ಬಂಟ್ವಾಳ:ಬದುಕಿನಲ್ಲಿ ಮೌಲ್ಯಗಳನ್ನು ಉಳಿಸಿಕೊಂಡ ನೈಜ ನೇತಾರ ಡಾ. ಅಮ್ಮೆಂಬಳ ಬಾಳಪ್ಪ ಅವರು ಜೀವನದ ಉದ್ದಕ್ಕೂ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ಪರವಾಗಿ ದುಡಿದು ಇತರರಿಗೆ ಮಾರ್ಗದರ್ಶಕರಾಗಿದ್ದರು ಎಂದು ಮಂಗಳೂರು ವಿ.ವಿ.ಸಿಂಡಿಕೇಟ್ ಮಾಜಿ ಸದಸ್ಯ ಪಿ.ವಿ.ಮೋಹನ್ ಹೇಳಿದರು.
ಬಂಟ್ವಾಳ ಎಸ್‍ವಿಎಸ್ ಪದವಿ ಕಾಲೇಜಿನಲ್ಲಿ ಡಾ.ಅಮ್ಮೆಂಬಳ ಬಾಳಪ್ಪ ಸೇವಾ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಏರ್ಪಡಿಸಿದ್ದ ಡಾ. ಅಮ್ಮೆಂಬಳ ಬಾಳಪ್ಪರ 96ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ರಾಮ್‍ಮನೋಹರ ಲೋಹಿಯಾ ಅಭಿಮಾನಿಯಾಗಿದ್ದ ಬಾಳಪ್ಪರು ಮಾನವೀಯ ಮೌಲ್ಯಗಳಿಗೆ ಬದುಕಿನಲ್ಲಿ ಹೆಚ್ಚಿನ ಒತ್ತು ನೀಡಿದ್ದು, ಜೀವನ ಮೌಲ್ಯ ಎಂದಿಗೂ ಅನುಕೂಲಕ್ಕೆ ತಕ್ಕಂತೆ ಬದಲಾಯಿಸದೆ ದ್ವೇಷ ಮತ್ತು ಅಸಹಿಷ್ಣುತೆ ವಿರುದ್ಧ ದಿಟ್ಟ ಹೆಜ್ಜೆ ಇಟ್ಟಿದ್ದರು. ಧರ್ಮದ ಹೆಸರಿನಲ್ಲಿ ರಾಜಕೀಯ ಸಲ್ಲದು. ದೇಶವು ಧರ್ಮ ನಿರಪೇಕ್ಷಿತ ಸಿದ್ದಾಂತ ಹೊಂದಿದೆ ಎಂಬ ವಾದ ಅವರಲ್ಲಿತ್ತು ಎಂದು ವಿವರಿಸಿದರು.
ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಮೋಹನ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಳಪ್ಪರು ಬಂಟ್ವಾಳ ತಾಲ್ಲೂಕಿನವರು ಎಂಬುದು ಹೆಮ್ಮೆಯ ವಿಚಾರವಾಗಿದ್ದು ಅವರು ಪತ್ರಿಕಾ ಬರಹಗಾರರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಪ್ರತಿಷ್ಠಾನ ಅಧ್ಯಕ್ಷ, ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಶುಭ ಹಾರೈಸಿದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ. ಕುಲಾಲ್ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಮುಖಂಡ ಎ. ಸಿ.ಭಂಡಾರಿ, ಸಮಾಜ ಸೇವಾ ಸಹಕಾರಿ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಕೆ. ದಯಾನಂದ ಬೆಳ್ಳೂರು ಮತ್ತಿತರರು ಉಪಸ್ಥಿತರಿದ್ದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪೆÇ್ರ. ಕೆ.ತುಕರಾಮ ಪೂಜಾರಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ತಮ್ಮಯ್ಯ, ಬಂಟ್ವಾಳ ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದಾಮೋದರ ಬಿ.ಎಂ., ಧರ್ಮ ಜಾಗರಣ ಪ್ರತಿಷ್ಠಾನ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಅರಣ್ಯ ಅಭಿವೃದ್ಧಿ ನಿಗಮ ಸದಸ್ಯ ಪರಮೇಶ್ವರ ಎಂ., ಬಂಟ್ವಾಳ ಸಿಪಿಐ ಕಾರ್ಯದರ್ಶಿ ಶೇಖರ ಬಿ., ಭೂನ್ಯಾಯ ಮಂಡಳಿ ಮಾಜಿ ಸದಸ್ಯ ಮುತ್ತಪ್ಪ ಪೂಜಾರಿ ಮತ್ತಿತರರು ಇದ್ದರು.
ಬಂಟ್ವಾಳ ತಾಲ್ಲೂಕು ಕನ್ನಡ ಭವನ ನಿರ್ಮಾಣ ಸಮಿತಿ ಸಂಚಾಲಕ ಗಂಗಾಧರ ಭಟ್ ಕೊಳಕೆ ಸ್ವಾಗತಿಸಿ, ಪ್ರತಿಷ್ಠಾನ ಕಾರ್ಯದರ್ಶಿ ಉಮೇಶ್ ಪಿ. ಕೆ. ವಂದಿಸಿದರು. ಉಪನ್ಯಾಸಕ ಚೇತನ್ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
