ಬಂಟ್ವಾಳ: ಆಂಜನೇಯ ಪ್ರೀತಿ ಹಾಗೂ ನೀತಿಯ ಪ್ರೇರಕ ಶಕ್ತಿ. ಸಮರ್ಪಣೆ ಹಾಗೂ ತ್ಯಾಗ ಮನೋಭಾವಕ್ಕೆ ಮುಖ್ಯಪ್ರಾಣನೇ ನಮಗೆ ಆದರ್ಶ ಎಂದು ಒಡಿಯೂರು ಕ್ಷೇತ್ರ ಶ್ರೀ ಗುರುದೇವದತ್ತ ಸಂಸ್ಥಾನಂನ ಸಾದ್ವಿ ಶ್ರೀ ಮಾತಾನಂದಮಯಿ ಹೇಳಿದರು.
ಪುದು ಗ್ರಾಮದ ಸುಜೀರು ದತ್ತನಗರದ ಶ್ರೀ ವೀರ ಹನುಮಾನ್ ಮಂದಿರದ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಜಗತ್ತಿನ ಶಾಂತಿ ಆರಂಭವಾಗುವುದೇ ಮನೆಯಿಂದ. ನಿಸ್ವಾರ್ಥ ಭಾವನೆಯಿಂದ, ಭಕ್ತಿ ಶ್ರದ್ದೆಯಿಂದ ದೇವರ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾನಸಿಕ ಶಾಂತಿಯನ್ನು ಪಡೆದುಕೊಳ್ಳಬಹುದು ಎಂದರು. ಈ ದೇಶದ ಯೋಧರ ತ್ಯಾಗ ಮನೋಭಾವದಿಂದಾಗಿ ನಾವು ನೆಮ್ಮದಿಯ ಜೀವನ ನಡೆಸುತ್ತಿದೇವೆ ಎಂದ ಅವರು ಕಾಶ್ಮೀರ ಹಾಗೂ ಅಮರನಾಥ ಯಾತ್ರೆಯ ಸಂದರ್ಭದ ಯೋಧರ ಭೇಟಿಯನ್ನು ಮೆಲುಕು ಹಾಕಿದರು.
ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಾಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿ ದೇವಸ್ಥಾನಗಳು ಕೇವಲ ಪೂಜಾ ಸೇವೆಯನ್ನು ನೀಡುವ ತಾಣಗಳಾಗಿ ಉಳಿಯದೇ ಸಾಮಾಜಿಕ ಸೇವೆಗಳನ್ನು ನೀಡುವತ್ತ ದೃಷ್ಟಿ ಹರಿಸ ಬೇಕು. ಈ ನಿಟ್ಟಿನಲ್ಲಿ ಕಳೆದ 15 ವರ್ಷಗಳಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಶ್ರೀ ವೀರ ಹನುಮಾನ್ ಮಂದಿರದ ಕಾರ್ಯ ಶ್ಲಾಘನೀಯ ಎಂದರು.
ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷ ಜಗನ್ನಾಥ ಚೌಟ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಮಂಗಳೂರಿನ ಬಿಜೈ ಶ್ರೀ ಗುರು ವೈದ್ಯನಾಥ ಚಾಮುಂಡೇಶ್ವರೀ ದೈವಸ್ಥಾನದ ಗುರಿಕಾರ ಮುರಳಿ ಕುಮಾರ್, ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ರಾವ್, ಉದ್ಯಮಿಗಳಾದ ಸತ್ಯರಾಜ್ ಬಿರ್ತಿ, ರಮೇಶ್ ಕೆ.ಪಡೀಲ್, ನಾಗೇಶ್ ಕಲ್ಲಡ್ಕ, ತಾರಾನಾಥ ಕೊಟ್ಟಾರಿ ಮುಖ್ಯ ಅತಿಥಿಗಳಾಗಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಶ್ರೀಧರ ಭಂಡಾರಿ ಪುತ್ತೂರು, ಜಯರಾಮ ಸಾಮಾನಿ ತುಂಬೆ, ದಾಮೋದರ ಸಪಲ್ಯ ಸುಜೀರು, ಡಾ. ಕರುಣಾಕರ ಅಡಪ, ಮಾಜಿ ಶಾಸಕ ರುಕ್ಮಯ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಆಡಳಿತ ಸಮಿತಿಯ ಗೌರವಾಧ್ಯಕ್ಷ ಅರುಣ್‍ಕುಮಾರ್ ಶೆಟ್ಟಿ ನುಳಿಯಾಲ್‍ಗುತ್ತು ಸ್ವಾಗತಿಸಿ, ನಾಗೇಶ್ ಅಮೀನ್ ವಂದಿಸಿದರು, ಸುನೀಲ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸೇವಾ ಬಳಗದ ಅಧ್ಯಕ್ಷೆ ಮೀನಾಕ್ಷಿ ಹಾಜರಿದ್ದರು.

