ಬಂಟ್ವಾಳ: ಅವಧಿಗೂ ಮುನ್ನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಪತನವಾಗಲು ಅದು ಕುಂಬಾರ ಮಾಡಿದ ಮಡಿಕೆನಾ ? ಎಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಹೇಳಿಕೆಗೆ ನೀಡಿರುವ ತಿರುಗೇಟು ರಾಜ್ಯದ ಕುಲಾಲ, ಕುಂಬಾರ ಸಮುದಾಯವನ್ನು ಕೆರಳಿಸಿದೆ.
ಡಿಕೆಶಿ ಹೇಳಿಕೆಯ ವಿರುದ್ದ ಕುಲಾಲ, ಕುಂಬಾರ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದ್ದು ಕುಂಬಾರ ಸಮುದಾಯದ ಕ್ಷಮೆ ಕೇಳುವಂತೆ ಆಗ್ರಹಿಸಿದೆ. ಕಠಿಣ ಶ್ರಮಕ್ಕೆ ನ್ಯಾಯ ನೀತಿಗೆ ಸತ್ಯ ಸಂಧತೆಗೆ ಹೆಸರಾಗಿರುವ ಪಂಚ ಭೂತಗಳಾದ ನೀರು, ಮಣ್ಣು, ಗಾಳಿ, ಬೆಂಕಿ ಹಾಗೂ ಪ್ರಕೃತಿಯ ಕಟ್ಟಿಗೆಯನ್ನು ಉಪಯೋಗಿಸಿ ಮಡಿಕೆ ಮಾಡಿ ಹಸಿ ತಿನ್ನುತ್ತಿದ್ದವರಿಗೆ ಸಂಸ್ಕಾರ ಹೇಳಿ ಕೊಟ್ಟ ಕುಂಬಾರ ಜನಾಂಗವನ್ನ ತೀರಾ ನಿಕೃಷ್ಠ ಹಾಗೂ ನಿರ್ಲಕ್ಷವಾಗಿ ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ್ದನ್ನು ಕರ್ನಾಟಕದ 20 ಲಕ್ಷ ಕುಂಬಾರರು ಖಂಡಿಸುತ್ತಾರೆ. ಸರಕಾರದ ಮಂತ್ರಿಯಾಗಿದ್ದುಕೊಂಡು ಜವಬ್ದಾರಿ ಸ್ಥಾನದಲ್ಲಿರುವ ಡಿ.ಕೆ. ಶಿವಕುಮಾರ್ ಅವರು ಇಂತಹ ಮಾತನ್ನು ಆಡಬಾರದಿತ್ತು. ಇದು ಅವರು ಎರಡನೇ ಬಾರಿ ಕುಂಬಾರ ಜನಾಂಗಕ್ಕೆ ಮಾಡಿದ ಅವಮಾನ ಎಂದು ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕಾರ್ಯಾಧ್ಯಕ್ಷ ಡಾ. ಎಂ.ಅಣ್ಣಯ್ಯ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಬಗ್ಗೆ ಖಂಡನಾ ಹೇಳಿಕೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ತಲುಪಿಸಲು ಎಲ್ಲಾ ಕರಾವಳಿ, ಕುಲಾಲ ಕುಂಬಾರ ಯುವ ವೇದಿಕೆ ಸಂಘಟನೆಗಳು ನಿರ್ಧರಿಸಿವೆ.
