ಮೂಡುಬಿದಿರೆ: ಇಲ್ಲಿನ ಮಿತ್ತಬೈಲಿನ ಲಾರೆನ್ಸ್ ಮಿರಾಂದಾ ಅವರ ನಾಲ್ಕು ಎಕರೆ ಗೇರು ತೋಟಕ್ಕೆ ಗುರುವಾರ ಅಪರಾಹ್ನ ಬೆಂಕಿ ತಗುಲಿದ್ದು ಗೇರು ಮರಗಳು ಸುಟ್ಟುಹೋಗಿವೆ. ಕೆಡಿಪಿ ಸದಸ್ಯರಾಗಿರುವ ಸ್ಥಳೀಯ ಮಿತ್ತಬೈಲು ವಾಸುದೇವ ನಾಯಕ್ ಅವರು ಕೂಡಲೇ ಮೂಡುಬಿದಿರೆ, ಮಂಗಳೂರಿನ ಅಗ್ನಿಶಾಮಕ ದಳವನ್ನು ಸಂಪರ್ಕಿಸಿದ್ದು ಅವರು ಕಾರ್ಯನಿರತರಾಗಿದ್ದ ಕಾರಣ ಕೊನೆಗೆ ಕಾರ್ಕಳದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ. ಪುತ್ತಿಗೆ ಗ್ರಾಮಕರಣೀಕರು ಸ್ಥಳ ಪರಿಶೀಲನೆ ನಡೆಸಿ ನಷ್ಟ ಅಂದಾಜಿಸಿದ್ದಾರೆ. ಸುಮಾರು 400ರಿಂದ 500 ಗೇರು ಗಿಡಗಳು ಹಾನಿಗೊಳಗಾಗಿವೆ ಎಂದು ತಿಳಿದು ಬಂದಿದೆ. ರಾತ್ರಿ 9ರ ವೇಳೆಗೆ ಮತ್ತೆ ಲಾರೆನ್ಸ್ ಅವರ ತೋಟದಲ್ಲಿ ಬೆಂಕಿ ಕಾಣಿಸಿಕೊಂಡು ಅದು ಹತ್ತಿರದ ಸರಕಾರಿ ಅರಣ್ಯವಿರುವ ಗುಡ್ಡ ಪ್ರದೇಶಕ್ಕೆ ವ್ಯಾಪಿಸಿದ್ದು ಮೂಡುಬಿದಿರೆ ಅಗ್ನಿಶಾಮಕ ದಳ ನೆರವಿಗೆ ಧಾವಿಸಿತು.

