ಬಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಎಸ್.ಯು.ಪಣಿಯಾಡಿ ಗ್ರಂಥಾಲಯದ ಲೋಕಾರ್ಪಣೆ ಶನಿವಾರ ನಡೆಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಗ್ರಂಥಾಲಯವನ್ನು ಉದ್ಘಾಟಿಸುವ ಮೂಲಕ ಲೋಕಾರ್ಪಣೆಗೈದರು. ಬಳಿಕ ಮಾತನಾಡಿದ ಅವರು, ಬೆಂಗಳೂರು ಹೊರೆತುಪಡಿಸಿದರೆ ಮಂಗಳೂರು ಜಿಲ್ಲೆ ಸಾರ್ವಾಂಗಿಣವಾಗಿ ಪ್ರಗತಿಯನ್ನು ಸಾಧಿಸಿದೆ. ಸಮಾಜಕ್ಕಾಗಿ ಹಿರಿಯರು ಮಾಡಿರುವ ತ್ಯಾಗ, ಕೊಡುಗೆಯನ್ನು ಮರೆಯಬಾರದು ಎಂದರು.
ಈ ವಸ್ತು ಸಂಗ್ರಹಾಲಯದಲ್ಲಿ ಕೃಷಿಕರ ಬದುಕನ್ನು ಪರಿಚಯಿಸುತ್ತಿದೆ. ಇದಕ್ಕೆ ಪೂರಕವಾಗಿ ಸಾಹಿತ್ಯದ ರೂಪವು ಇದ್ದು ಸಂಶೋಧನೆ ಮಾಡುವವರಿಗೂ ಈ ಗ್ರಂಥಾಲಯ ಉಪಯುಕ್ತವಾಗಿದೆ. ಭವಿಷ್ಯದಲ್ಲಿ ಈ ವಸ್ತು ಸಂಗ್ರಹಾಲಯ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದ ಅವರು, ತುಳುವಿನ ಉಳಿವಿಗಾಗಿ ಹೋರಾಟ ನಡೆಸಿದ ಪಣಿಯಾಡಿಯವರ ಹೆಸರನ್ನು ಗ್ರಂಥಾಲಯಕ್ಕೆ ಇಡುವ ಮೂಲಕ ಅವರನ್ನು ನೆನಪಿಸುವ ಕಾರ್ಯ ತುಕರಾಮ ಪೂಜಾರಿ ಮಾಡಿರುವುದು ಅಭಿನಂದನೀಯವಾಗಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯವು ಬಂಟ್ವಾಳದಲ್ಲೇ ಇರುವುದು ನಮಗೆಲ್ಲ ಹೆಮ್ಮೆಯ ವಿಚಾರವಾಗಿದೆ ಎಂದರು.

ಮೇಲು ಕೋಟೆ ಶಾಸಕ ಕೆ.ಎಸ್.ಪುಟ್ಟಣಯ್ಯ, ಹಿರಿಯ ಚಿತ್ರ ನಟಿ ಹರಿಣಿ ಎಸ್. ರಾವ್, ಪ್ರಾಚ್ಯ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ. ಆರ್.ಗೋಪಾಲ್ ಅವರು ಮಾತನಾಡಿದರು. ಇದೇ ವೇಳೆ ಸಂಕೀರ್ಣದ ಕೆಲಸ ನಿರ್ವಹಿಸಿದ ಮೇಸ್ತ್ರಿ ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಕೇಂದ್ರದ ಅಧ್ಯಕ್ಷ ಪ್ರೊ. ತುಕರಾಮ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಎಸ್.ವಿ.ಎಸ್.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶಂಕರ್ ಭಟ್ ಸುಭಾಶಂಸನೆ ಗೈದರು.


