ಬಂಟ್ವಾಳ:ಮಂಗಳೂರಿನ ಸೌಹಾರ್ಧ ರ್ಯಾಲಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ವಿರೋಧಿಸಿ ಜಿಲ್ಲೆಯ ಸಂಘ ಪರಿವಾರ ನೀಡಿದ ಬಂದ್ ಕರೆಗೆ ಬಂಟ್ವಾಳ ತಾಲ್ಲೂಕಿನಲ್ಲಿ ಶನಿವಾರ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದ ಪರಿಣಾಮ ಇಲ್ಲಿನ ಬಿ.ಸಿ.ರೋಡ್ ಸಹಿತ ನಗರ ಪ್ರದೇಶಗಳಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದೆ. 1 (2)

3 (1)

25btl-Bcroad

ಇಲ್ಲಿನ ಬಹುತೇಕ ಅಂಗಡಿ, ಹೋಟೆಲ್, ಸಹಕಾರಿ ಸಂಸ್ಥೆ ಮತ್ತಿತರ ಕಚೇರಿಗಳು ಮುಚ್ಚಿಕೊಂಡಿದ್ದು, ಅಟೋರಿಕ್ಷಾ ಮತ್ತು ಜನಸಂಚಾರವೂ ದಿನವಿಡೀ ವಿರಳವಾಗಿತ್ತು. ಆದರೆ ಇಲ್ಲಿನ ಬ್ಯಾಂಕ್, ಎಲ್ಲೈಸಿ, ಅರೆ ಸರ್ಕಾರಿ ಕಚೇರಿಗಳು ಅರ್ಧ ಬಾಗಿಲು ತೆರೆದು ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿದೆ. ಆರಂಭದಲ್ಲಿ ಕೆಲವೊಂದು ಲಾರಿ, ಟ್ಯಾಂಕರ್, ಸರ್ಕಾರಿ ಬಸ್ ಓಡಾಟ ಆರಂಭಿಸಿತ್ತಾದರೂ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರಿಗೆ ಬೆಂಕಿ ಮತ್ತು ತುಂಬೆ ರಾಷ್ಟ್ರೀಯ ಹೆದ್ದಾರಿ ಬಳಿ ಸರ್ಕಾರಿ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದ ಪರಿಣಾಮ ಸಂಚಾರ ನಿಲುಗಡೆಗೊಳಿಸಿದರು.
ಬಿ.ಸಿ.ರೋಡ್ ಪೇಟೆ ಸಹಿತ ಬಂಟ್ವಾಳ ಪೇಟೆ, ಕಲ್ಲಡ್ಕ, ಮೆಲ್ಕಾರ್, ಸಿದ್ದಕಟ್ಟೆ, ಪುಂಜಾಲಕಟ್ಟೆ, ಮಾಣಿ ಪೇಟೆ ಸಂಪೂರ್ಣ ಬಂದ್ ಆಗಿದೆ. ಇಲ್ಲಿನ ಕೈಕಂಬ, ಫರಂಗಿಪೇಟೆ, ಪಾಣೆಮಂಗಳೂರು, ಮಂಚಿ ಕುಕ್ಕಾಜೆ, ಕಾವಳಪಡೂರು, ರಾಯಿ, ವಾಮದಪದವು ಮತ್ತಿತರ ಪ್ರದೇಶಗಳಲ್ಲಿ ಕೂಡಾ ಕೆಲವೊಂದು ಅಂಗಡಿ ಮುಂಗಟ್ಟು ತೆರೆದಿದ್ದು, ಉಳಿದಂತೆ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಲ್ಲಿನ ನಗರ ಪ್ರದೇಶದಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳ ಗೈರು ಹಾಜರಿ ಹಿನ್ನೆಲೆಯಲ್ಲಿ ತರಗತಿ ನಡೆಸಲಾಗಿಲ್ಲ. ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಧಾವಂತದಿಂದ ದ್ವಿಚಕ್ರ ವಾಹನ ಮತ್ತಿತರ ಖಾಸಗಿ ವಾಹನಕ್ಕೆ ಮೊರೆ ಹೋಗುತ್ತಿದ್ದ ದೃಶ್ಯವೂ ಕಂಡು ಬಂದಿದೆ.
ಬಿಗಿ ಬಂದೋಬಸ್ತ್:
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ತಡೆ ಉಂಟಾಗದಂತೆ ತಡೆಯಲು ರಸ್ತೆಯುದ್ದಕ್ಕೂ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಬಹುತೇಕ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕೆಮರಾ ಕಣ್ಗಾವಲು ಇಡಲಾಗಿದೆ ಎಂಬ ನಾಮಫಲಕವೂ ಕಂಡು ಬಂದಿದೆ. ಐಜಿಪಿ ಹರಿಶೇಖರನ್, ಎಸ್ಪಿ ಗುಲಾಬ್ ಜಿ. ಬೊರಸೆ ಮತ್ತಿತರ ಪೊಲೀಸ್ ಅಧಿಕಾರಿಗಳು ಬಂಟ್ವಾಳ ನಗರ ಠಾಣೆಗೆ ಭೇಟಿ ನೀಡಿ, ಹೆದ್ದಾರಿ ಗಸ್ತಿನ ಬಗ್ಗೆ ಪರಾಮರ್ಶೆ  ನಡೆಸಿದರು.

By Suddi9

Leave a Reply

Your email address will not be published. Required fields are marked *