ಕನ್ನಡದಲ್ಲಿ ‘ಸಿರಿಗನ್ನಡಂ ಗೆಲ್ಗೆ’ ಎಂಬ ಮಾತಿನಂತೆಯೇ ಕರಾವಳಿ ಜಿಲ್ಲೆಗಳಲ್ಲಿ ‘ಯಕ್ಷಗಾನಂ ಗೆಲ್ಗೆ’ ಎಂಬ ಮಾತು ಪ್ರಚಲಿತದಲ್ಲಿದೆ. ಏಕೆಂದರೆ ಯಕ್ಷಗಾನ ಕರಾವಳಿಯಲ್ಲಿ ಎಲ್ಲರ ಮನೆ ಮಾತಾದ ಜನಪದ ಕಲೆಯಾಗಿದ್ದು, ಯಕ್ಷಗಾನವನ್ನು ಗಂಡು ಕಲೆಯೆಂದೇ ಕರೆಯಲಾಗುತ್ತದೆ. ಏಕೆಂದರೆ ಯಕ್ಷಗಾನವು ವಿಶೇಷವಾಗಿ ರಾತ್ರಿ ವೇಳೆಯಲ್ಲೇ ನಡೆಯುವುದು ಮತ್ತು ಅತ್ಯಂತ ಭಾರವಾದ ಕಿರೀಟ ಮತ್ತು ವೇಷಭೂಷಣಗಳನ್ನು ತೊಡುವುದರ ಜೊತೆಗೆ ಹೆಚ್ಚಿನ ದೈಹಿಕ ಶ್ರಮದ ನಾಟ್ಯವೂ ಇದಕ್ಕೆ ಪ್ರಮುಖ ಕಾರಣ. ಯಕ್ಷಗಾನದಲ್ಲಿ ಎರಡು ವಿಭಾಗಗಳಿದ್ದು, ಅವುಗಳೆಂದರೆಮುಮ್ಮೇಳ ಮತ್ತು ಹಿಮ್ಮೇಳ. ಹಿಮ್ಮೇಳದಲ್ಲಿ ಭಾಗವತರು, ಚಂಡೆವಾದಕರು, ಮದ್ದಲೆವಾದಕರು, ಹಾಮೋನಿಯಂ ವಾದಕರಿದ್ದು, ಇವರು ಹಿಮ್ಮೇಳದಲ್ಲಿ ಯಕ್ಷಗಾನದ ಮೆರುಗನ್ನು ಹೆಚ್ಚಿಸುತ್ತಾರೆ. ಮುಮ್ಮೇಳದಲ್ಲಿ ನಾಟ್ಯ ಮತ್ತು ಪಾತ್ರಧಾರಿಗಳಿರುತ್ತಾರೆ. ಇವೆರಡೂ ಅತ್ಯಂತ ಕಠಿಣ ವಿಭಾಗಗಳಾಗಿದ್ದು ಇಲ್ಲಿ ವಿಶೇಷ ಸಾಧಕರಾಗುವುದು ಅಷ್ಟೊಂದು ಸುಲಭದ ಮಾತಲ್ಲ. ಯಕ್ಷಗಾನದಲ್ಲಿ ಎರಡು ಪ್ರಕಾರಗಳಿದ್ದು ಒಂದನೆಯದು ತೆಂಕುತಿಟ್ಟು ಎರಡನೆಯದು ಬಡಗುತಿಟ್ಟು. ತೆಂಕುತಿಟ್ಟು ವಿಭಾಗದಲ್ಲಿ ಬಹಳಷ್ಟು ಮಂದಿ ಮಹಿಳಾ ಕಲಾವಿದರಿದ್ದರೂ ಬಡಗುತಿಟ್ಟಿನಲ್ಲಿ ಬಹಳಷ್ಟು ಕಡಿಮೆ ಮಂದಿ ಸಾಧಕಿಯರಿದ್ದಾರೆ ಎನ್ನಬಹುದು. ಅಂತಹ ಕಲಾವಿದರ ಪೈಕಿ ಅಶ್ವಿನಿ ಕೊಂಡದಕುಳಿವಿಭಿನ್ನ ರೀತಿಯ ಸಾಧಕಿಯಾಗಿ ಗುರುತಿಸಲ್ಪಡುತ್ತಾರೆ.

DSC04945ಗುರುವಿಲ್ಲದ ಸಾಧಕಿ:
ಹೆಚ್ಚಿನೆಲ್ಲಾ ಕಲಾವಿದರಿಗೆ ಒಬ್ಬರಲ್ಲ ಒಬ್ಬರು ಗಾಡ್ ಫಾದರ್‍ಗಳು ಇರುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅಶ್ವಿನಿಯ ವಿಚಾರದಲ್ಲಿ ಇದು ತೀರಾ ಭಿನ್ನವೆನ್ನಬಹುದು. ಏಕೆಂದರೆ ಮಹಾನ್ ಕಲಾವಿದರ ಪುತ್ರಿಯಾಗಿರುವ ಈಕೆ ತನ್ನಂತೆ ಕಲಾವಿದೆಯಾಗುವುದು ಬೇಡ, ಆಕೆಯ ಆಸಕ್ತಿಯ ಕ್ಷೇತ್ರವೇ ಬೇರೆ ಆಗಬೇಕು ಹಾಗೂ ಕಲೆಯು ಆಸಕ್ತಿಯಿಂದ ಬರಬೇಕೇ ವಿನಃ ಒತ್ತಾಯದಿಂದ ಅಲ್ಲ ಎನ್ನುವ ಕಾರಣದಿಂದಲೋ ಏನೋ ಈಕೆಗೆ ತನ್ನ ಕಲೆಯನ್ನು ಹೇಳಿಕೊಡುವ ಅಥವಾ ಆಕೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಲಿಲ್ಲ. ಆದರೆ ನಿತ್ಯ ರಾತ್ರಿ ತಂದೆಯೊಂದಿಗೆ ಯಕ್ಷಗಾನ ಪಾತ್ರಗಳನ್ನು ನೋಡಲು ಹೋಗುತ್ತಿದ್ದ ಪುಟಾಣಿ ಅಶ್ವಿನಿ ತಂದೆಯ ಬಣ್ಣದ ವೇಷ, ದೊಡ್ಡ ಕಿರೀಟ ಧರಿಸಿ ಆರ್ಭಟಿಸುವ ಪಾತ್ರಗಳು, ನಾಟ್ಯದ ವೈವಿಧ್ಯಗಳನ್ನು ನಿದ್ದೆ ಬಿಟ್ಟು ನೋಡುತ್ತಲೇ ಈ ಕ್ಷೇತ್ರದೆಡೆಗೆ ಆಕರ್ಷಿತಳಾಗಿರುವುದು ವಿಶೇಷವೇ ಸರಿ. ತನ್ನ ನಾಲ್ಕನೆಯ ವಯಸ್ಸಿನಲ್ಲಿಯಾವುದೇ ಗುರುಗಳಿಲ್ಲದೆಏಕಲವ್ಯ ದ್ರೋಣಾಚಾರ್ಯರ ಪುತ್ಥಳಿಯನ್ನೇ ಗುರುವಾಗಿ ಪೂಜಿಸಿ ಬಿಲ್ವಿದ್ಯೆಯನ್ನು ಕಲಿತಂತೆ ತಂದೆಯ ನಾಟ್ಯವನ್ನು ಮತ್ತು ಶೈಲಿಗಳನ್ನು ದೂರದಿಂದ ನೋಡುತ್ತಲೇ ನಾಟ್ಯಾಭ್ಯಾಸ ಮಾಡಲಾರಂಭಿಸಿದಳು. ಇಲ್ಲಿಂದಲೇ ತಂದೆಯು ಪಾತ್ರ ನಿರ್ವಹಿಸುತ್ತಿರುವ ಯಕ್ಷಗಾನಗಳಲ್ಲಿ ಸಣ್ಣಪುಟ್ಟ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ರಂಗ ಪ್ರವೇಶವನ್ನೂ ಮಾಡುತ್ತಾಳೆ.DSC04948
ಬಡಗುತಿಟ್ಟು ಪ್ರಕಾರದಲ್ಲಿ ಅಲ್ಪಸ್ವಲ್ಪ ನಾಟ್ಯವನ್ನು ಕಲಿತು ಯಕ್ಷಗಾನದೆಡೆಗೆ ಆಕರ್ಷಿತಳಾದ ಅಶ್ವಿನಿ ಹಗಲು ಶಾಲೆಗೆ ಹೋಗುವುದು, ರಾತ್ರಿ ತಂದೆಯೊಂದಿಗೆ ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಿಸುವಿಕೆಯ ಪ್ರಕ್ರಿಯೆ ಪ್ರಾರಂಭವಾಗಿತ್ತು. ಯಕ್ಷಗಾನದಲ್ಲಿ ರಾತ್ರಿ ನಿದ್ದೆ ಬಿಟ್ಟು ಪಾತ್ರಗಳನ್ನು ಮಾಡಿದ ಕಾರಣದಿಂದ ಶಾಲೆಗೆ ಚಕ್ಕರ್ ಹಾಕುತ್ತಿದ್ದ ಈಕೆಯ ಆಸಕ್ತಿ ಶಿಕ್ಷಣಕ್ಕಿಂತ ಹೆಚ್ಚು ಯಕ್ಷಗಾನದಲ್ಲೇ ಇತ್ತೆಂದರೆ ತಪ್ಪಾಗಲಾರದು. ಒಂದು ದಿನ ತರಗತಿಗೆ ಹಾಜರಾದರೆ ಮತ್ತೆ ಹತ್ತು ದಿನ ತರಗತಿಯಲ್ಲಿ ಈಕೆಯ ಪತ್ತೆಯೇ ಇರುತ್ತಿರಲಿಲ್ಲ. ಆದರೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಗಳಲ್ಲಿ ಉತ್ತಮ ದರ್ಜೆಯನ್ನು ಗಳಿಸಿದ್ದು ಈಕೆಯ ಬುದ್ಧಿಮತ್ತೆಯನ್ನು ತೋರುತ್ತದೆ. ಮಗಳು ವಿದ್ಯಾಭ್ಯಾಸದಿಂದ ವಿಮುಖಳಾಗಿ ಕಲೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದುದಕ್ಕೆ ತಂದೆ ಯಾವತ್ತೂ ಈಕೆಯನ್ನು ಗದರಿಸಿದವರಲ್ಲ. ತಾಯಿಯಂತೂ ಈಕೆಯ ಕಲಾಸಕ್ತಿಯನ್ನು ಕಂಡು ಸಂಪೂರ್ಣ ಬೆಂಬಲವಾಗಿ ನಿಲ್ಲುವ ಮೂಲಕ ಮಗಳು ಮಹಾನ್ ಕಲಾವಿದೆಯಾಗಬೇಕೆಂಬ ಕನಸು ಕಂಡು, ವಿದ್ಯಾಭ್ಯಾಸ ಮತ್ತು ಕಲೆ ಎರಡನ್ನೂ ಸಮಾನವಾಗಿ ಸ್ವಿಕರಿಸು ಎಂದು ಕಿವಿ ಮಾತನ್ನು ಹೇಳಿದ್ದರು.DSC05038
ಯಕ್ಷಲೋಕದ ಬಹುಮುಖ ಪ್ರತಿಭೆಯೀಕೆ:
ಶಿಕ್ಷಣದೊಂದಿಗೆ ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಿಸುತ್ತಾಆರನೆಯ ವಯಸ್ಸಿಗೇ ಅಶ್ವಿನಿ ಪ್ರಬುಧ್ಧ ಕಲಾವಿದೆÉಯಾಗಿ ರೂಪುಗೊಳ್ಳುತ್ತಾಳೆ. ಕೇವಲ ಪಾತ್ರಧಾರಿಯಾಗಿರದೇನಾಲ್ಕನೇಯ ತರಗತಿಯ ಸಣ್ಣ ವಯಸ್ಸಿನಲ್ಲಿಯೇ ಚೌಕಿಯಲ್ಲಿ ಕುಳಿತು ತನ್ನ ಪಾತ್ರಕ್ಕನುಗುಣವಾಗಿ ಬಣ್ಣ ಹಚ್ಚಿಕೊಳ್ಳುವ ಕಲೆಯಲ್ಲಿ ಮತ್ತು ತನ್ನ ಪಾತ್ರಗಳಿಗೆ ತಾನೇ ವೇಷಭೂಷಣ ಮಾಡಿಕೊಳ್ಳುವಲ್ಲಿಯೂ ಪ್ರಾವೀಣ್ಯತೆಯನ್ನು ಮೆರೆಯುತ್ತಾಳೆ. ಬಡಗುತಿಟ್ಟಿನಲ್ಲಿ ಸಾಕಷ್ಟು ಫ್ರೌಢತೆಯನ್ನು ಗಳಿಸಿದ್ದರೂ, ಈಕೆ ತೆಂಕುತಿಟ್ಟನ್ನು ಕರ್ಗಲ್ ವಿಶ್ವೇಶ್ವರ ಭಟ್‍ರವರಲ್ಲಿ ಕಲಿತು ಎರಡೂ ಪ್ರಕಾರದಲ್ಲೂ ಪಾಂಡಿತ್ಯವನ್ನು ಗಳಿಸಿರುವುದು ಈಕೆಯ ಹೆಚ್ಚುಗಾರಿಕೆ. ಅರ್ಥಗಾರಿಕೆ, ಚೆಂಡೆ ಮತ್ತು ಮದ್ದಲೆವಾದನೆಯ ಜ್ಞಾನವೂ ಈಕೆಗಿದ್ದು, ತನ್ನ ಹತ್ತನೇಯ ತರಗತಿಗೇ ಭರತನಾಟ್ಯ ಕ್ಷೇತ್ರದಲ್ಲಿ ಸೀನಿಯರ್‍ನ್ನು ಪೂರ್ಣಗೊಳಿಸಿ ಸಧ್ಯ ವಿದ್ವತ್‍ನ್ನೂ ಮಾಡುತ್ತಿದ್ದಾಳೆ. ಕರ್ನಾಟಕ ಸಂಗೀತವನ್ನು ಶಾರದಾ ದೈವಜ್ಞ ಮತ್ತು ಜಯಂತಿ ಉಪಾಧ್ಯಾಯ ಇವರ ಮಾರ್ಗದರ್ಶನದಲ್ಲಿ ಕಲಿತಿದ್ದು, ಒಡಿಸ್ಸಿ ನೃತ್ಯಗಾರ್ತಿಯಾಗಿಯೂ ಪ್ರಸಿದ್ಧಿ ಪಡೆದಿದ್ದಾಳೆ. ಖ್ಯಾತ ನಾಟಕಗಾರರಾದ ಜೀವನ್ ರಾಮ್ ಸುಳ್ಯ ಇವರ ಗರಡಿಯಲ್ಲಿ ನಾಟಕ ಮತ್ತು ರಂಗಭೂಮಿ ಕಲೆಯನ್ನು ಗಳಿಸಿಕೊಂಡು ನಾಟಕದಲ್ಲಿ ದಕ್ಷಿಣ ಭಾರತಕ್ಕೆ ಪ್ರಥಮ ಸ್ಥಾನ ಪಡೆದ ‘ದೂತವಾಕ್ಯಂ’ ಮತ್ತು ‘ದೇವವೃದ್ಧರು’ ನಾಟಕದಲ್ಲೂ ಅಭಿನಯಿಸಿದ್ದಾಳೆ.DSC05054ವೃತ್ತಿಗಿಂತ ಕಲೆಗೇ ಹೆಚ್ಚಿನ ಪ್ರಾಶಸ್ತ್ಯ:
ತನ್ನ ಬಿ.ಎಸ್ಸಿ ಪದವಿ ಮತ್ತು ಎಮ್.ಎಸ್ಸಿ ಸೈಕಾಲಜಿ ಅಧ್ಯಯನವನ್ನು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪೂರೈಸಿ ಅರೆಕಾಲಿಕ ಮನಃಶಾಸ್ತ್ರ ಉಪನ್ಯಾಸಕಿ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಕಲಾಸೇವೆಗಾಗಿ ತನ್ನ ಉಪನ್ಯಾಸ ವೃತ್ತಿಯನ್ನು ಉಪ ವೃತ್ತಿಯನ್ನಾಗಿ ಆಯ್ದುಕೊಂಡು ಯಕ್ಷಗಾನದ ಮೇಲಿ ಪ್ರೀತಿಯನ್ನು ಸಾರಿರುವುದು ವಿಶೇಷ. ಈ ಹಿಂದೆ ದುಬೈನ‘ಬೈನೋ ಬ್ರೈನ್ ಇಂಟರ್ ನ್ಯಾಷನಲ್ ಶಾಲೆ’ಯಲ್ಲಿ ಉಪನ್ಯಾಸಕಿಯಾಗಿ ಉದ್ಯೋಗವೂ ದೊರೆತಿದ್ದು, ವಿದೇಶಕ್ಕೆ ಹೋದರೆ ಯಕ್ಷಗಾನದ ನಂಟನ್ನು ಬಿಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಈಅವಕಾಶವನ್ನು ಕೈಬಿಟ್ಟಿರುವುದು ಈಕೆಯ ಕಲಾಪ್ರೇಮಕ್ಕೆ ನಿದರ್ಶನವಾಗಿದೆ. ಯಕ್ಷಗಾನದ ಕರ್ತವ್ಯ ನಿರ್ವಹಣೆಯಿಲ್ಲದ ದಿನಗಳಲ್ಲಷ್ಟೇ ಈಕೆ ಉಪನ್ಯಾಸದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ತನಗೆ ನೀಡಲಾದ ಪಠ್ಯದ ಜವಾಬ್ದಾರಿಯನ್ನು ಕ್ಲಪ್ತ ಸಮಯಕ್ಕೆ ಮುಗಿಸಿಕೊಡುವ ಬದ್ಧತೆಯೂ ಈಕೆಯಲ್ಲಿದೆ. ಈ ಮೂಲಕ ವೃತ್ತಿ ಜೀವನ ಮತ್ತು ಕಲಾಸೇವೆ ಎರಡನ್ನೂ ಸಮಾನವಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ.
ತನ್ನ ತಂದೆಯ ಯಕ್ಷಗಾನ ಮೇಳವಿದ್ದರೂ ಸ್ವಾಭಿಮಾನದಿಂದ ತಂದೆಯಲ್ಲೂ ಅವಕಾಶವನ್ನು ಅಶ್ವಿನಿ ಕೇಳಿದವಳಲ್ಲ. ತಂದೆಯನ್ನೇ ತನ್ನೆಲ್ಲಾ ಸಾಧನೆಗಳಿಗೆಪ್ರೇರಣಾ ಶಕ್ತಿ ಎಂದು ಹೇಳುವ ಈಕೆ ತಂದೆಯ ಕಲಾ ಬದ್ಧತೆ ಮತ್ತು ಶಿಸ್ತನ್ನು ಅಚ್ಚುಕಟ್ಟಾಗಿ ತನ್ನ ಕಲಾರಾಧನೆಯಲ್ಲಿ ಪಾಲಿಸಿಕೊಂಡಿದ್ದಾಳೆ.ದಕ್ಷಯಜ್ಞ ಪ್ರಸಂಗದದಕ್ಷಮಹಾರಾಜ, ಶಿವÀ ಮತ್ತು ದಾಕ್ಷಾಯಿಣಿಯ ಪಾತ್ರಗಳನ್ನು, ಸತ್ಯ ಹರಿಶ್ಚಂದ್ರ ಪ್ರಸಂಗದ ಲೋಹಿತಾಶ್ವನ ಪಾತ್ರವನ್ನು ಮನೋಜ್ಞವಾಗಿ ನಿರ್ವಹಿಸಬಲ್ಲ ಚತುರೆಯೀಕೆ. ಪುರುಷ ಪಾತ್ರಗಳನ್ನು ನಿರ್ವಹಿಸುವಲ್ಲಿ ಮಹಿಳಾ ಪಾತ್ರಧಾರಿಗಳಿಗೆ ಧ್ವನಿಯ ನಿರ್ವಹಣೆಯ ಸವಾಲಿದ್ದು, ಸಂಗೀತ ಕಲಿತಿರುವುದರಿಂದ ಧ್ವನಿಯನ್ನು ಪಾತ್ರಕ್ಕನುಗುಣವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಹೆಣ್ಣಾಗಿದ್ದರೂ ಪುರುಷ ಪ್ರಧಾನ ಪಾತ್ರಗಳನ್ನೇ ಭಷ್ಮಾಸುರ ಮೋಹಿನಿ, ಭಿಷ್ಮಾರ್ಜುನ, ರಾಧಾತರಂಗ, ದಕ್ಷಯಜ್ಞ ಮುಂತಾದ ಪ್ರಸಂಗಗಳಲ್ಲಿ ಅತೀ ಹೆಚ್ಚು ಬಾರಿ ನಿರ್ವಹಿಸಿದ್ದಾಳೆ. ಬಣ್ಣಹಚ್ಚಿ, ವೇಷತೊಟ್ಟು ರಂಗಸ್ಥಳಕ್ಕೆ ಇಳಿದಳೆಂದರೆ ಎದುಗಡೆ ಇರುವ ಕಲಾವಿದ ಯಾರೆಂದು ಈಕೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ, ಬದಲಾಗಿ ತನ್ನ ಪಾತ್ರಕ್ಕೆ ನ್ಯಾಯವನ್ನಷ್ಟೇ ಒದಗಿಸುವ ಕೆಲಸವನ್ನು ಮಾಡುತ್ತಾಳೆ. DSC05065
ಅಶ್ವಿನಿಯ ಕಲಾ ಫ್ರೌಢಿಮೆ, ಬದ್ಧತೆಯಿಂದಾಗಿ ಯಕ್ಷಗಾನ ಆಯೋಜಕರು ಹಲವು ತಿಂಗಳುಗಳ ಮೊದಲೇ ಈಕೆಯನ್ನು ಕಾರ್ಯಕ್ರಮಗಳಿಗೆ ಗೊತ್ತುಪಡಿಸಿಕೊಳ್ಳುತ್ತಿದ್ದು,ತನ್ನ ಪ್ರಯಾಣಕ್ಕನುಕೂಲವಾಗುವ ಕಾರ್ಯಕ್ರಮಗಳನ್ನಷ್ಟೇ ಒಪ್ಪಿಕೊಳ್ಳುತ್ತಾರೆ.ಪೂರ್ವ ನಿರ್ಧರಿತಪ್ರಸಂಗಗಳೇ ಕೆಲವೊಮ್ಮೆ ಬದಲಾಗುವ ಸಾಧ್ಯತೆಗಳೂ ಇದ್ದು, ಯಾವ ಪಾತ್ರವನ್ನಾದರೂ ನಿರ್ವಹಿಸಬಲ್ಲ ಕಥಾ ಜ್ಞಾನವು ಈಕೆಯಲ್ಲಿದೆ. ಯಕ್ಷಗಾನದ ತೆಂಕು ಮತ್ತು ಬಡಗು ಪ್ರಕಾರಗಳ ಜ್ಞಾನದ ಕಾರಣದಿಂದಾಗಿ ಅಶ್ವಿನಿ ಅತ್ಯಂತ ಬೇಡಿಕೆಯ ಕಲಾವಿದೆಯಾಗಿದ್ದು, ಕೈತುಂಬ ಅವಕಾಶಗಳಿವೆ.ಅವಕಾಶಗಳ ಬೆನ್ನತ್ತಿ ಹೋಗುವ ಬದಲಾಗಿ ಅವಕಾಶಗಳೇ ನಮ್ಮನ್ನರಸಿಕೊಂಡು ಬರುವಂತೆ ಬೆಳೆದಿದ್ದಾಳೆ ಅಶ್ವಿನಿ ಕೊಂಡದಕುಳಿ.

IMG_20161212_025522
ಅಶ್ವಿನಿ ಕೇವಲ ಕಲಾರಾಧನೆಯನ್ನು ಮಾತ್ರ ಮಾಡುತ್ತಿಲ್ಲ ಬದಲಾಗಿ ಯಕ್ಷಗಾನಾಸಕ್ತ ಮಕ್ಕಳಿಗೆ ಉಚಿತವಾಗಿ ಕಲಾದೀಕ್ಷೆಯನ್ನೂ ನೀಡುತ್ತಿದ್ದು,ಈಕೆ ಯಕ್ಷಗಾನದಿಂದ ಗಳಿಸಿದ ಆದಾಯದ ಒಂದು ಭಾಗವನ್ನು ಮುಂದಿನ ಪೀಳಿಗೆಯನ್ನು ಬೆಳೆಸುವಿಕೆಗೆ ಬಳಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಪ್ರದೇಶದಿಂದ ಪ್ರದೇಶಕ್ಕೆ ಭಾಷೆ ಹಾಗೂ ಶೈಲಿ ವ್ಯತ್ಯಾಸವಾಗುವ ಕಾರಣದಿಂದಾಗಿ ಅರ್ಥಗಾರಿಕೆಗಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ಅಭಿನಯಕ್ಕೆ ನೀಡಿದಾಗ ಎಲ್ಲಾ ವರ್ಗದ ಜನರನ್ನೂ (ವಿದೇಶೀಯರನ್ನೂ ಸೇರಿ) ಸುಲಭವಾಗಿ ತಲುಪಬಹುದಾಗಿದ್ದು, ಭಾಷೆಗಿಂತ ಭಾವನೆಗಳು ಸುಲಭವಾಗಿ ಪ್ರೇಕ್ಷಕÀರನ್ನು ತಲುಪುತ್ತವೆ ಎಂಬ ಆಶಯವನ್ನು ಅಶ್ವಿನಿ ವ್ಯಕ್ತಪಡಿಸುತ್ತಾಳೆ.ಭೀಷ್ಮ ವಿಜಯ ಪ್ರಸಂಗದ ಅಂಬೆಯ ಪಾತ್ರವನ್ನು ನಿರ್ವಹಿಸÀಬೇಕೆಂಬ ಮಹದಾಸೆಯೂ ಈಕೆಗಿದೆ. ಇದುವರೆಗೆ ಈಕೆ ನಿರ್ವಹಿಸಿದ ಪಾತ್ರಗಳ ಪೈಕಿ ಶರಸೇತು ಬಂಧನÀದ ಹನುಮಂತನ ಪಾತ್ರಕ್ಕೆ ಮನುಷ್ಯ ಸಹಜವಲ್ಲದ ವಿಭಿನ್ನ ಹಾವಭಾವದ ಅವಶ್ಯಕತೆಯಿದ್ದ ಕಾರಣದಿಂದ ಅತ್ಯಂತ ಕಠಿಣ ಮತ್ತು ಸವಾಲೆನಿಸಿತ್ತು ಎಂದು ಹೇಳುವ ಈಕೆಗೆ ಯಕ್ಷಗಾನದ ಪಾತ್ರಗಳೆಲ್ಲವೂ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ಸಾರುವ ಮಾಧ್ಯಮವೂ ಆಗಬೇಕೆಂಬ ಅಭಿಲಾಷೆಯಿದೆ.
ಪ್ರಮುಖ ಸಾಧನೆಗಳು:DSC05126
ಈಕೆಗೆ ಕರ್ನಾಟಕ ಸರಕಾರದ 2012-13 ರ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ‘ಯುವ ಪ್ರಶಸ್ತಿ’, ಮಂಗಳೂರು ವಿಶ್ವವಿದ್ಯಾನಿಲಯದಿಂದ ‘ಯೂತ್ ಝೋನ್’, ಜಿಲ್ಲಾ ಹವ್ಯಕ ಬಳಗದಿಂದ ‘ಯಕ್ಷಾಪ್ಸರೆ’, ದುಬೈ ಮತ್ತು ಬಹರೈನ್ ಕನ್ನಡ ಸಂಘಗಳ ಗೌರವ, ವಿವಿಧ ಯುವಕ ಮಂಡಲಗಳಿಂದ ಗೌರವಗಳು ಈಕೆಯ ಸಾಧನೆಗೆ ಸಂದ ಪುರಸ್ಕಾರಗಳು. ಈಕೆಯು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತಂಡದ ಪರವಾಗಿ ದುಬೈ, ಅಬುದಾಭಿಯಲ್ಲಿ ಯಕ್ಷಗಾನ, ನಾಟಕ ಮತ್ತು ಜನಪದ ಕಲೆಗಳನ್ನು ಪ್ರಸ್ತುತಪಡಿಸಿದ ತಂಡದ ನೇತೃತ್ವವಹಿಸಿದ್ದಾರೆ. ಚೈನಾ ಮತ್ತು ಬಹರೈನ್‍ನಲ್ಲಿ ಯಕ್ಷನಾಟ್ಯ ಕಾರ್ಯಕ್ರಮವನ್ನೂ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿರುವ ಅಶ್ವಿನಿ ಹಲವಾರು ಪ್ರಸಂಗಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಮಿಕ್ಕಿದ ಪಾತ್ರಗಳನ್ನು ನಿರ್ವಹಿಸಿದ ಹಿರಿಮೆನ್ನು ಹೊಂದಿದ್ದು,‘ಲವಕುಶ’, ‘ಕಂಸವಧೆ’, ‘ರಾಧಾಂತರಂಗ’ ಇವೇ ಮೊದಲಾದ ಪ್ರಸಂಗಗಳಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಬಾರಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಕೇರಳ ಆಂದ್ರಪ್ರದೇಶ ಮತ್ತು ಗೋವಾದಲ್ಲೂ ಈಕೆ ಹಲವಾರು ಯಕ್ಷಗಾನ ಪ್ರದರ್ಶನಗಳನ್ನು ನೀಡಿದ್ದಾಳೆ.
ಪಾತ್ರಗಳಿಗೆ ಜೀವ ತುಂಬುವ ಈಕೆಯ ಕಲೆಯಲ್ಲಿ ಉತ್ತಮ ನಾಟ್ಯವಿದೆ, ವಿನಯವಿದೆ, ನಿಯಮವಿದೆ, ಪುರುಷ ಸಮಾನಕುಣಿತವಿದೆ, ಉತ್ತಮ ವಾಕ್ಚಾತುರ್ಯವಿದೆ. ಪುರುಷ ಪ್ರಧಾನವಾದ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವುದರ ಜೊತೆಗೆ ವಿಶೇಷ ವ್ಯಕ್ತಿತ್ವನ್ನು ರೂಢಿಸಿಕೊಂಡಿದ್ದೇ ಈಕೆಯ ಯಶಸ್ಸಿನ ಗುಟ್ಟೆನ್ನಬಹುದು. ದ್ವಿತೀಯ ಪಿಯುಸಿ ಓದುತ್ತಿದ್ದ ಸಂದರ್ಭದಲ್ಲಿ ತನ್ನ ಬದುಕಿನ ಸರ್ವಸ್ವವೂ ಆಗಿದ್ದ ತಾಯಿಯನ್ನು ಅಕಾಲಿಕವಾಗಿ ಕಳೆದುಕೊಂಡಾಗ ಆಕಾಶವೇ ಕಳಚಿ ಬಿದ್ದಂತೆ ಸರ್ವಸ್ವವನ್ನೂ ಮರೆತು ಒಂದು ವರ್ಷ ನಿರ್ಲಿಪ್ತವಾಗಿದ್ದರು. ಅಮ್ಮಯಾಕೆ ನನ್ನ ಬಿಟ್ಟೋದಳು ಎಂಬ ಪ್ರಶ್ನೆಗೆ ಇಂದಿಗೂ ಆಕೆಯ ಬಳಿ ಉತ್ತರವಿಲ್ಲ; ತಾಯಿಯ ಆಸೆಯಂತೆಯೇ ಇಂದು ಅಶ್ವಿನಿ ಉತ್ತಮ ಕಲಾವಿದೆಯಾಗಿದ್ದಾಳೆ ಆದರೆ ಈಕೆಯ ಪಾತ್ರ ಹಾಗೂ ಯಶಸ್ಸನ್ನು ನೋಡಲು ತಾಯಿಯೇ ಇಲ್ಲ ಎನ್ನುವುದು ನಿಜಕ್ಕೂ ವಿಪರ್ಯಾಸ. ತಾಯಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ನನ್ನ ಬದುಕನ್ನು ಉಳಿಸಿಬೆಳೆಸಿದ್ದು ಇದೇ ಯಕ್ಷಗಾನ, ಇದೇ ಯಕ್ಷಗಾನದಲ್ಲಿ ನನ್ನ ತಾಯಿಯಿದ್ದಾಳೆ, ತಾಯಿಗಾಗಿ ನನ್ನ ಬದುಕನ್ನೇ ಮುಡಿಪಾಗಿಡುತ್ತೇನೆ ಎನ್ನುತ್ತಾಳೆ ಅಶ್ವಿನಿ.DSC05321
ಯಕ್ಷಗಾನದ ತನ್ನ ದುಡಿಮೆಯ ಮೂಲಕ ತನ್ನ 24ನೆಯ ವಯಸ್ಸಿನಲ್ಲೇ ಕುಂದಾಪುರದಲ್ಲಿ ಸ್ವಂತ ಮನೆಯನ್ನು ಖರೀದಿಸಿ ಇಲ್ಲೇ ವಾಸಿಸುತ್ತಿದ್ದು, ಯಕ್ಷಗಾನಕ್ಕೆ ಬೇಕಾಗುವ ವಿವಿಧ ವೇಷಭೂಷಣಗಳನ್ನೂ ತನ್ನ ಪಾತ್ರಗಳಿಗನುಗುಣವಾಗಿ ತಾನೇ ಸ್ವಂತ ಹೊಂದಿರುವುದು ಈಕೆಯ ಸ್ವಾವಲಂಬಿ ಚಿಂತನೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ.ಬದುಕಿನುದ್ದಕ್ಕೂ ತಾನೊಬ್ಬ ಕಲಾವಿದೆಯಾಗಿಯೇ ಕಲಾ ಸೇವೆಯನ್ನು ಮಾಡಬೇಕು, ಯಕ್ಷಗುರುಕುಲವನ್ನು ತೆರೆದು ಇಲ್ಲಿ ಅನಾಥ ಹಾಗೂ ತೀರಾ ಬಡ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಆಶ್ರಯವನ್ನು ನೀಡಿ ಯಕ್ಷಗಾನ ಕಲೆಯನ್ನು ಹೇಳಿಕೊಡಬೇಕು, ಜೊತೆಗೆ ಕಲಾ ಶಾಲೆಯನ್ನು ಪ್ರಾರಂಭಿಸಿ ಹೆಣ್ಣುಮಕ್ಕಳಿಗೆ ಸಂಗೀತ, ಯಕ್ಷಗಾನವನ್ನು ಕಲಿಸುವ ಯೋಚನೆಯೂ ಇವರಲ್ಲಿದೆ. ತಿಂಗಳು ಪೂರ್ತಿ ಅತ್ಯಂತ ಬೇಡಿಕೆಯಲ್ಲಿರುವ ಅಶ್ವಿನಿ ಬಹಳ ದೂರದ ಊರುಗಳಿಗೂ ಪ್ರದರ್ಶನಕ್ಕಾಗಿ ತೆರಳುತ್ತಾರೆ ಮತ್ತು ಹಗಲು ರಾತ್ರಿಯೆನ್ನದೆ ವಿಶ್ರಾಂತಿ ರಹಿತವಾಗಿ ಕಲೆಗಾಗಿ ಓಡಾಟ ನಡೆಸುವಷ್ಟು ಬದ್ಧತೆ ಇರುವ ಅತ್ಯಂತ ಅಪರೂಪದ ಹಾಗೂ ಮಾದರಿ ಕಲಾವಿದೆ ಈಕೆ

IMG_20161202_203537
ಲೇಖನ:ಸಂತೋಷ್ ರಾವ್.ಪೆರ್ಮುಡ

By suddi9

Leave a Reply

Your email address will not be published. Required fields are marked *