ಬಂಟ್ವಾಳ:ಈ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಚ್ಪಿಸಿಎಲ್ ಮತ್ತು ಒಎನ್ಜಿಸಿ ಮೂಲಕ ಪೆಟ್ರೊನೆಟ್ ಸಂಸ್ಥೆಯು ಮಂಗಳೂರು-ಹಾಸನ-ಬೆಂಗಳೂರು ಮಾರ್ಗವಾಗಿ ಇಂಧನ ಸಾಗಿಸುವ ಪೈಪ್ಲೈನ್ ಕಾಮಗಾರಿ ಯಶಸ್ವಿಯಾಗಿ ನಡೆಸಿ ಇದೀಗ ಗಳಿಸಿದ ಲಾಭಾಂಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಶೇ.2ರಷ್ಟು ಮೊತ್ತವನ್ನು ವಿನಿಯೋಗಿಸುತ್ತಿದೆ ಎಂದು ಮಂಗಳೂರಿನ ಪೆಟ್ರೋನೆಟ್ ಎಂಎಚ್ಬಿ ಲಿಮಿಟೆಡ್ ಸಂಸ್ಥೆ ಮೇಲ್ವಿಚಾರಕ ಜಿ.ರಾಜನ್ ಹೇಳಿದ್ದಾರೆ.

ತಾಲ್ಲೂಕಿನ ಅರಳ ಗ್ರಾಮ ಪಂಚಾಯಿತಿನಲ್ಲಿ ಗುರುವಾರ ನಡೆದ ರೂ 7.5ಲಕ್ಷ ವೆಚ್ಚದ 6 ಹೈಮಾಸ್ಟ್ ದೀಪ ಮತ್ತು ಒಂದು ಕೊಳವೆ ಬಾವಿ (ಪಂಪ್ ಸಹಿತ) ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈಗಾಗಲೇ ಮಂಗಳೂರು ತಾಲ್ಲೂಕಿನ ಆದ್ಯಪಾಡಿ, ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು, ಅರಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂತಹ ಸೇವಾ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ವಿವರಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ, ಸದಸ್ಯ ಡೊಂಬಯ ಬಿ.ಅರಳ ಮತ್ತಿತರರು ಶುಭ ಹಾರೈಸಿದರು. ಇದೇ ವೇಳೆ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ, ರಂಜನಿ, ಲಕ್ಷ್ಮೀಧರ ಪೂಜಾರಿ, ಮಹಮ್ಮದ್ ಆಶ್ರಫ್, ಝುಲೇಕ ಮತ್ತಿತರರು ಇದ್ದರು. ಸಂಸ್ಥೆ ಉಪ ವ್ಯವಸ್ಥಾಪಕ ಮಹೇಶ ಹೆಗ್ಡೆ ಸ್ವಾಗತಿಸಿ, ಪ್ರ್ರಾಸ್ತಾವಿಕ ಮಾತನಾಡಿದರು. ಮಾ.9ರಂದು ಅರಳ ಗ್ರಾಮದಲ್ಲಿ ಇಂಧನ ಪೈಪ್ಲೈನ್ ಬಗ್ಗೆ ಜನ ಜಾಗೃತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಾಯ್ಲೆಟ್ ಮಿನೇಜಸ್ ವಂದಿಸಿದರು.
