ಸುದ್ದಿ9ಮೂಡುಬಿದರೆ: ಬೆಂಗಳೂರಿನ ಕಂಪೆನಿಯೊಂದು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಪಂಚಾಯಿತಿನಿಂದ ಅನುಮತಿ ಕೋರಿದೆ. ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ನೀಡಿ ಜನರ ವಿಶ್ವಾಸ ಗಳಿಸದೆ ಅನುಮತಿ ನೀಡಬಾರದು ಎಂದು ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ, ಹಾಗೂ ವಾದಿರಾಜ ಮಡ್ಮಣ್ಣಾಯ, ವಾಸುದೇವ ನಾಯಕ್ ಮತ್ತಿತರರು ಒತ್ತಾಯಿಸಿದರು.
ಪುತ್ತಿಗೆ ಗ್ರಾಮ ಪಂಚಾಯಿತಿನ ಗ್ರಾಮ ಸಭೆಯು ಮಂಗಳವಾರ ಪಂಚಾಯಿತಿ ಅಧ್ಯಕ್ಷ ಉಮಾನಾಥ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ನಾಗುಂಡಿಯಲ್ಲಿ ನಿರ್ಮಿಸಲುದ್ದೇಶಿಸಿದ 7 ಮೆಗಾವ್ಯಾಟ್ ಸಾಮಥ್ರ್ಯದ ಕಿರು ಜಲವಿದ್ಯುತ್ ಸ್ಥಾವರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು ಯೋಜನೆಯ ಕುರಿತು ಸ್ಪಷ್ಟ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಪಂಚಾಯಿತಿ ಸದಸ್ಯ ನಾಗವರ್ಮ ಜೈನ್ ಯೋಜನೆಯ ಕುರಿತು ಕಂಪೆನಿಯು ಪಂಚಾಯಿತಿಗೆ ನೀಡಿದ ಮಾಹಿತಿಯಲ್ಲಿ ಅಸ್ಪಷ್ಟತೆಯಿದೆ. ವಿದ್ಯುತ್ ಹಾದು ಹೋಗುವ ಟವರ್ಗಳ ಬಗ್ಗೆ ಮಾತ್ರ ಮಾಹಿತಿಯಿದೆ. ಅಣೆಕಟ್ಟು ನಿರ್ಮಾಣವಾದಾಗ ಅಲ್ಲಿ ಶೇಖರಣೆಯಾಗುವ ನೀರಿನ ಪ್ರಾಮಾಣ, ಮುಳುಗಡೆಯಾಗುವ ಪ್ರದೇಶಗಳ ಬಗ್ಗೆ ಮಾಹಿತಿಯಿಲ್ಲ, ಯೋಜನೆಗೆ ಎಷ್ಟು ಜಮೀನಿನ ಅಗತ್ಯವಿದೆ ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಧರ.ಪಿ.ನಾಯಕ್ ಪಂಚಾಯಿತಿ ನಿರಾಕ್ಷೇಪಣ ಪತ್ರ ನೀಡಿಲ್ಲ ಈ ಬಗ್ಗೆ ಕಂಪೆನಿ ಅಧಿಕಾರಿಗಳನ್ನು ಪಂಚಾಯಿತಿಗೆ ಕರೆಸಿ ಜುಲೈ 18ರಂದು ಗ್ರಾಮಸ್ಥರ ಸಭೆ ಕರೆದು ಇದರ ಸಾಧಕ ಬಾಧಕಕಗಳ ಕುರಿತು ಚರ್ಚಿಸಲಾಗುವುದು ಎಂದರು.
ರೈತಸಂಪರ್ಕ ಕೇಂದ್ರಕ್ಕೆ ನೆಲೆ ನೀಡಿ:
ಮೂಡುಬಿದಿರೆಯಲ್ಲಿ ಈಗ ರೈತ ಸಂಪರ್ಕ ಕೇಂದ್ರ ಖಾಸಗಿ ಕಟ್ಟಡದಲ್ಲಿದ್ದು ಅದು ಶಿಥಿಲಗೊಂಡಿದೆ. ಅಲ್ಲಲ್ಲಿ ಸೋರುತ್ತಿದೆ. ಹಾಗಾಗಿ ಬಿತ್ತನೆ ಬೀಜಗಳನ್ನು ಸಂಗ್ರಹಿಸಿಡಲಾಗುತ್ತಿಲ್ಲ. ಇದರಿಂದ ಸ್ಥಳೀಯ ರೈತರಿಗೆ ತೊಂದರೆಯಾಗುತ್ತಿದೆ. ಹೊಸ ಕಟ್ಟಡಕ್ಕೆ ಸ್ಥಳ ಮಂಜೂರಾಗಿ ಜಿಲ್ಲಾ ಪಂಚಾಯಿತಿ ಕಟ್ಟಡಕ್ಕೆ ಅನುದಾನ ಮಂಜೂರುಗೊಳಿಸಿದ್ದರೂ ಕೋರ್ಟ್ ಆವರಣಕ್ಕೆ ಅದು ಅತಿಕ್ರಮಣಗೊಂಡಿದೆ. ಈ ಸಮಸ್ಯೆಯನ್ನು ಬಗೆಹರಿಸಿ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಕಟ್ಟಡ ನಿರ್ಮಿಸಬೇಕೆಂದು ಧನಕೀರ್ತಿ ಬಲಿಪ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ ಅಜಾಜ್ ಅಹಮ್ಮದ್ ಕೃಷಿ ಇಲಾಖೆಗೆ ಜಾಗದ ಆರ್ಟಿಸಿ ಆಗಿದ್ದರೂ ಪ್ಲಾಟಿಂಗ್ ಆಗಿರಲಿಲ್ಲ ಹೀಗಾಗಿ ಜಾಗದ ಸಮಸ್ಯೆ ಎದುರಾಗಿದೆ ಎಂದು ಉತ್ತರಿಸಿದರು.
ನೆಲ್ಲಿಗುಡ್ಡೆ ಪ್ರದೇಶದಲ್ಲಿ ಹಲವಾರು ಮನೆಗಳಿದ್ದು ಇದರ ಸಮೀಪ ಹಾದು ಹೋಗುವ ವಿದ್ಯುತ್ ವಯರ್ಗಳಿಗೆ ಮರದ ಗೆಲ್ಲುಗಳು ತಾಗಿಕೊಂಡಿದ್ದು ವಯರ್ಗಳು ತುಂಡಾಗುವ ಅಪಾಯವಿದೆ. ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕಿಂತ ಹಳೆಯ ಲೈನುಗಳನ್ನು ಸರಿಪಡಿಸಬೇಕೆಂದು ನಿವೃತ್ತ ಅದ್ಯಾಪಕ ಎಸ್. ಯು. ಪುತ್ತಿಗೆ ಹೇಳಿದರು.
ರೈತರ ಪಂಪ್ ಶೆಡ್ಡ್ಗಳ ನಿರ್ಮಾಣಕ್ಕೆ ಕೃಷಿ ವಿದ್ಯುತನ್ನು ಬಳಸಿದರೆ ದಂಡ ವಿಧಿಸಲಾಗುತ್ತಿದೆ ಇದು ಸರಿಯಲ್ಲ ಎಂದು ಹಲವು ರೈತರು ಅಸಮಧಾನ ವ್ಯಕ್ತ ಪಡಿಸಿದರು. ಮನೆ ಹಾಗೂ ಇತರ ಕಟ್ಟಡಗಳ ನಿರ್ಮಾಣಕ್ಕೆ ಕೃಷಿಗೆ ಒದಗಿಸಿದ ವಿದ್ಯುತನ್ನು ಬಳಸುವುದು ಸರಿಯಲ್ಲ. ಹಾಗೆ ಮಾಡಿದಲ್ಲಿ ಕಾನೂನು ಪ್ರಕಾರ ದಂಡ ವಿಧಿಸಬೇಕಾಗುತ್ತದೆ ಎಂದು ಮೆಸ್ಕಾಂ ಇಂಜಿನಿಯರ್ ಉತ್ತರಿಸಿದರು. ಗ್ರಾಮಕರಣಿಕ ಕಿಶೋರ್ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸುವಾಗ ಅನುಸರಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸುನೀತ ಸುಚರಿತ ಶೆಟ್ಟಿ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯಡಿ ಮಕ್ಕಳನ್ನು ತಪಾಸಣೆ ನಡೆಸಲು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ತಾ.ಪಂ. ಸದಸ್ಯ ಪ್ರಕಾಶ್, ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ ಹಾಗೂ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

