ಬಂಟ್ವಾಳ: ರಾಜ್ಯ ಸರ್ಕಾರವು ಜನಸಾಮಾನ್ಯರಿಗೆ ಘೋಷಿಸಿರುವ ವಿವಿಧ ಜನಪ್ರಿಯ ಯೋಜನೆಗಳನ್ನು ತ್ವರಿತವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸೇರಿದಂತೆ ಕೆಲಸದಲ್ಲಿ ಉದಾಸೀನ ಪ್ರವೃತ್ತಿ ತೋರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿರ್ದಾಕ್ಷಿಣ್ಯವಾಗಿ ಬೇರೆಡೆಗೆ ವರ್ಗಾವಣೆಗೊಂಡು ಹೋಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಖಡಕ್ ಎಚ್ಚರಿಕೆ ನೀಡಿದ್ದಾರೆ.

melkar-1

ತಾಲ್ಲೂಕಿನ ಮೆಲ್ಕಾರ್‍ನಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ‘ಅಕ್ಷರ ದಾಸೋಹ’ ಯೋಜನೆ ಆರಂಭಗೊಂಡಾಗ ಅಕ್ಕಿ ಸರಿ ಇಲ್ಲ ಎನ್ನುತ್ತಿದ್ದ ಕೈಲಾಗದ ವಿರೋಧಿಗಳು ಇದೀಗ ‘ಅನ್ನಭಾಗ್ಯ’ ಯೋಜನೆ ಸೋಮಾರಿಗಳನ್ನು ಸೃಷ್ಟಿಸುತ್ತದೆ ಎಂದು ಆರೋಪಿಸುವ ಮೂಲಕ ಅಪಪ್ರಚಾರ ಮಾಡಿ ಬಡಜನರ ಯೋಜನೆಗಳಿಗೆ ಅಡ್ಡಿಪಡಿಸುವುದೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು.

ಈಗಾಗಲೇ 94ಸಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 9ಸೆಂಟ್ಸ್ ಜಮೀನು ನೀಡುತ್ತಿರುವ ಸರ್ಕಾರವು 94 ಸಿಸಿ ಯೋಜನೆಯಡಿ 3ಸೆಂಟ್ಸ್ ಜಮೀನು ನೀಡಲು ಮುಂದಾಗಿದೆ ಎಂದರು. ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ವಿವಿಧ ಇಲಾಖೆ ಯೋಜನೆಯಡಿ ಸರ್ಕಾರದಿಂದ ಮಂಜೂರಾದ ಆದೇಶ ಪತ್ರ, ಹಕ್ಕುಪತ್ರ ಸಹಿತ ಚೆಕ್ ವಿತರಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಸದಸ್ಯರಾದ ಕೆ.ಸಂಜೀವ ಪೂಜಾರಿ, ಕುಮಾರ್ ಭಟ್, ನಸೀಮ ಬೇಗಂ ಮತ್ತಿತರರು ಇದ್ದರು. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ, ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ ಭಟ್, ಕೃಷಿ ಸಹಾಯಕ ನಿರ್ದೇಶಕ ಪಿ.ಎಫ್.ಮಿರಾಂದ ಸಹಿತ ವಿವಿಧ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದರು. ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿ, ಕಂದಾಯ ನಿರೀಕ್ಷಕ ವಾಮನ ವಂದಿಸಿದರು. ಮಂಜು ವಿಟ್ಲ ಮತ್ತು ದಿವಾಕರ ಮುಗುಳ್ಯ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *