ಮೂಡುಬಿದಿರೆ: ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಬೆಳುವಾಯಿ ಗ್ರಾ.ಪಂ. ಎದುರು ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಲೆಕ್ಕ ಕೊಡಿ ಆಂದೋಲನ ನಡೆಸಲಾಯಿತು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ, ದಲಿತ ಸಮುದಾಯಕ್ಕೆ 25% ಮೀಸಲು ಹಣವನ್ನು ಸಮರ್ಪಕವಾಗಿ ಖರ್ಚು ಮಾಡದಿರುವುದು, ಉದ್ಯೋಗ ಖಾತರಿ ಯೋಜನೆ ಮಾಡದಿರುವುದು ಮತ್ತು ಕಾಶಿಪಟ್ನ ಗ್ರಾ.ಪಂ.ನಲ್ಲಿ 80% ಕುಟುಂಬಗಳಿಗೆ ಸಾಧ್ಯವಾಗುವುದಾದರೆ ಬೆಳುವಾಯಿ ಪಂಚಾಯತಿನಲ್ಲಿ ಯಾಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಕೃಷ್ಣಪ್ಪ, ಶಂಕರ ವಾಲ್ಪಾಡಿ, ಗಿರಿಜಾ, ರೈತ ಸಂಘದ ಸುಂದರ ಬೆಳುವಾಯಿ, ಸಿಐಟಿಯುನ ರಾಧಾ, ಕಟ್ಟಡ ಕಾರ್ಮಿಕರ ಸಂಘದ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯತ್ ಅಧ್ಯಕ್ಷ ಭಾಸ್ಕರ ಆಚಾರ್ಯ, ಪಿಡಿಒ ಭೀಮಾ ನಾಯ್ಕ್ ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಾನಿರತರೊಂದಿಗೆ ಸಂವಾದ ನಡೆಸಿದರು.

