ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆವಶ್ಯಕವಾದ ಸೌಕರ್ಯ ಒದಗಿಸಲು ಸರಕಾರದಿಂದ ಬಿಡುಗಡೆಯಾಗಿರುವ ಒಟ್ಟು 2 ಕೋಟಿ ರೂ. ವಿಶೇಷ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸುವ ಕುರಿತಂತೆ ಬುಧವಾರ ಬಂಟ್ವಾಳ ಪುರಸಭೆಯ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಪುರಸಭಾ ಕಾರ್ಯವೈಖರಿಗೆ ದಲಿತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಎಸ್ಸಿ-ಎಸ್ಟಿ ಸಭೆಯಲ್ಲಿ ಕೈಗೊಂಡ ನಿರ್ಣಯ ಈವರೆಗೂ ಕಾರ್ಯಗತಗೊಳಿಸದ ಬಗ್ಗೆ ದಲಿತ ಮುಖಂಡ ಗಂಗಾಧರ, ವಿಶ್ವನಾಥ ಚೆಂಡ್ತಿಮಾರ್ ಸೇರಿದಂತೆ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು. ಸಭೆ ಆರಂಭವಾಗುತ್ತಿದ್ದಂತೆ ಸಭೆಯ ಬಗ್ಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಘಸಂಸ್ಥೆಗಳು ಹಾಗೂ ಕೆಲವು ಪ್ರಮುಖರಿಗೆ ಮಾಹಿತಿ ನೀಡಲಿಲ್ಲ ಎಂದು ಪ್ರತಿಮ ಎಂಬವರು ತಕರಾರು ತೆಗೆದರು. ಇತರರು ದ್ವನಿಗೂಡಿಸಿದರು. ಇದಕ್ಕೆ ದ್ವನಿಗೂಡಿಸಿದ ಸಮುದಾಯ ಅಧಿಕಾರಿ ಮತ್ತಡಿ ಪ್ರತಿಕ್ರಿಯಿಸಿ ಸಂಘ-ಸಂಸ್ಥೆಗಳ ಹಾಗೂ ಯಾರಿಗೆಲ್ಲ ಮಾಹಿತಿ ನೀಡಬೇಕೆಂಬ ಪಟ್ಟಿ ನೀಡುವಂತೆ ಕೋರಿದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು 225 ಪರಿಶಿಷ್ಟ ಜಾತಿ ಮತ್ತು ಪಂಗಡದ ಮನೆಗಳಿವೆ. ಸರಕಾರ ಬಿಡುಗಡೆ ಮಾಡಿರುವ 2 ಕೋಟಿ ರೂ. ಅನುದಾನದಲ್ಲಿ ಪಾಣೆಮಂಗಳೂರಿನ ಗುಡ್ಡಯಂಗಡಿ, ಶಾಂತಿ ಅಂಗಡಿಯಲ್ಲಿ ಸಮುದಾಯ ಭವನ ನಿರ್ಮಾಣ, ಎಸ್ಸಿ-ಎಸ್ಟಿ ಮನೆಗಳಿಗೆ ಸೋಲಾರ್ ಲೈಟ್ ಅಳವಡಿಕೆ, ಚೆಂಡ್ತಿಮಾರ್ ಮೈರಾನ್ ಪಾದೆಯಲ್ಲಿರುವ ಬಾವಿಗಳ ದುರಸ್ಥಿ, ಮನೆ ದುರಸ್ಥಿಗೆ ಅನುದಾನವನ್ನು ಮೀಸಲಿಡುವಂತೆ ದಲಿತ ಮುಖಂಡರು ಸಲ್ಲಿಸಿದ ಪ್ರಸ್ತಾಪಕ್ಕೆ ಸಭೆ ಅಸ್ತು ನೀಡಿತು.

1 (1)

2

3
ಯಾಕಾಗಿ ಹಣ?: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಹಣ ಯಾರಿಗೆ? ಭವನ ನಿರ್ಮಿಸಲೋ ಅಥವಾ ಕುಟುಂಬಗಳ ಏಲಿಗೆಗಾ ಎಂದು ಪ್ರತಿಮ ಪ್ರಶ್ನಿಸಿದರು. ಸಮುದಾಯದಲ್ಲಿ ಸ್ವ ಉದ್ಯೋಗ ಮಾಡುವವರಿಗೆ ಅನುದಾನ ನೀಡಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರೆ ಪುರಸಭಾ ವ್ಯಾಪ್ತಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯದ ಏಳಿಗೆಗೆ ಕಾರ್ಯ ಮಾಡುವ ಇಚ್ಛಾಸಕ್ತಿ ಇದ್ದರೆ ಪುರಸಭಾ ವ್ಯಾಪ್ತಿಯ ಎಸ್ಸಿ-ಎಸ್ಟಿ ಕಾಲನಿಯಲ್ಲಿರುವ ಹಂಚಿನ ಮನೆಯನ್ನು ಗುರುತಿಸಿ ಆರ್‍ಸಿಸಿ ಮನೆಯನ್ನಾಗಿ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಬೇಕು ಎಂದು ಸುರೇಶ್ ಅರ್ಬಿ ಸಲಹೆ ನೀಡಿದರು.
ಅಧಿಕಾರಿಗಳು ಹಾಗೂ ಸದಸ್ಯರು ಇಚ್ಛಾಸಕ್ತಿಯಿಂದ ಕೆಲಸ ಮಾಡಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದಲ್ಲಿ ಅಭಿವೃದ್ಧಿ ಸಾಧ್ಯ. ತನ್ಮೂಲಕ ಪುರಸಭೆಯು ಮುಂದಿನ ವರ್ಷ ಅಭಿವೃದ್ಧಿಯಲ್ಲಿ ಪ್ರಶಸ್ತಿ ಪಡೆದುಕೊಳ್ಳಬೇಕು ಎಂದು ಗಂಗಾಧರ್ ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ ಪುರಸಭಾ ಸದಸ್ಯ ವಾಸು ಪೂಜಾರಿ ಮಾತನಾಡಿ ಪುರಸಭಾ ವ್ಯಾಪ್ತಿಯ ಹಲವು ಎಸ್ಸಿ-ಎಸ್ಟಿಯವರ ಮನೆಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ. ಇದರಿಂದ ಅವರು ಸೌಲಭ್ಯ ವಂಚಿತರಾಗಿದ್ದಾರೆ. ಈ ಬಗ್ಗೆ ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದಾಗ ಗಂಗಾಧರ್ ಅವರು ಧ್ವನಿಗೂಡಿಸಿ ಹಕ್ಕು ಪತ್ರ ಇಲ್ಲದ ಮನೆಗಳನ್ನು ಗುರುತಿಸಿ ಅವರಿಗೆ ಹಕ್ಕು ಪತ್ರ ನೀಡುವ ವ್ಯವಸ್ಥೆಯನ್ನು ಪುರಸಭೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಆಳ್ವ ಮಾತನಾಡಿ ಅನುದಾನವನ್ನು ಸಮರ್ಪಕವಾಗಿ ಹಂಚುವ ನಿಟ್ಟಿನಲ್ಲಿ ಈ ವಿಶೇಷ ಸಭೆಯನ್ನು ಕರೆಯಲಾಗಿದೆ. ಎಲ್ಲರ ಸಲಹೆ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಧೂಳು ಮಯ: ಬಿ.ಸಿ.ರೋಡಿನಲ್ಲಿ ಹಾಗೂ ಬೊಂಡಾಲ ಪರಿಸರದಲ್ಲಿ ಪೈಪ್‍ಲೈನ್ ಅಳವಡಿಸಲು ಕೆಯುಡಬ್ಲ್ಯುಎಸ್ ರಸ್ತೆಯನ್ನು ಅಗೆದು ಹಾಕಿರುವುದರಿಂದ ಪರಿಸದ ಸಂಪೂರ್ಣ ಧೂಳುಮಯವಾಗಿದೆ. ಬಿ.ಸಿ.ರೋಡಿನ ಬಸ್ ತಂಗುದಾನದ ಬಳಿ ಸಾರ್ವಜನಿಕರು ಧೂಳಿನಿಂದ ರಸ್ತೆಯಲ್ಲಿ ನಿಲ್ಲದಂತ ಪರಿಸ್ಥಿತಿ ಉಂಟಾಗಿದೆ ಎಂದು ಗಂಗಾಧರ್ ಅವರು ಸಭೆಯ ಗಮನ ಸೆಳೆದರೆ ಬೊಂಡಾಲ ಪರಿಸರದಲ್ಲೂ ಇದೇ ಸ್ಥಿತಿ ಉಂಟಾಗಿದೆ. ನಡೆದಾಡುವುದು ದುಸ್ಥರವಾಗಿದೆ ಎಂದು ಸ್ಥಳೀಯರ ನಿಯೋಗವೊಂದು ಅಧ್ಯಕ್ಷರ ಗಮನ ಸೆಳೆಯಿತು.
ಈ ಬಗ್ಗೆ ಈಗಾಗಲೇ ಕೆಯುಡಬ್ಲ್ಯುಎಸ್ ಅಧಿಕಾರಿಗಳಿಗೆ ಧೂಳು ಏಳದಂತೆ ನೀರು ಚಿಮುಕಿಸಲು ಸೂಚಿಸಲಾಗಿದೆ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ ತಿಳಿಸಿದರಾದರೂ ಅವರ ಉತ್ತರದಿಂದ ಅಸಮಾಧ ವ್ಯಕ್ತಪಡಿಸಿದ ಗಂಗಾಧರ್ ಈವರೆಗೂ ನೀರು ಹಾಕಿಲ್ಲ. ನಾನೇ ಖುದ್ದಾಗಿ ಬಸ್ ತಂಗುದಾಣ ಪರಿಸರವನ್ನು ನೀರಿನಿಂದ ಸ್ವಚ್ಛಗೊಳಿಸಿದ್ದೇನೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಮಕೃಷ್ಣ ಆಳ್ವ ಕೆಯುಡಬ್ಲ್ಯುಎಸ್ ಅಧಿಕಾರಿಣಿಯ ದೂರವಾಣಿ ಸಂಖ್ಯೆಯನ್ನು ನೀಡಲಾಗುವುದು. ತಾವೇ ಅವರನ್ನು ಸಂಪರ್ಕಿಸಿ ಸಮಸ್ಯೆಯನ್ನು ವಿವರಿಸುವಂತೆ ತಿಳಿಸಿದರು.
ಪಲ್ಲಮಜಲು ಬಳಿ ಒಂದೇ ಮನೆಗೆ 3 ಅಕ್ರಮ ನೀರಿನ ಸಂಪರ್ಕವಿದ್ದು ಇದನ್ನು ಕಡಿತಗೊಳಿಸಿದಲ್ಲಿ ಪರಿಸರದ ಸುಮಾರು ಹತ್ತು ಮನೆಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುದು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಗಂಗಾಧರ್ ಒತ್ತಾಯಿಸಿದರು. ಸಭೆಯ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಮಂಡಾಡಿಯಲ್ಲಿ ಕೊಲಚೆ ನೀರು ರಸ್ತೆಯಲ್ಲೇ ಹರಿಯುತ್ತಿರುವ ಮತ್ತು ಸಾರ್ವಜನಿಕ ಬಾವಿಯನ್ನು ಕೂಡಾ ದುರಸ್ಥಿ ಪಡಿಸುವಂತೆ ಮನವಿ ಮಾಡಿದರೂ ಪುರಸಭೆ ಕ್ರಮ ಕೈಗೊಳ್ಳದ ಬಗ್ಗೆ ಪ್ರತಿಮ ಆಕ್ರೋಶ ವ್ಯಕ್ತಪಡಿಸಿದರು. ವಿಶ್ವನಾಥ್ ಚೆಂಡ್ತಿಮಾರ್ ಹಾಗೂ ಗಂಗಾಧರ್ ಇದಕ್ಕೆ ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್ ಸ್ಥಳೀಯ ಇಬ್ಬರು ನಿವಾಸಿಗಳ ಸಮಸ್ಯೆಯಿಂದ ಎಲ್ಲರಿಗೂ ತೊಂದರೆಯಾಗಿದೆ. ಬಾವಿ ದುರಸ್ಥಿಯ ಸಂದರ್ಭದಲ್ಲಿ ಸ್ಥಳೀಯ ಸದಸ್ಯ ಪಂಪನ್ನೇ ವಶಪಡಿಸಿಕೊಳ್ಳುವಂತೆ ಮೆಸ್ಕಾಂಗೆ ದೂರು ಕೊಟ್ಟಿರುವುದರಿಂದ ಇದರ ದುರಸ್ಥಿ ಕಾರ್ಯ ನಡೆಸಲಾಗಲಿಲ್ಲ ಎಂದು ಅಧ್ಯಕ್ಷ ರಾಮಾಕೃಷ್ಣ ಆಳ್ವ ಪ್ರತಿಕ್ರಿಯಿಸಿದರು.
ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ಪ್ರವೀನ್ ಬಿ., ಜಗದೀಶ್ ಕುಂದರ್, ಗಂಗಾಧರ್ ಪೂಜಾರಿ, ವಸಂತಿ ಚಂದಪ್ಪ, ಯಾಸ್ಮೀನ್, ಪ್ರಭಾ ಸಾಲ್ಯಾನ್, ಜೆಸಿಂತ, ಬಿ.ಮೋಹನ್ ಅವರು ಭಾಗವಹಿಸಿದ್ದರು. ಮತ್ತಡಿ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *