ಬಂಟ್ವಾಳ:ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಿದ್ಧಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇದೇ 25ರಂದು ತಾಲ್ಲೂಕು ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಪರಿಷತ್ತಿನ ಅಧ್ಯಕ್ಷ ಕೆ.ಮೋಹನ ರಾವ್ ಹೇಳಿದ್ದಾರೆ.
ಬಿ.ಸಿ.ರೋಡ್‍ನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ ಸಮ್ಮೇಳನಾಧ್ಯಕ್ಷ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನ ಯಶಸ್ವಿಗೊಳಿಸಲು ಈಗಾಗಲೇ ಸ್ಥಳೀಯರನ್ನು ಒಳಗೊಂಡ ಸ್ವಾಗತ ಸಮಿತಿ ಮತ್ತು ವಿವಿಧ ಉಪ ಸಮಿತಿ ಶ್ರಮಿಸುತ್ತಿದೆ. ಇದಕ್ಕಾಗಿ ಸಿದ್ಧಕಟ್ಟೆ, ಸಂಗಬೆಟ್ಟು, ಕುದ್ಕೋಳಿ ಮತ್ತಿತರ ಕಡೆಗಳಿಂದ ವಿವಿಧ ಸಂಘ ಸಂಸ್ಥೆಗಳು ಒಟ್ಟು ಏಳು ಆಕರ್ಷಕ ದ್ವಾರ ನಿರ್ಮಿಸಲು ಮುಂದಾಗಿವೆ. ಈ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಊಟೋಪಚಾರಕ್ಕಾಗಿ ಇದೇ 24ರಂದು ಸಿದ್ಧಕಟ್ಟೆಯಲ್ಲಿ ಆಕರ್ಷಕ ಹೊರೆಕಾಣಿಕೆ ಸಮರ್ಪಿಸಲು ನಾಗರಿಕರು ಸಿದ್ಧತೆ ನಡೆಸಿದ್ದಾರೆ ಎಂದು ವಿವರಿಸಿದರು.
25ರಂದು ಬೆಳಿಗ್ಗೆ ಆರಂಭಗೊಳ್ಳುವ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಮತ್ತಿತರ ಗಣ್ಯರು ಭಾಗವಹಿಸುವರು. ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ ಜೈನ್ ಪುಸ್ತಕ ಪ್ರದರ್ಶನ ಉದ್ಘಾಟನೆಗೊಳಿಸುವರು. ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಪುಸ್ತಕ ಬಿಡುಗಡೆ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಇಲ್ಲಿನ ಸೋಲಾರ್ ಘಟಕ ಅನಾವರಣಗೊಳಿಸುವರು. ಸಾಹಿತಿ ಡಾ.ಗಿರೀಶ ಭಟ್ ಅಜೆಕ್ಕಳ ಸಮ್ಮೇಳನಾಧ್ಯಕ್ಷರ ಕೃತಿ ಅವಲೋಕನ ಗೊಳಿಸುವರು. ಅಂದು ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ, ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.
ಬಂಟ್ವಾಳ ತಾಲ್ಲೂಕಿನಲ್ಲಿ ಈಗಾಗಲೇ 16 ತಾಲ್ಲೂಕು ಸಮ್ಮೇಳನ ಮತ್ತು 4 ಜಿಲ್ಲಾ ಸಮ್ಮೇಳನ ಯಶಸ್ವಿಯಾಗಿ ನಡೆದಿದ್ದು, ಸಿದ್ಧಕಟ್ಟೆಯಲ್ಲಿ ನಡೆಯುವ 17ನೇ ಸಮ್ಮೇಳನ ಅರ್ಥಪೂರ್ಣಗೊಳಿಸಲು ವಿವಿಧ ಸಾಹಿತ್ಯ ಗೋಷ್ಠಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಸಿದ್ಧಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜು ಸಹಿತ ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಕಲಾವಿದರಿಂದ ಯಕ್ಷಗಾನ ಮತ್ತಿತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪುಸ್ತಕ ಪ್ರದರ್ಶನ, ಸ್ಮರಣ ಸಂಚಿಕೆ ಬಿಡುಗಡೆ ಮತ್ತಿತರ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು. ಕಲೆ, ಸಾಹಿತ್ಯ, ಯಕ್ಷಗಾನ, ಪರಿಸರ ಬಗ್ಗೆ ಗೋಷ್ಠಿಯಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಕಸಾಪ ಮಾಜಿ ಅಧ್ಯಕ್ಷರಾದ ಬಿ.ತಮ್ಮಯ್ಯ, ಜಯಾನಂದ ಪೆರಾಜೆ, ಸ್ವಾಗತ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು, ಡಾ.ಸುದೀಪ್ ಕುಮಾರ್, ರಮಾನಂದ, ಸೀತಾರಾಮ ಶೆಟ್ಟಿ ಮತ್ತಿತರರು ಇದ್ದರು.
