ಬಂಟ್ವಾಳ: ತಾಲೂಕಿನ ಅರಳ ಗ್ರಾಮವನ್ನು ದತ್ತು ತೆಗೆದುಕೊಂಡು ಮೂಲಸೌಕರ್ಯ ಒದಗಿಸುವ ಕಾರ್ಯವನ್ನು ರೋಟರಿ ಕ್ಲಬ್ ಬಂಟ್ವಾಳ ಮಾಡಿದೆ ಎಂದು ರೋಟರಿ ಜಿಲ್ಲೆ 3181 ಗವರ್ನರ್ ಡಾ.ಆರ್.ಎಸ್.ನಾಗಾರ್ಜುನ ಹೇಳಿದರು.ಬಂಟ್ವಾಳ ರೋಟರಿ ಕ್ಲಬ್ ನಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರೋಟರಿ ಕ್ಲಬ್ ನಮ್ಮ ಹಳ್ಳಿ ರೋಟರಿ ಜಿಲ್ಲಾ ಯೋಜನೆಯಂತೆ ನಡೆಸುವ ಕಾರ್ಯಕ್ರಮ ಇದಾಗಿದ್ದು, ಈಗಾಗಲೇ 5 ಲಕ್ಷ ರೂ ಕಾಮಗಾರಿ ನಡೆದಿದೆ ಎಂದರು. ರೋಟರಿ ದತ್ತಿನಿಧಿಗೆ ಬಂಟ್ವಾಳ ಕ್ಲಬ್ ಸದಸ್ಯರಿಂದ ಈಗಾಗಲೇ 12 ಸಾವಿರ ರೂ ಪಾವತಿಸಿದ್ದು, 20 ಸಾವಿರ ಡಾಲರ್ ಪಾವತಿಸುವ ಗುರಿ ಇದೆ. ಶಿಕ್ಷಣ, ಆರೋಗ್ಯ ಸೇವೆಗಳಲ್ಲಿ ರೋಟರಿ ಬಂಟ್ವಾಳ ಮುಂಚೂಣಿಯಲ್ಲಿದೆ. ಮಧುಮೇಹ ತಪಾಸಣೆಯಂತೂ ಜನಪ್ರಿಯವಾಗಿದೆ ಎಂದು ಹೇಳಿದರು. ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಬಳಿ ಕುಡಿಯು ನೀರು ಟ್ಯಾಂಕ್, ಶಾಲೆಗೆ ಸುಸಜ್ಜಿತ ಶೌಚಾಲಯ, ಗ್ರಾಪಂ ಅಪೇಕ್ಷೆಯಂತೆ ಮೂಲರಪಟ್ನ, ಆಜಾದ್ ನಗರ, ಕಂಡದೊಟ್ಟು, ಎರ್ಮಾಳುಪದವಿನಲ್ಲಿ ಪ್ರಯಾಣಿಕರ ತಂಗುದಾಣ, ಹತ್ತು ಕಡೆಗಳಲ್ಲಿ ಸೋಲಾರ್ ಲೈಟುಗಳ ಅಳವಡಿಕೆ ನಡೆದಿದೆ. ಇವೆಲ್ಲವೂ ಗ್ರಾಪಂ ಸೂಚಿಸಿದ ಜಾಗಗಳಲ್ಲಿ ಆಗಿದ್ದು, ಒಟ್ಟು 10 ಲಕ್ಷ ರೂಪಾಯಿಗಳ ಯೋಜನೆ ನಮ್ಮ ಹಳ್ಳಿ ಯಾಗಿದೆ ಎಂದು ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ರಿತೇಶ್ ಬಾಳಿಗಾ ಮಾಹಿತಿ ನೀಡಿದರು. ಈ ಸಂದರ್ಭ ಸಹಾಯಕ ಗವರ್ನರ್ ಸಂತೋಷ್ ಕುಮಾರ್ ಶೆಟ್ಟಿ, ಬಂಟ್ವಾಳ ರೋಟರಿ ಕಾರ್ಯದರ್ಶಿ ಮಹಮ್ಮದ್ ವಳವೂರು ಉಪಸ್ಥಿತರಿದ್ದರು.
