ಮೂಡುಬಿದಿರೆ:ಅಡುಗೆ ಅನಿಲ ಮತ್ತು ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾರ್ಚ್ 7ರಂದು ತಹಶಿಲ್ದಾರ್ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆಯನ್ನು ಏಕಾಏಕಿ ರೂ 86 ಹೆಚ್ಚಳ ಮಾಡಿದೆ. ಕೇವಲ ನಾಲ್ಕು ತಿಂಗಳಲ್ಲಿ ಸುಮಾರು ರೂ 300 ಹೆಚ್ಚಳವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಭಾರಿ ಇಳಿಕೆಯಾದರು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಲೆ ಇದೆ. ಇನ್ನೊಂದೆಡೆ ಬ್ಯಾಂಕ್‍ನಲ್ಲಿ ನಗದು ವ್ಯವಹಾರದ ಮೇಲೆ ಶುಲ್ಕ ವಿಧಿಸಲು ಸರಕಾರ ಮುಂದಾಗಿದ್ದು ಇದು ನೋಟು ಅಮಾನ್ಯದಿಂದ ತೊಂದರೆಗೊಳಗಾದವರಿಗೆ ಬರೆ ಎಳೆದಂತಾಗಿದೆ. ಸರಕಾರದ ಬೆಲೆ ಏರಿಕೆ ನೀತಿ ಜನಸಾಮಾನ್ಯರನ್ನು ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಮಂಗಳವಾರ ಬೆಳಿಗ್ಗೆ ಬ್ಲಾಕ್ ಕಾಂಗ್ರೆಸ್ ಕಛೇರಿ ಬಳಿಯಿಂದ ತಹಶಿಲ್ದಾರ್ ಕಛೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ನಂತರ ಪ್ರತಿಭಟನೆ ಸಭೆ ನಡೆಸಲಾಗುವುದು. ಬಳಿಕ ಸರಕಾರಕ್ಕೆ ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಮಹಿಳೆಯರಿಗೆ ತೊಂದರೆ:ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಿದ್ದ ಕೇಂದ್ರ ಸರ್ಕಾರ ಈಗ ಬೆಲೆ ಏರಿಕೆ ಮಾಡುವ ಮೂಲಕ ಬಡವರಿಗೆ ಅದರಲ್ಲು ಮುಖ್ಯವಾಗಿ ಮಹಿಳೆಯರಿಗೆ ತೊಂದರೆ ಉಂಟುಮಾಡಿದೆ. ಸರಕಾರದ ಧೋರಣೆ ವಿರುದ್ಧ ಮಹಿಳೆಯರು ಸಿಡಿದೇಳುವ ದಿನ ಬಂದಿದೆ ಎಂದು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ ಆರೋಪಿಸಿದರು.
ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರತ್ನಾಕರ ಸಿ. ಮೊಯಿಲಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
