ಬಂಟ್ವಾಳ: ಅಪನಂಬಿಕೆ, ಅವಿಶ್ವಾಸಗಳು ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರಲ್ಲೂ ಆತ್ಮಶುದ್ದೀಕರಣವಾಗುವ ಕೆಲಸ ಆಗಬೇಕು, ದೇವಸ್ಥಾನದ ಬ್ರಹ್ಮಕಲಶವಾಗುವಂತೆ ಆತ್ಮದ ಬ್ರಹ್ಮಕಲಶ ಆಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದಾಲಯ ಬಿ.ಸಿ.ರೋಡು ಇದರ ಸೇವಾ ಕೇಂದ್ರದ ನೂತನ ಕಟ್ಟಡ ಶಿವಜ್ಯೋತಿ ಭವನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮನಸ್ಸು ಕಲುಷಿತವಾದರೆ ಸತ್ಯ, ಧರ್ಮ, ನ್ಯಾಯದಿಂದ ಮಾತ್ರ ಶುದ್ದೀಕರಣ ಮಾಡಲು ಸಾಧ್ಯ. ಪ್ರತಿಯೊಬ್ಬರ ಮನಸ್ಸು ಮಗುವಿನ ಮನಸ್ಸು ಆದಾಗ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಈಶ್ವರೀಯ ವಿಶ್ವವಿದ್ಯಾಲಯದ ವಲಯ ನಿರ್ದೇಶಕ ಡಾ. ಬ್ರ.ಕು. ಬಸವರಾಜ ರಾಜಋಷಿಗಳು ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ನಾವೆಲ್ಲಾ ಆತ್ಮಗಳಾಗಿದ್ದೇವೆ, ಶರೀರಗಳಲ್ಲ. ಯಾವುದೇ ಧರ್ಮ, ಜಾತಿಯಿಲ್ಲ. ನಮ್ಮೆಲ್ಲಾ ಆತ್ಮಗಳ ತಂದೆ ಒಬ್ಬನೇ ಆಗಿದ್ದಾರೆ. ಇಂತಹ ಆಧ್ಯಾತ್ಮಿಕ ಶ್ರೇಷ್ಠ ಶಿಕ್ಷಣ ಇಂದು ಈ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯಿಂದ ನೀಡಲಾಗುತ್ತಿದೆ ಎಂದರು. ವರಿಷ್ಠ ರಾಜಯೋಗ ಶಿಕ್ಷಕಿ ಶಕುಂತಲಜೀ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಪ್ರಗತಿಪರ ಕೃಷಿಕ ರಾಜೇಶ್ನಾೈಕ್ ಉಳಿಪಾಡಿಗುತ್ತು, ತಹಶೀಲ್ದಾರ್ ಪುರಂದರ ಹೆಗ್ಡೆ, ಉದ್ಯಮಿ ಐತಪ್ಪ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಿ.ಸಿ.ರೋಡು ಕೇಂದ್ರದ ಸಂಯೋಜಕ ರಾಜಯೋಗಿ ಬ್ರ.ಕು. ಗಣಪತಿ ಭಟ್ ಸ್ವಾಗತಿಸಿದರು, ವಿಶ್ವೇಶ್ವರೀ ಈಶ್ವರೀಯ ಸಂದೇಶ ನೀಡಿದರು. ಶಾಂತಕ್ಕ ಪಯ್ಯನ್ನೂರು ಕಾರ್ಯಕ್ರಮ ನಿರೂಪಿಸಿದರು. ಕಟ್ಟಡ ದಾನಿ ಸುಶೀಲ, ಬಿ.ಸಿರೋಡು ಸೇವಾಕೆಂದ್ರದ ಸಂಚಾಲಿಕೆ ಸಾವಿತ್ರಿ, ಗಣಪತಿ ಭಟ್ ಹಾಗೂ ಶಾರದಮ್ಮ ಸಿಂಧನೂರು ಅವರನ್ನು ಸನ್ಮಾನಿಸಲಾಯಿತು.

