ಬಂಟ್ವಾಳ : ಅಣೆಕಟ್ಟು, ಕಿಂಡಿಅಣೆಕಟ್ಟುಗಳು ಅಂತರ್ಜಲ ಸಂರಕ್ಷಣೆಗೆ ಹೆಚ್ಚು ಸಹಕಾರಿಯಾಗುತ್ತದೆ, ಈ ನಿಟ್ಟಿನಲ್ಲಿ ಸರ್ಕಾರವೂ ಇಂತಹ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಸಜಿಪಮುನ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ತಾಪ್ತಿಯ ಸಜಿಪಮೂಡ ಗ್ರಾಮದ ಕಲ್ಲಗುಂಡಿ ಎಂಬಲ್ಲಿ 1 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗಳ್ಳಲಿರುವ ಕಿಂಡಿಅಣೆಕಟ್ಟು ಕಾಮಗಾರಿಗೆ ಅವರು ಶನಿವಾರ ಸಂಜೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ತುಂಬೆಯ ನೂತನ ವೆಂಟೆಡ್ ಡ್ಯಾಂನಲ್ಲಿ ನೀರು ಸಂಗ್ರಹ ಆರಂಭವಾದ ಬಳಿಕ ನದಿ ತಟದ ಕೃಷಿಕರಿಗೆ ಹೆಚ್ಚು ಅನುಕೂಲವಾಗಿದೆ, ಇದರಿಂದ ನಮ್ಮ ತಾಲೂಕಿನಲ್ಲಿ ಅಂತರ್ಜಲಮಟ್ಟದ ಏರಿಕೆಗೂ ನೆರವಾಗಿದೆ ಎಂದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಮಾತನಾಡಿ, ಗ್ರಾಮಸ್ಥರ ಬಹುಕಾಲದ ಬೇಡಿಕೆಯಂತೆ ಸಜಿಪಮೂಡ ಹಾಗೂ ಅಮ್ಟೂರು ಗ್ರಾಮಗಳನ್ನು ಸಂಪರ್ಕಿಸುವ ಈ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ, ಈ ಅಣೆಕಟ್ಟಿನಲ್ಲಿ ನಾಲ್ಕು ಚಕ್ರದ ವಾಹನಗಳ ಸಂಚಾರಕ್ಕೂ ಅವಕಾಶ ಒದಗಿಸಿ ಯೋಜನೆ ರೂಪಿಸಲಾಗಿದೆ ಎಂದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯ ಸಂಜೀವ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ಗಣಪತಿಭಟ್, ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಎಪಿಎಂಸಿ ಸದಸ್ಯ ಪದ್ಮನಾಭ ರೈ , ಇಂಜಿನಯರ್ ಪ್ರಸನ್ನ, ವಿಶ್ವನಾಥ ಬೆಳ್ಚಡ, ಗ್ರಾಮಪಂಚಾಯತ್ ಸದಸ್ಯರು, ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು. ಅಝೀಜ್ ಬೊಳ್ಳಾಯಿ ಕಾರ್ಯಕ್ರಮ ನಿರ್ವಹಿಸಿದರು.



