ಬಂಟ್ವಾಳ: ಮನುಷ್ಯನ ವೈಜ್ಞಾನಿಕತೆ ಬೆಳೆಸಿಕೊಂಡಂತೇ ತನ್ನ ವೈಚಾರಿಕತೆಯಿಂದ ಸಂಸ್ಕೃತಿಯ ಚೌಕಟ್ಟಿನಿಂದ ಜಾರುತ್ತಿದ್ದಾನೆ. ದಿನದಿಂದ ದಿನಕ್ಕೆ ಪಾಪಕರ್ಮಗಳು ಹೆಚ್ಚಾಗುತ್ತಿವೆ, ಇದರಿಂದ ಮುಕ್ತಿಹೊಂದಲು ಧಾರ್ಮಿಕ ಭಾವನೆ ಬೆಳೆಸಿಕೊಳ್ಳಬೇಕು, ನಿಯಮಿತವಾಗಿ ದಾನ-ಧರ್ಮ ಪ್ರಾರ್ಥನೆಗಳನ್ನು ಮಾಡಬೇಕು ಇದರಿಂದ ಮೊಕ್ಷ ಪ್ರಾಪ್ತಿಯಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ(ರಿ.) ಬಂ. ಕಲ್ಲಡ್ಕ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಲ್ಲಡ್ಕ ವಲಯ, ವೀರಕಂಭ ಬೋಳಂತೂರು ಶ್ರೀ ಶಾರದಾ ಸೇವಾ ಟ್ರಸ್ಟ್ ವೀರಕಂಭ ಮತ್ತು ಜನಜಾಗೃತಿ ವೇದಿಕೆ, ಕಲ್ಲಡ್ಕ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ ನಾರಾಯಣ ಭಟ್ ಕಡಂಬಿಲ ರವರು ತಮ್ಮ ಧಾರ್ಮಿಕ ಉಪನ್ಯಾಸ ನೀಡಿದರು.
ಶರೀರ ಶುಧ್ಧಿಯಿಂದ ಮುಖ್ಯವಾಗಿ ಮನಸ್ಸಿನ ಶುದ್ಧಿ ಮುಖ್ಯ ನಾವು ಯಾವಾಗಲೂ ಕರ್ತವ್ಯ ಮುಖಿಯಾಗಿರಬೇಕು, ದೇವರ ನಂಬಿಕೆಯಲ್ಲಿ ಜಾತಿಬೇಧ ವಿರಬಾರದು, ಆತ್ಮವನ್ನು ಪರಮಾತ್ಮನಲ್ಲಿ ಜೋಡಿಸುವ ಕೆಲಸವಾಗಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಜನಜಾಗೃತಿ ವೇದಿಕೆ ಬಂಟ್ವಾಳದ ಅಧ್ಯಕ್ಷರಾದ ರೊ| ಪ್ರಕಾಶ್ ಕಾರಂತ್‍ರವರು ತಿಳಿಸಿದರು.
ಕ್ಷೆ.ಧ.ಗ್ರಾ.ಯೊ.(ರಿ.) ಬಂಟ್ವಾಳದ ಯೋಜನಾಧಿಕಾರಿಯವರಾದ ಕು| ಸುನಿತಾ ನಾಯಕ್‍ರವರು ಧಾರ್ಮಿಕ ಭಾವನೆ ಮನೆ ಮನೆಗಳಲ್ಲಿ ಬೆಳೆಯ ಬೇಕು, ಅದನ್ನು ಮುಂದುವರಿಸಿಕೊಂಡು ಹೋಗುವ ಕೆಲಸ ನಮ್ಮಿಂದಾಗಬೇಕು ಎಂದು ತಿಳಿಸಿದರು.
ಶ್ರೀ ಸಾಯಿ ಉಳ್ಳಾಲ್ತಿ ಮತ್ತು ಉಳ್ಳಕುಳು ಸೇವಾ ಟ್ರಸ್ಟ್ ಕೊಕ್ಕಪುಣಿ ಇಲ್ಲಿನ ಅಧ್ಯಕ್ಷರಾದ ಶ್ರೀ ಜಯರಾಜ್‍ರವರು ಸಂಘಟನೆಯ ಜೊತೆಗೆ ಸೇರಿ ನಡೆಸಿದ ಧಾರ್ಮಿಕ ಕೆಲಸಗಳು ನಮ್ಮನ್ನು ಬಲಪಡಿಸುತ್ತವೆ. ಸ್ವಾವಲಂಬನೆಯ ದಾರಿ ತೋರಿಸುತ್ತದೆ, ಸ್ವಾರ್ಥವನ್ನು ದೂರ ಮಾಡಿ ಒಗ್ಗಟನ್ನು ಬೆಳೆಸುತ್ತದೆ. ವಿಜ್ಞಾನ ಬೆಳೆದಂತೆ ಸಂಬಂಧ ಕಡಿಯುತ್ತಿದೆ, ವಾರಕ್ಕೊಮ್ಮೆ ಭಜನೆ ಮಾಡುವುದರಿಂದ ನಮ್ಮನ್ನು ಹತ್ತಿರತರುತ್ತದೆ. ನಾವು ನಮ್ಮ ಧರ್ಮವನ್ನು ಬಿಡದೇ ಹಿರಿಯರ ಬೆಳೆಸಿಕೊಂಡು ಬಂದ ಧಾರ್ಮಿಕ ಭಾವನೆಯನ್ನು ಕಷ್ಟಸುಖದಲ್ಲಿ ಸ್ಪಂದಿಸುವ ಮನೋಭಾವನೆ ಬೆಳೆಸಬೇಕು, ಎಂದು ತಿಳಿಸಿದರು. ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಮಜಿ ಇಲ್ಲಿನ ಮುಖ್ಯ ಶಿಕ್ಷಕರಾದ ನಾರಾಯಣ ಪೂಜಾರಿಯವರು ಸಮಾಜ ಮುಖಿ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡು, ಒಂದಾಗಿ ದುಡಿಯಬೇಕು, ಕೈಲಾದ ಸಹಾಯವನ್ನು ಮಾಡುತ್ತಾ ಇತರರಿಗೆ ಪ್ರೇರಣೆಯಾಗುವ ಸಂಘಟನೆಯಾಗಿದೆ. ತಾನು ಬೆಳೆಯುವ ಮೂಲಕ ಇತರರ ಬದುಕಿನಲ್ಲೂ ಉತ್ತಮ ಬದಲಾವಣೆ ತಂದಾಗ ಜೀವನದಲ್ಲಿ ಸಾರ್ಥಕತೆ ಪಡೆಯುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೊಳಂತೂರು ವೀರಕಂಭ ಒಕ್ಕೂಟದ ಸೇವಾ ಪ್ರತಿನಿಧಿ, ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಭಾಗವಹಿಸಿದ್ದರು. ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಶಿವಪ್ಪ. ಎಂ.ಕೆ. ಇವರು ಸ್ವಾಗತಿಸಿ, ಬೋಳಂತೂರು ಸೇವಾ ಪ್ರತಿನಿಧಿ ಕುಮಾರಿ ವನಿತಾ ರವರು ಧನ್ಯವಾದ ನೀಡಿದರು. ವೀರಕಂಭ ಒಕ್ಕೂಟದ ಕೋಶಾಧಿಕಾರಿ ಸುನೀಲ್ ಕಾರ್ಯಕ್ರಮ ನಿರೂಪಿಸಿದರು.

