ಮೂಡುಬಿದಿರೆ: ಇಲ್ಲಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅನನ್ಯ ಕೊಡುಗೆ  ಸಲ್ಲಿಸಿದ ಹಿರಿಯ ಸಮಾಜ ಸೇವಕ ಪಿ.ಸದಾನಂದ ಭಟ್ (87ವ) ರವಿವಾರ ಬೆಳಗ್ಗಿನ ಜಾವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವಿವಾಹಿತರಾಗಿದ್ದ ಅವರು ಸಹೋದರ ಪಿ.ವಿಶ್ವನಾಥ ಭಟ್ ಸಹಿತ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

sadanda

ಮೂಡುಬಿದಿರೆಯ ಸಮಾಜ ಮಂದಿರದ ಸ್ಥಾಪಕ ಸದಸ್ಯರಾಗಿ ಪ್ರಸ್ತುತ ಉಪಾಧ್ಯಕ್ಷರಾಗಿ, ಶ್ರೀ ಮಹಾವೀರ ಕಾಲೇಜಿನ ಸ್ಥಾಪಕ ಸದಸ್ಯರಾಗಿ ಪ್ರಸ್ತುತ ಮಹಾವೀರ ಕಾಲೇಜು, ಎಸ್.ಎನ್.ಎಂ.ಪಾಲಿಟೆಕ್ನಿಕ್, ಎ.ಜೆ.ಸೋನ್ಸ್ ಐ.ಟಿ.ಐ, ಎಂ.ಕೆ.ಅನಂತ್ರಾಜ್ ಸಿ.ಪಿ.ಎಡ್. ಕಾಲೇಜಿನ ಕೋಶಾಧಿಕಾರಿಯಾಗಿ, ವಿದ್ಯಾವರ್ಧಕ ಸಂಘದ ಕೋಶಾಧಿಕಾರಿಯಾಗಿ, ಬಾಬುರಾಜೇಂದ್ರ ಪ್ರೌಢಶಾಲೆಯ ಸ್ಥಾಪನೆಗೆ ಕಾರಣರಾಗಿದ್ದ ಅವರು ಸಮಾಜ ಮಂದಿರದ ಮೂಲಕ ಪೇಟೆಯ ಮೊದಲ ವಾಣಿಜ್ಯ ಸಂಕೀರ್ಣವನ್ನು ತೆರೆಯುವಲ್ಲಿ ಶ್ರಮಿಸಿದ್ದರು.

ಮೂಡುಬಿದಿರೆಯಲ್ಲಿ ರೋಟರಿ ಕ್ಲಬ್ ಆರಂಭಿಸುವಲ್ಲಿ ದುಡಿದು ಸ್ಥಾಪಕ ಸದಸ್ಯರಾಗಿದ್ದರು. ಎರಡು ಅವಧಿಗೆ ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನಗಳ ಮೊಕ್ತೇಸರರಾಗಿ (1988-99) ಸೇವೆ ಸಲ್ಲಿಸಿದ್ದ ಅವರು 1991ರಲ್ಲಿ ಶ್ರೀ ಹನುಮಂತ ದೇವಳದ ಜೀರ್ಣೋದ್ಧಾರ ಕಾರ್ಯದಲ್ಲಿ ವಿಶೇಷವಾಗಿ ತೊಡಗಿಕೊಂಡಿದ್ದರು.

ಸಮಾಜ ಸೇವೆಯಲ್ಲಿ ತಮಗೆ ಆದರ್ಶವಾಗಿದ್ದ ಮೂಡುಬಿದಿರೆಯ ಅಭಿವೃದ್ಧಿಯ ಹರಿಕಾರ ಜಿ.ವಾಸುದೇವ ಪೈಯವರ ಸ್ಮರಣಾರ್ಥ ಜಿ.ವಿ.ಪೈ ಆಸ್ಪತ್ರೆಯನ್ನು ಕಟ್ಟಿ ಬೆಳೆಸುವಲ್ಲಿ ಅವರು ಅಂದಿನಿಂದ ಈವರೆಗೂ ಸಕ್ರಿಯವಾಗಿ ತೊಡಗಿಕೊಂಡಿದ್ದರು.

ಸರಳ ಸಜ್ಜನಿಕೆಯ ಸಾಧಕ:
ಎಳವೆಯಿಂದಲೇ ಸಾಮಾಜಿಕ ಕಾಳಜಿಯ ಮನೋಭಾವ ಬೆಳೆಸಿಕೊಂಡಿದ್ದ ಪಿ. ಸದಾನಂದ ಭಟ್ ಆಹಾರ ನಿರೀಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಸ್ವಾತಂತ್ರ್ಯ ಹೋರಾಟ ಉತ್ತುಂಗ ಸ್ಥಿತಿಯಲ್ಲಿದ್ದ ಆ ದಿನಗಳಲ್ಲಿ ಖಾದಿ ಭಂಡಾರವನ್ನು ತೆರೆದರು. 1953ರಿಂದ ಕೃಷಿ ಸಲಕರಣೆಗಳ ಮಾರಾಟಗಾರರಾಗಿ ಬೆಳೆದ ಅವರು 1963ರಲ್ಲಿ ಮೂಡುಬಿದಿರೆಯಲ್ಲಿ ಮೊದಲು ಎಂಬಂತೆ ಜೌಷದ ವಿತರಕರಾಗಿ ಐದು ದಶಕಗಳ ಕಾಳ ಅವಿಭಜಿತ ದ.ಕ ಜಿಲ್ಲೆಯಲ್ಲಿ ಪಿ.ಎಸ್. ಭಟ್ ಬ್ರದರ್ ಸಂಸ್ಥೆಯ ಮೂಲಕ ಗುರುತಿಸಿಕೊಂಡಿದ್ದರು.

ಬ್ರಹ್ಮಚರ್ಯ ಪಾಲನೆ, ಶ್ವೇತವಸನ, ಸರಳತೆ, ಶಿಸ್ತಿನ ಜೀವನ, ಸಜ್ಜನಿಕೆಯೊಂದಿಗೆ ರಾಜಕೀಯಕ್ಕೆ ಆಸ್ಪದವಿಲ್ಲದ ಸಮಾಜ ಸೇವೆ,ಪ್ರಾಮಾಣಿಕತೆಯಿಂದ ಪಿಎಸ್. ಭಟ್ ಎಂದೇ ಗುರುತಿಸಿಕೊಂಡಿದ್ದ ಅವರು ಜನಸಂಘದ ಅವಧಿಯಿಂದ ರಾಷ್ಟ್ರಕಾರ್ಯದಲ್ಲಿ ತೊಡಗಿಕೊಂಡು ಆರೆಸ್ಸೆಸ್‍ನ ಸಕ್ರಿಯ ಕಾರ್ಯಕರ್ತರಾಗಿ, ಶಿಕ್ಷಕರಾಗಿ ದುಡಿದಿದ್ದರು. ಜನ ಸಂಘದ ಸಮಾವೇಶಗಳಿದ್ದಲ್ಲೆಲ್ಲ ತಪ್ಪದೇ ಭಾಗಿಯಾಗುತ್ತಿದ್ದ ಅವರು ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ, ಉಪ ಪ್ರಧಾನಿ ಅಡ್ವಾಣಿ ಸೇರಿದಂತೆ ಆರೆಸ್ಸೆಸ್ ಪ್ರಮುಖರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು. ಗಾಂಧೀ ಹತ್ಯೆಯ ಬಳಿಕ ಉಂಟಾಗಿದ್ದ ಗಲಭೆಯ ವೇಳೆಗೆ ಅಲ್ಪಕಾಲ ಸೆರೆವಾಸವನ್ನೂ ಅವರು ಅನುಭವಿಸಿದ್ದರು.

ತೊಂಭತ್ತರ ದಶಕದಲ್ಲಿ ಬಿಜೆಪಿಯ ಹಿರಿಯ ನಾಯಕರೊಂದಿಗೆ ಅವರಿಗಿದ್ದ ಆತ್ಮೀಯತೆಯ ಕಾರಣಕ್ಕಾಗಿಯೇ ವಾಜಪೇಯಿಯವರು ಮೂಡುಬಿದಿರೆಯಲ್ಲಿ ಚುನಾವಣಾ ಪ್ರಚಾರದ ವೇಳೆಗೆ ಬಂದು ಹೋಗುವಾಗ ಮಾತುಕತೆ ನಡೆಸಿದ್ದರು. ಅಡ್ವಾಣಿಯವರಂತೂ ಪಿ.ಎಸ್.ಭಟ್ ಅವರ ನಿವಾಸದಲ್ಲೇ ಉಪಹಾರ ಸೇವಿಸಿ ಕುಶಲೋಪರಿ ನಡೆಸಿದ್ದರು.

ಸಂತಾಪ, ಅಂತಿಮ ನಮನ:
ಪಿ.ಎಸ್. ಭಟ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಗಣ್ಯರು ಸೇರಿದಂತೆ ಹಲವರು ಪೊನ್ನೆಚಾರಿಯಲ್ಲಿನ ಅವರ ರಾಮತೀರ್ಥ ನಿವಾಸದಲ್ಲಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಶಾಸಕ, ಸಮಾಜ ಮಂದಿರ ಮತ್ತು ಮಹಾವೀರ ಕಾಲೇಜು ಟ್ರಸ್ಟ್ ಅಧ್ಯಕ್ಷ ಕೆ. ಅಭಯಚಂದ್ರ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಮಿಜಾರುಗುತ್ತು ಆನಂದ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಸಾಯಿರಾಧಾ ಗ್ರೂಪ್‍ನ ಮನೋಹರ್ ಶೆಟ್ಟಿ, ಬಾಬು ರಾಜೇಂದ್ರ ಪ್ರೌಢ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಿ.ರಾಮನಾಥ ಭಟ್, ಜಿ.ವಿ.ಪೈ ಟ್ರಸ್ಟ್‍ನ ಡಾ. ಹರೀಶ್ ನಾಯಕ್, ರೋಟರಿ ಅಧ್ಯಕ್ಷ ಮಹಮ್ಮದ್ ಶರೀಫ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಮೂಡಾ ಅಧ್ಯಕ್ಷ ಹೆಚ್. ಸುರೇಶ್ ಪ್ರಭು, ವಕೀಲರ ಸಂಘದ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನಗಳ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಪೊನ್ನೆಚ್ಚಾರಿ ಶ್ರೀ ವೆಂಕಟರಮಣ ದೇವಳದ ಮೊಕ್ತೇಸರ ಎಂ.ಪಿ.ಅಶೋಕ್ ಕಾಮತ್,ಮಹಾವೀರ ಕಾಲೇಜು ಟ್ರಸ್ಟ್ ಆಶ್ರಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು, ಆರೆಸ್ಸೆಸ್ ಸಂಘ ಚಾಲಕ ಎಂ.ವಾಸುದೇವ ಭಟ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೆ.ವಿಶ್ವನಾಥ ಪ್ರಭು ಸೇರಿದಂತೆ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು. ಬಿ.ಜೆ.ಪಿ ಮಂಡಳ ಅಧ್ಯಕ್ಷ ಈಶ್ವರ ಕಟೀಲ್, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಸುದರ್ಶನ ಎಂ. ಸಮಾಜ ಮಂದಿರದ ಸಭಾದ ಕಾರ್ಯದರ್ಶಿ ಹೆಚ್. ಉದಯಶಂಕರ ಪ್ರಭು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂತಾಪ.. ಇಂದು ಆರೆಸ್ಸೆಸ್ ಸಭೆ
ಪಿ.ಎಸ್.ಭಟ್ ನಿಧನದ ಹಿನ್ನೆಲೆಯಲ್ಲಿ ಮೂಡುಬಿದಿರೆಯಲ್ಲಿ ಹೆಚ್ಚಿನ ಔಷದ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿ ತಮ್ಮ ಗೌರವ ಸಲ್ಲಿಸಿದರು. ಹಿರಿಯ ಆರೆಸ್ಸೆಸ್ ಪ್ರಮುಖ ಕಾರ್ಯಕರ್ತರಾಗಿದ್ದ ಅವರ ನಿಧನದ ಹಿನ್ನೆಲೆಯಲ್ಲಿ ಆರೆಸ್ಸೆಸ್ ವತಿಯಿಂದ ಸೋಮವಾರ ಸಂಜೆ 6ಕ್ಕೆ ಸಮಾಜ ಮಂದಿರದಲ್ಲಿ ಸಂತಾಪ ಸಭೆ ಆಯೋಜಿಸಲಾಗಿದೆ.

ಇದೇ ವೇಳೆ ಮಹಾವೀರ ಕಾಲೇಜಿನ ಸ್ಥಾಪಕ ಸದಸ್ಯರಾಗಿದ್ದ ಪಿ.ಎಸ್. ಭಟ್ ಗೌರವಾರ್ಥ ಮಹಾವೀರ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸೋಮವಾರ ಬೆಳಿಗ್ಗೆ ಶ್ರದ್ಧಾಂಜಲಿ ಸಭೆ ನಡೆಯಲಿದ್ದು ಬಳಿಕ ರಜೆ ಘೋಷಣೆ ಮಾಡಲು ನಿರ್ಧರಿಸಲಾಗಿದೆ.

By suddi9

Leave a Reply

Your email address will not be published. Required fields are marked *