ಬಂಟ್ವಾಳ:  ಒಂದು ಕಾಲದಲ್ಲಿ ತಾಲೂಕಿನಲ್ಲಿ ಬಾರೀ ಶಬ್ದ ಮಾಡಿಕೊಂಡು ದಿನಪ್ರತಿ ಜನ ಜಾತ್ರೆಯನ್ನು ಸೃಷ್ಟಿ ಮಾಡಿಸುತ್ತಿದ್ದ್ ಬಿಸಿರೋಡಿನ ಎಲ್ಲಾ ಟಾಕೀಸ್‍ಗಳು ಬೀಗ ಹಾಕಿ ಕುಳಿತುಕೊಂಡಿವೆ. ಪಂಚಮಃ ಕಾರ್ಯ ಸಿದ್ದಿ ಎಂದು ಹೇಳಿದರು ಇಲ್ಲಿ ಮಾತ್ರ ಪಂಚ ಚಿತ್ರ ಮಂದಿರಗಳು ಜನರನ್ನು ರಂಜಿಸಲಾಗದೆ ಕಣ್ಣೀರು ಹಾಕಿಕುಳಿತುಕೊಂಡಿದೆ.

talkies

ಅಂತೂ ಇಂತೂ ಚಿತ್ರ ಪ್ರೇಮಿಗಳಿಗೆ ಮಾತ್ರ ಇದು ತುಂಬಲಾರದ ನಷ್ಟವನ್ನು ಮಾಡಿದೆ. ಹೊಸಹೊಸ ವಿನೂತನ ಶೈಲಿಯ ಚಿತ್ರಗಳು ಜನರನ್ನು ಚಿತ್ರ ಮಂದಿರಗಳ ಕಡೆ ಸೆಳೆಯುತ್ತಿದ್ದರೆ ಇಲ್ಲಿ ಮಾತ್ರ ಜನರಿಗೆ ಚಿತ್ರ ನೋಡಲು ಟಾಕೀಸುಗಳು ಇಲ್ಲದಂತಾಗಿದೆ..ಹೊಸ ಚಿತ್ರಗಳು ಬಿಡುಗಡೆಯಾದಾಗ ಮಂಗಳೂರಿಗೆ ತೆರಳುವ ಪ್ರಮೇಯ ಒದಗಿಬಂದಿದೆ.

ತುಳು ಚಿತ್ರರಂಗ ಅಭೂತಪೂರ್ವವಾಗಿ ಬೆಳೆಯುತ್ತಿರುವ ಕಾಲ ಇದು. ತುಳು ಚಿತ್ರಗಳ ಸಂಕ್ರಮಣ ಕಾಲ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ತುಳು ರಂಗಭೂಮಿ ಹೇಗೆ ತುಳುನಾಡಿನ ಜನರನ್ನು ಮೋಡಿ ಮಾಡಿತ್ತೋ ಅದೇ ರೀತಿ ಈಗ ಚಲನಚಿತ್ರಗಳು ಜನರನ್ನು ಸೆಳೆಯುತ್ತಾ ಇದೆ. ಕೆಲವೊಂದು ಸಂಭಾಷಣೆಗಳು ಜನರ ಬಾಯಲ್ಲಿ ಕೇಳುತ್ತಾ ಇರುತ್ತದೆ. ಅದರಲ್ಲೂ `ಈ ದಾನೆ ಮೂಲು… ಯಾನ್ ಮೂಲೆ… ಏರಗಾವುಯೆ ಕಿರಿಕಿರಿ… ಮೂಲು ರಗಾಳೆ ಇಜ್ಜಿ…” ಅನ್ನುವಂತಹ ಡೈಲಾಗ್‍ಗಳು ಮಕ್ಕಳಿಂದ ಹಿಡಿದು ಮುದುಕರ ಬಾಯಲ್ಲೂ ಕೇಳುತ್ತಾ ಇರುತ್ತದೆ.

ಒರಿಯರ್ದೊರಿ ಅಸಲ್, ಬೊಳ್ಳಿ, ಮದಿಮೆ, ಚಾಲಿಪೋಲಿಲು, ಚಂಡಿಕೋರಿ, ಎಕ್ಕಸಕ, ರಂಗ್ ಹೀಗೆ ಸಾಲು ಸಾಲು ಚಿತ್ರಗಳು ಬಂದು ಜನರನ್ನು ಮೋಡಿ ಮಾಡಿದೆ. ಬಂಟ್ವಾಳ ತಾಲೂಕಿನವರಿಂದಲೇ ನಿರ್ಮಾಣವಾಗುತ್ತಿರುವ `ಪನೊಡಾ.. ಬೊಡ್ಚಾ’ `ರಾ… ರಾ..’ ಚಿತ್ರಗಳು ಈಗ ಬಿಡುಗಡೆಗಾಗಿ ಕಾದು ನಿಂತಿದೆ. ಆದರೆ ಜನತೆ ಮಾತ್ರ ಒಂದು ರೀತಿಯ ನಿರಾಸೆಯ ಭಾವದಲ್ಲಿದ್ದಾರೆ. ಸದ್ಯಕ್ಕೆ ಬಂಟ್ವಾಳ ತಾಲೂಕಿನಲ್ಲಿ ಯಾವುದೇ ಸಿನಿಮಾ ಥಿಯೇಟರ್‍ಗಳು ಇಲ್ಲ.

ಎರಡು ದಶಕಗಳ ಹಿಂದೆ ತಾಲೂಕಿನಲ್ಲಿ ಒಟ್ಟು ಐದು ಸಿನಿಮಾ ಥಿಯೇಟರ್‍ಗಳು ನಿರ್ವಹಿಸುತ್ತಿದ್ದವು. ಬಿ.ಸಿ.ರೋಡಿನಲ್ಲಿ ವಿನಾಯಕ ಟಾಕೀಸ್, ಪಾಣೆಮಂಗಳೂರು ಸಮೀಪದ ಗೀತಾ ಟಾಕೀಸ್, ಬಂಟ್ವಾಳದಲ್ಲಿ ಜಯಶ್ರೀ ಟಾಕೀಸ್, ವಿಜಯಲಕ್ಷ್ಮೀ ಟಾಕೀಸ್, ವಿಟ್ಲದಲ್ಲಿ ಕವಿತಾ ಟಾಕೀಸ್ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಕಾಲದ ಹೊಡೆತಕ್ಕೆ ಸಿಕ್ಕಿ ಸ್ಪರ್ಧೆಯನ್ನು ಎದುರಿಸಲಾಗದೆ ಎಲ್ಲಾ ಟಾಕೀಸ್‍ಗಳು ಮುಚ್ಚಲ್ಪಟ್ಟವು. ಆಗ ಇಲ್ಲಿನ ಚಲನಚಿತ್ರಾಭಿಮಾನಿಗಳು ಸಿನಿಮಾ ನೋಡಬೇಕೆಂದರೆ ಮಂಗಳೂರಿಗೇ ತೆರಳಬೇಕಿತ್ತು. ಆಮೇಲೆ ಬಂದದ್ದು ಮಲ್ಟಿಫ್ಲೆಕ್ಸ್‍ಗಳು ಪ್ರಾರಂಭವಾಯಿತು.

ಹೀಗೆ 8 ವರ್ಷಗಳ ಹಿಂದೆ ಬಿ.ಸಿ.ರೋಡಿನ ಬಸ್ ನಿಲ್ದಾಣದ ಹತ್ತಿರವೇ `ನಕ್ಷತ್ರ’2 ಥಿಯೇಟರ್‍ಗಳನ್ನೊಳಗೊಂಡ ಮಲ್ಟಿಫ್ಲೆಕ್ಸ್ ಪ್ರಾರಂಭವಾಯಿತು. ಹೊಸ ಕನ್ನಡ, ಹಿಂದಿ, ತುಳು, ಇಂಗ್ಲೀಷ್ ಸಿನಿಮಾಗಳನ್ನು ನೋಡುವ ಅವಕಾಶ ಜನರಿಗೆ ಲಭಿಸಿತು. ಆದರೆ ಕಳೆದ ಕೆಲವು ಸಮಯದಿಂದ ಈ ತಾಂತ್ರಿಕ ಕಾರಣಗಳಿಂದಾಗಿ ಸಿನಿಮಾ ಪ್ರದರ್ಶನವಾಗದಿರುವುದು ಬೇಸರದ ಸಂಗತಿ.

ಮನೋರಂಜನೆ ಪ್ರತಿಯೊಬ್ಬರ ಬಯಕೆ. ಮನೋರಂಜನೆ ಮಾಧ್ಯಮಗಳಲ್ಲಿ ಹಲವಾರು ಇದ್ದರೂ ಸಿನಿಮಾ ಮಾತ್ರ ಅಂದಿಗೂ ಇಂದಿಗೂ ಪ್ರಸ್ತುತ. ಅದರಲ್ಲೂ ತುಳುನಾಡಿನಲ್ಲಂತೂ ಕುಟುಂಬ ಸಮೇತ ತುಳು ಚಿತ್ರವನ್ನು ನೋಡಲು ಬಯಸುತ್ತಾರೆ. ಹಾಗಾಗಿ ಸಿನಿಮಾ ಥಿಯೇಟರ್‍ಗಳು ಬೇಕೇ ಬೇಕು. ನಮ್ಮ ಬಂಟ್ವಾಳದಲ್ಲಿ ಆದಷ್ಟು ಬೇಗ ಥಿಯೇಟರ್ ಕಾರ್ಯನಿರ್ವಹಿಸಲಿ ಎಂಬುದು ಎಲ್ಲರ ಮನಸ್ಸಿನ ಆಸೆ.

By suddi9

Leave a Reply

Your email address will not be published. Required fields are marked *