ಮೂಡುಬಿದಿರೆ: ಸ್ನೇಹಕ್ಕಾಗಿ ಸ್ಥಾಪನೆಗೊಂಡ ರೋಟರಿ ಸಂಸ್ಥೆಯು ಸೇವೆಯ ರೂಪವನ್ನು ಹೊಂದಿರುವುದರಿಂದ ಜಗತ್ತಿನೆಲ್ಲೆಡೆ ಬೃಹದಾಕಾರವಾಗಿ ಬೆಳೆದಿವೆ. ಸರ್ಕಾರ, ಕಾರ್ಪೋರೇಟ್ ಸಂಸ್ಥೆಗಳು ಮಾಡುವ ಕೆಲಸವನ್ನು ರೋಟರಿ ಸಂಸ್ಥೆಯು ಮಾಡುತ್ತಿದ್ದು ಈ ಜನಹಿತ ಯೋಜನೆಗಳನ್ನು ಈಗ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತರುತ್ತಿದ್ದಾರೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಡಾ. ಆರ್. ಎಸ್. ನಾಗಾರ್ಜುನ್ ಹೇಳಿದರು.
ರೋಟರಿ ಶಾಲೆಯ ಸಮ್ಮಿಲನ್ ಹಾಲ್‍ನಲ್ಲಿ ರೋಟರಿ ಕ್ಲಬ್ ವತಿಯಿಂದ ನಡೆದ ರೋಟರಿ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಪರಾಜ್ಯಪಾಲ ಸಂತೋಷ್ ಶೆಟ್ಟಿ, ಝೋನಲ್ ಲೆಪ್ಪಿನೆಂಟ್ ಡಾ. ಎ. ಜಯಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು. ರೊಟೋಲೆಟ್ಸ್ ಯೋಜನೆಯಡಿ ಶೌಚಾಲಯ ರಹಿತ 79 ಮಂದಿಗೆ ರೋಟರಿ ಕ್ಲಬ್ ವತಿಯಿಂದ ಶೌಚಾಲಯ ನಿರ್ಮಿಸಿಕೊಟ್ಟಿದ್ದು ಈ ಪೈಕಿ 13 ಮಂದಿಗೆ ಶೌಚಾಲಯ ಕಿಟ್‍ಗಳನ್ನು ನೀಡಲಾಯಿತು. ಡಾ. ಮುರಳೀಕೃಷ್ಣ ಫಲಾನುಭವಿಗಳ ವಿವರ ನೀಡಿದರು. ಇದೇ ಸಂದರ್ಭದಲ್ಲಿ ರೋಟರಿ ಫೌಂಡೇಶನ್‍ಗೆ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು. ಸುಧಾ ನಾಗಾರ್ಜುನ್, ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಸುದೀಪ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಸದಾನಂದ ನಾಯಕ್ ಸಂಪಾದಕತ್ವದ ರೋಟರಿ ಸಂಚಿಕೆ ರೋಟಾದ್ರಿಯನ್ನು ಬಿಡುಗಡೆಗೊಳಿಸಲಾಯಿತು. ಸೀಮಾ ಸುದೀಪ್ ಕಾರ್ಯಕ್ರಮ ನಿರ್ವಹಿಸಿದರು.

