ಮೂಡುಬಿದಿರೆ : ಬೆಳುವಾಯಿ ಗ್ರಾಮ ಪಂಚಾಯಿತಿ ಶ್ರೀ.ಧ.ಗ್ರಾ.ಯೋಜನೆ ಬೆಳುವಾಯಿ, ಸಿ.ಎ ಬ್ಯಾಂಕ್, ವಿ.ಹಿಂ.ಪ- ಬಜರಂಗದಳ ಬೆಳುವಾಯಿ ಘಟಕ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೆಳುವಾಯಿ ಗ್ರಾಮದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಯಿತು.
ಕೆಸರುಗದ್ದೆಯಿಂದ ಬೆಳುವಾಯಿ ಪೇಟೆಯ ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸ ಹಾಗೂ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.
ನಂತರ ಬೆಳುವಾಯಿ ಪೇಟೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬೆಳುವಾಯಿ ಗ್ರಾಮವನ್ನು ಸ್ವಚ್ಛ ಗ್ರಾಮವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಗ್ರಾಮದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಅಭಿಯಾನವನ್ನು ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ಹೆಚ್ಚಾಗಿ ಗ್ರಾಮದಲ್ಲಿ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ವ್ಯಾಪಾರಸ್ಥರನ್ನು ಕರೆದು ಸಭೆ ನಡೆಸಿ ಪ್ಲಾಸ್ಟಿಕ್ ಬಳಕೆಗಳನ್ನು ಕಡಿಮೆ ಮಾಡುವಂತೆ ತಿಳಿಸಲಾಗುವುದು ಹಾಗೂ ಅಂಗಡಿಗಳಲ್ಲಿ ಸ್ಟಿಕ್ಕರ್ಗಳನ್ನು ಹಾಕಲಾಗುವುದು, ಸಿಎ ಬ್ಯಾಂಕ್ನ ಸಹಭಾಗಿತ್ವದಲ್ಲಿ ಕಸಗಳನ್ನು ರಾಶಿ ಹಾಕುತ್ತಿರುವ ಸೆಂಟರ್ಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು ಹಾಗೂ ಕಸವನ್ನು ತಂದು ಹಾಕುವವರ ವಿರುದ್ಧ ಕಾನೂನು ಕ್ರಮವಾಗಿ ದಂಡವನ್ನು ವಿಧಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಿನ್ನಿಗೋಳಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಚಾವಡಿ ಮನೆ ಜಗನ್ನಾಥ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ಲಾಸ್ಟಿಕ್ನ ಹಾವಳಿಯಿಂದಾಗಿ ಇಂದು ದೇಶ, ಸಮಾಜ ಬದಲಾವಣೆಯಾಗಿದೆ. ಹಿಂದೆ ಬಳಕೆ ಮಾಡುತ್ತಿದ್ದ ಕಾಗದಗಳು ಮಣ್ಣಿಗೆ ಬಿದ್ದು ಗೊಬ್ಬರವಾಗಿ ಪರಿವರ್ತನೆಯಾಗುತ್ತಿತ್ತು ಆದರೆ ಇಂದು ಮಣ್ಣಿಗೆ ಬೀಳುತ್ತಿರುವ ಪ್ಲಾಸ್ಟಿಕ್ಗಳು ಮಾರಕವಾಗುತ್ತಿದ್ದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ ಎಂದು ಹೇಳಿದ ಅವರು ಸಮಾಜಕ್ಕೆ ಮಾರಕವಾಗುವಂತಹ ಕೆಲಸಗಳನ್ನು ಮಾಡದೆ ಸಮಾಜ ಸೇವೆಗೆ ಸ್ಪಂದಿಸುವಂತಹ ಕೆಲಸಗಳನ್ನು ಮಾಡಿ ಎಂದು ತಿಳಿಸಿದರು.
ತಾ.ಪಂ ಸದಸ್ಯ ಸಂತೋಷ್, ಉದ್ಯಮಿ, ಸಿ.ಎ ಬ್ಯಾಂಕಿನ ನಿದೇರ್ಶಕ ಭಾಸ್ಕರ್ ಕೋಟ್ಯಾನ್, ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಬಜರಂಗದಳ ಬೆಳುವಾಯಿ ಘಟಕದ ಸಂಚಾಲಕ ಸುಚೇತನ್ ಜೈನ್, ಆಳ್ವಾಸ್ ಎನ್ಎಸ್ಎಸ್ ಘಟಕದ ಮುಖ್ಯಸ್ಥ ಗುರುದೀಪ್ ಆಲ್ಡ್ರೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಜರಂಗ ದಳದ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
