ಮಂಗಳೂರು: ಕೋಸ್ಟಲ್ ಡೈಜೆಸ್ಟ್ ಡಾಟ್ ಕಾಮ್ ಕ್ರಿಕೆಟ್ ಎಂ.ಪಿ.ಎಲ್ ಚಾಂಪಿಯನ್ ತಂಡ ಹಾಗೂ ಎಂ.ಫ್ರೆಂಡ್ಸ್ (Mercy Freinds) ಮತ್ತು ಆಪರೇಶನ್ ರುಖಿಯಾ ತಂಡ ವತಿಯಿಂದ 68ನೇ ಗಣರಾಜ್ಯೋತ್ಸವನ್ನು ಅನಾಥ ವೃದ್ಧರ ಆರೈಕೆ ಮಾಡುತ್ತಿರುವ “ವಿಶ್ವಾಸದ ಮನೆ”ಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಇಂದು ದೇಶಾದ್ಯಂತ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಇದೇ ಪ್ರಯುಕ್ತವಾಗಿ ನಾವು ಈ ವಿಶ್ವಾಸವಿರುವ ವಿಶ್ವಾಸದ ಮನೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಹಲವಾರು ಆಶ್ರಮಗಳಿಗೆ ಕಾರ್ಯಕ್ರಮ ನೀಡಲು ಹೋಗಿದ್ದೇವೆ. ಈ ವಿಶ್ವಾಸದ ಮನೆಯ ಬಗ್ಗೆ ಕೇಳಿ ತಿಳಿದಿದ್ದೆವು. ಆದರೆ ಇಲ್ಲಿಗೆ ಭೇಟಿ ಕೊಟ್ಟಿರಲಿಲ್ಲ. ಇಲ್ಲಿಯ ರೋಗಿಯಾಗಿದ್ದ ಗುಜರಾತ್ ನ ಸೂರತ್ ಮೂಲದ ರುಖಿಯಾ ಎಂಬ ಅನಾಥ ಮಹಿಳೆಯನ್ನು ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಿದ್ದ ಸಂದರ್ಭದಲ್ಲಿ, ಈ ಮಹಿಳೆಯ ಬಗ್ಗೆ ಸಿರಾಜ್ ಕೃಷ್ಣಾಪುರ ಎಂಬ ಯುವಕ ಸಾಮಾಜಿಕ ತಾಣದಲ್ಲಿ ಹಾಕಿ ಹೊರಲೋಕಕ್ಕೆ ತಿಳಿಸಿದಾಗ, ಸಿರಾಜ್ ಕೃಷ್ಣಾಪುರ ಎಂಬ ಯುವಕನ ಮೂಲಕ ಆಪರೇಶನ್ ರುಖಿಯಾ ಎಂಬ ವಾಟ್ಸಪ್ ಗ್ರೂಪ್ ಸೃಷ್ಟಿಯಾಗಿ ಆ ಮೂಲಕ ಅವರ ಕುಟುಂಬಸ್ಥರನ್ನು ಹುಡುಕಿ ಆ ಮಹಿಳೆ ತನ್ನ ಮನೆ ಸೇರುವಂತೆ ಮಾಡಿದ್ದೆವು” ಎಂದರು.
ವಿಶ್ವಾಸದ ಮನೆ ವೃದ್ಧಾಶ್ರಮದ ಉಪಾಧ್ಯಕ್ಷರಾದ ಮ್ಯಾಥ್ಯೂ ಕಾಸ್ತಲಿನೊ ಮಾತನಾಡಿ, ಕೋಸ್ಟಲ್ ಡೈಜೆಸ್ಟ್, ಎಂ ಫ್ರೆಂಡ್ಸ್ ಹಾಗೂ ಟೀಂ ಆಪರೇಶನ್ ರುಖಿಯಾ ಎಂಬ ಬೇರೆ ಬೇರೆ ಸಂಸ್ಥೆಗಳಿಂದ ಬಹು ದೂರದಿಂದ ಬಂದು ಸಹಕರಿಸಿದ್ದೀರಿ. ನಿಮಗೆಲ್ಲರಿಗೂ ದೇವರ ಆಶೀರ್ವಾದವಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಮಂಗಳೂರು ಪ್ರೀಮಿಯರ್ ಲೀಗ್ ಪಂದ್ಯಾಕೂಟದ ಎಂ.ಪಿ.ಎಲ್. ಚಾಂಪಿಯನ್ ಆಗಿರುವ ಕೊಸ್ಟಲ್ ಡೈಜೆಸ್ಟ್ ತಂಡದ ಕೋಚ್ ಆಗಿರುವ ರೆನ್ ಮಾತನಾಡಿ, ಜಾತಿ ಧರ್ಮ ಭೇದವಿಲ್ಲದೆ ಅನಾಥರ ಸೇವೆ ಮಾಡುತ್ತಿರುವ ಹಾಗೂ ಉಡುಪಿ, ಮಂಗಳೂರು ಭಾಗದಲ್ಲಿ ಪ್ರಸಿದ್ಧವಾಗಿರುವ ಈ ವಿಶ್ವಾಸದ ಮನೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹೇಳಿದರು.
ಪ್ರೇಮ ಮಾರ್ಗರೇಟ್ ಮಾತನಾಡಿ, ಎಂ ಫ್ರೆಂಡ್ಸ್ ನ ಪರಿಶ್ರಮದ ಫಲವಾಗಿ ರುಖಿಯಾ ಎಂಬವರು ತನ್ನ ಮನೆ ಸೇರುವಂತಾಗಿದೆ. ರಸ್ತೆಯಲ್ಲಿರುವ ಅನಾಥರನ್ನು ತಂದು ಆರೈಕೆ ಮಾಡಿ ಅವರವರ ಮನೆಗೆ ಸೇರುವಂತಹ ಕೆಲಸವನ್ನು ನಮ್ಮ ಸಂಸ್ಥೆಯ ಸ್ಥಾಪಕ ಸುನೀಲ್ ಪಾಸ್ಟರ್ ಮಾಡುತ್ತಿದ್ದಾರೆ. ಅದಕ್ಕಿಂತ ದೊಡ್ಡ ಕೆಲಸ ಯಾವುದೂ ಇಲ್ಲ. ಇಲ್ಲಿಯೇ ಇದ್ದ ನಾಗರಾಜ್ ಎಂಬ ಯುವಕ ಸುಮಾರು 25 ವರ್ಷಗಳ ನಂತರ ಮನೆ ಸೇರಿದ್ದಾನೆ ಹಾಗೂ ತನ್ನ ಮಾನಸಿಕ ನಿಯಂತ್ರಣವನ್ನು ಕಳೆದುಕೊಂಡಿರುವ ತಂದೆ ತಾಯಿಯನ್ನು ತನ್ನ ದುಡಿಮೆಯ ಮೂಲಕ ಸಾಕುತ್ತಿದ್ದಾನೆ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಮಾಥ್ಯೂ ಕಾಸ್ತಲಿನೋ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಗೆ ದೇಣಿಗೆ ನೀಡಲಾಯಿತು. ನಂತರ ಅಲ್ಲಿ ವಾಸಿಸುತ್ತಿರುವ ವೃದ್ಧರ ಮನೋರಂಜನೆಗಾಗಿ “ಬಾಲ್ ಪಾಸಿಂಗ್” ಸ್ಪರ್ಧೆಯನ್ನು ಎಂ.ಫ್ರೆಂಡ್ಸ್ ಕೋಶಾಧಿಕಾರಿ ಸುಜಾ ಮಹಮ್ಮದ್ ಅಲಂಕಾರ್ ರವರು ನಡೆಸಿಕೊಟ್ಟರು. ಈ ಸ್ಪರ್ಧೆಯಲ್ಲಿ ಶಿರ್ವ ಮೂಲದ ಕ್ಲೆಮೆಂಟ್ ಪ್ರಥಮ ಸ್ಥಾನಿಯಾದರು. ಇವರು ನಿವೃತ್ತ ಉಪನ್ಯಾಸಕರೂ ಆಗಿದ್ದರು ಎಂಬುದು ವಿಶೇಷ. ದ್ವಿತೀಯ ಸ್ಥಾನವನ್ನು ಉತ್ತರ ಪ್ರದೇಶದ ರಾಧಿಕಾರವರು ಪಡೆದರು. ಇಬ್ಬರಿಗೂ ಕೂಡಾ ಪುಷ್ಪಗುಚ್ಚ ಹಾಗೂ ನಗದು ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿಶ್ವಾಸದ ಮನೆಯ ಸದಸ್ಯರೊಂದಿಗೆ ಸಹಭೋಜನ ಮಾಡಲಾಯಿತು.
ಎಂ.ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದರು. ಈ ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ದಾವೂದ್ ಬಜಾಲ್, ಮಹಮ್ಮದ್ ಮರಕಡ, ಅಕ್ಬರ್ ಅಲಿ, ರಯೀಸ್ ಉಡುಪಿ ಹಾಗೂ ನ್ಯೂಸ್ ಕನ್ನಡ ಡಾಟ್ ಇನ್ ಸುದ್ದಿ ಮಾಧ್ಯಮದ ಆಡಳಿತಾಧಿಕಾರಿ ಮುಖ್ತಾರ್ ಉಚ್ಚಿಲ ಉಪಸ್ಥಿತರಿದ್ದರು. ಸುಜಾ ಮಹಮ್ಮದ್ ಸ್ವಾಗತಿಸಿದರು. ಪತ್ರಕರ್ತ ಆರೀಫ್ ಪಡುಬಿದ್ರೆ ನಿರೂಪಿಸಿದರು ಹಾಗೂ ಆಶಿಕ್ ಕುಕ್ಕಾಜೆ ಧನ್ಯವಾದವಿತ್ತರು.

