಲಾಗಿದೆ. ಬಸ್ ನಿಲ್ದಾಣದ ನಿರ್ಗಮನ ರಸ್ತೆಯನ್ನು ಕೂಡ ಒನವೇ ಮಾಡಲಾಗಿದ್ದು, ಬಸ್ ಹಾಗೂ ಇತರ ವಾಹನಗಳು ಬಸ್ ನಿಲ್ದಾಣದಿಂದ ತೆರಳಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಆದರೆ ಇಲ್ಲೂ `ಒನ್‍ವೇ’ ಹೆಸರಿಗೆ ಮಾತ್ರ ಎಂಬಂತಾಗಿದೆ.
*ಹೊಸ `ಒನ್‍ವೇ’ಸ್ಟ್:
2015ರಲ್ಲಿ ಪುರಸಭಾ ಅಧಿವೇಶನಗಳಲ್ಲಿ ಹಾಗೂ ಸಂಚಾರಿ ನಿಯಮಗಳ ಕುರಿತು ವಿಶೇಷ ಸಭೆಗಳಲ್ಲಿ ಹಳೆಯ ಒನ್‍ವೇಗಳನ್ನು ಪ್ರಬಲಗೊಳಿಸುವುದು ಹಾಗೂ ಮೂರು ಹೊಸ ಒನ್‍ವೇಗಳನ್ನು ಜಾರಿಗೊಳಿಸುವುದು ಎಂದು ನಿರ್ಣಯ ತೆಗೆದುಗೊಳ್ಳಲಾಗಿತ್ತು. ಸಭೆಗಳ ಬಳಿಕ ಪ್ರಾಯೋಗಿಕವಾಗಿ ಒನ್‍ವೇಗಳನ್ನು ಜಾರಿಗೊಳಿಸಲಾಗಿತ್ತೂ ಕೂಡ. ಇದೇ ವರ್ಷದ ಜನವರಿ 6ರಂದು ಒನ್‍ವೇ ಸಂಚಾರ ಸೂಚನಾ ಫಲಕವನ್ನು ಅಳವಡಿಸಿ, ಅಧಿಕೃತವಾಗಿ ಮೂರು ಹೊಸ ಒನ್ ವೇಗಳನ್ನು ಅನುಷ್ಠಾನಕ್ಕೆ ತರಲಾಯಿತು.
ಕೃಷ್ಣ ಕಟ್ಟೆ- ಪಟ್ಟಾಡಿ ರಸ್ತೆ, ಹನುಮಂತ ದೇವಸ್ಥಾನ-ಅಮರಶ್ರೀ ಟಾಕೀಸು ರಸ್ತೆ, ವಿಜಯಾ ಬ್ಯಾಂಕ್‍ನಿಂದ ಸ್ವರಾಜ್ಯ ಮೈದಾನ ರಸ್ತೆಗಳಲ್ಲಿ ಸಂಚಾರಿ ಫಲಕಗಳನ್ನು ಪೋಲೀಸರ ಸಹಕಾರದೊಂದಿಗೆ ಅನುಷ್ಠಾನಕ್ಕೆ ತರಲಾಯಿತು. ಆದರೆ ಹಳೆಯ ಒನ್ ವೇಗಳಂತೆ ಈ ಮೂರು ಒನ್‍ವೇಗಳು ಸೂಚನಾ ಫಲಕ, ಸಭೆಗಳ ನಿರ್ಣಯ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ. ಒನ್ ವೇಗಳಲ್ಲೇ ಪಾರ್ಕ್ ಮಾಡುವ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಕೃಷ್ಣ ಕಟ್ಟೆ- ಪಟ್ಟಾಡಿ ರಸ್ತೆಯಲ್ಲಿ ಒನ್‍ವೇ ಜಾರಿಗೊಳಿಸಿರುವುದು ಅವೈಜ್ಞಾನಿಕ ಎನ್ನುವುದು ಸಾರ್ವಜನಿಕರಿಂದ ವಲಯದಿಂದ ಕೇಳಿಬರುತ್ತಿದೆ. ಒನ್‍ವೇ ಜಾರಿಗೊಳಿಸಿರುವುದರಿಂದ ಈ ರಸ್ತೆಯಲ್ಲಿ ವಾಹನದಟ್ಟನೆಯನ್ನು ನಿಯಂತ್ರಣಕ್ಕೆ ತರಬಹುದು. ಆದರೆ ಇಲ್ಲಿ ವ್ಯಾಪಾರ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಲ್ಲಿಗೆ ವಸ್ತುಗಳನ್ನು ಹೊತ್ತು ತರುವ ಘನವಾಹನಗಳು ಮುಖ್ಯರಸ್ತೆಯಿಂದಲೇ ಬರಬೇಕಾಗುತ್ತದೆ. ಅಧಿಕ ವಾಹನ ದಟ್ಟನೆ, ನಿತ್ಯ ಟ್ರಾಫಿಕ್‍ಜಾಮ್‍ನಿಂದ ಕಂಗೆಟ್ಟಿರುವ ಮುಖ್ಯರಸ್ತೆಗೆ ಮತ್ತಷ್ಟು ಒತ್ತಡ ಬೀಳುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ.
*ಮೂಡುಬಿದಿರೆ ಪೇಟೆಯಲ್ಲಿ ವಾಹನ ದಟ್ಟನೆ ಕಡಿಮೆ ಮಾಡಲು ಒನ್‍ವೇಗಳು ಸಮರ್ಪಕವಾಗಿ ಜಾರಿ ಬರಬೇಕು. ಆದರೆ ಅದು ವೈಜ್ಞಾನಿಕ ರೀತಿಯಲ್ಲಿರಬೇಕು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಮೊದಲು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವುದು ಅವಶ್ಯಕ. ಸೂಕ್ತ ರೀತಿಯಲ್ಲಿ ಒನವೇ ಸೂಚನ ಫಲಕ ಅಳವಡಿಸಿರುವುದು ಪುರಸಭೆಯವರು ಮಾಡಿದ ಒಳ್ಳೆಯ ಕೆಲಸ.
– ಶ್ರೀಕಾಂತ್.ಎನ್. ಮೂಡುಬಿದಿರೆ
ನಾಗರಿಕ
