`ಕೆರೆ ಸಂಜೀವಿನಿ ಯೋಜನೆ’ಯಡಿ ಹಾಳುಬಿದ್ದಿರುವ ಕೆರೆಗಳನ್ನು ದುರಸ್ತಿಗೆ ಸೂಚನೆ
ಮೂಡುಬಿದಿರೆ: ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳನ್ನು ಸರ್ಕಾರವು ಬರ ಪೀಡಿತ ಪ್ರದೇಶಗಳೆಂದು ಸಾರಿರುವ ಹಿನ್ನೆಲೆಯಲ್ಲಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಉದ್ಯೋಗ ಅವಕಾಶ ಕಲ್ಪಿಸುವ ದಿಸೆಯಲ್ಲಿ ವಿಧಾನಸಭಾ ಕ್ಷೇತ್ರ ವಿಪತ್ತು ನಿರ್ವಹಣಾ ಸಮಿತಿಯ ಸಭೆಯು ಸಮಿತಿ ಅಧ್ಯಕ್ಷ , ಶಾಸಕ ಕೆ. ಅಭಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಮೂಡಬಿದಿರೆ ತಹಸೀಲ್ದಾರರ ಕಚೇರಿಯಲ್ಲಿ ನಡೆಯಿತು.
ವಿಶೇಷವಾಗಿ ನಿರ್ವಹಣೆ ಇಲ್ಲದೆ ಹಾಳುಬಿದ್ದಿರುವ ಕೆರೆಗಳನ್ನು `ಕೆರೆ ಸಂಜೀವಿನಿ ಯೋಜನೆ’ಯಡಿ ದುರಸ್ಥಿಗೊಳಿಸುವ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಿ ಕೂಡಲೇ ಸಮಿತಿಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ತಹಶೀಲ್ದಾರ ಮಹಮ್ಮದ್ ಇಸಾಕ್ ಸೂಚಿಸಿದರು. ಖಾಸಗಿಯವರಿಗೆ ಬೋರ್‍ವೆಲ್ ತೋಡಲು ಈಗ ನಿಯಮಾನುಸಾರ ಅವಕಾಶ ಕಲ್ಪಿಸಲಾಗಿದ್ದು ಈ ಕುರಿತ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಉದ್ಯೋಗಾವಕಾಶ ಹೆಚ್ಚಿಸಲು ಶಾಲೆಗಳ ಮೈದಾನ ದುರಸ್ತಿ, ವಿಸ್ತರಣೆ ಮೊದಲಾದ ಕಾಮಗಾರಿಗಳನ್ನು ನಡೆಸಲು ಯೋಜನೆ ಹಾಕಿಕೊಳ್ಳಬೇಕು. ಈ ಎಲ್ಲ ಕಾರ್ಯಗಳಲ್ಲಿ ಪಂ. ಅಭಿವೃದ್ದಿ ಅ„ಕಾರಿಗಳು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ಶಾಸಕ ಅಭಯಚಂದ್ರ ಹೇಳಿದರು.
ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆ ಇದೆಯೇ ಎಂದು ಸಭೆಯಲ್ಲಿ ವಿಚಾರಿಸಿದಾಗ ಅಂಥ ಸಮಸ್ಯೆ ಇಲ್ಲ ಎಂದು ವ್ಯಕ್ತವಾಯಿತು.
ಮೂಡುಬಿದಿರೆಯಲ್ಲಿ ರೋಟರಿ ಕ್ಲಬ್ ಗುರುತಿಸಿರುವ 18 ಕೆರೆಗಳ ಪೈಕಿ ಮೊಹಲ್ಲ ಕೆರೆ ಸೇರಿದಂತೆ ಎರಡನ್ನಾದರೂ ಪುನಶ್ಚೇತನಗೊಳಿಸಲು ಯೋಜನೆ ಹಾಕಿಕೊಂಡಿರುವುದಾಗಿ ರೋಟರಿ ಕ್ಲಬ್‍ನ ಡಾ. ಮುರಳೀಕೃಷ್ಣ ತಿಳಿಸಿದರು. ಇದರ ಬಗ್ಗೆ ಲೈನ್ ಎಸ್ಟಿಮೇಟ್ ಕೊಡಿ ಎಂದು ಶಾಸಕರು ಸೂಚಿಸಿದರು.
ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಜಿ. ಸದಾನಂದ, ಮುಲ್ಕಿ ವಿಶೇಷ ತಹಶೀಲ್ದಾರ್ ಕಿಶೋರ್ ಕುಮಾರ್ ಕೆ., ಮುಲ್ಕಿ ಪುರಸಭಾ ಮುಖ್ಯಾಧಿಕಾರಿ ಇಂದು, ಮೂಡಬಿದಿರೆ ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್, ಸಹಾಯಕ ತೋಟಗಾರಿಕಾ ಅಧಿಕಾರಿ ಸುಕುಮಾರ್ ಹೆಗ್ಡೆ, ಕ್ಷೇತ್ರ ದೈ.ಶಿ. ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಮೊದಲಾದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

By Suddi9

Leave a Reply

Your email address will not be published. Required fields are marked *