ಮೂಡುಬಿದಿರೆ: ಅವೈಜ್ಞಾನಿಕ ಯೋಜನೆಗಳ ವಿರುದ್ಧ ಧ್ವನಿ ಎತ್ತದಿದ್ದರೇ ಎತ್ತಿನ ಹೊಳೆಯಂತಹ ಅವೈಜ್ಞಾನಿಕ ಯೋಜನೆಗಳು ಇಡೀ ಕರಾವಳಿಯನ್ನು ವ್ಯಾಪಿಸುವ ಅಪಾಯವಿದೆ. ಅವೈಜ್ಞಾನಿಕ ಯೋಜನೆಗಳನ್ನು ವಿರೋಧಿಸದಿದ್ದರೇ ಉತ್ತರ ಕನ್ನಡ ಜಿಲ್ಲೆಗೂ ಇಂತಹದೇ ಪರಿಸ್ಥಿತಿ ಒದಗಿಬರಬಹುದು. ಪರಿಸರ ಸಂರಕ್ಷಣೆ, ಎತ್ತಿನ ಹೊಳೆ ನದಿ ತಿರುವು ಯೋಜನೆಯನ್ನು ವಿರೋಧಿಸುವವರಿಗೆ ತಮ್ಮ ಬೆಂಬಲವಿದೆ ಎಂದು ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಮಜ್ಜಗದ್ಗುರು ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀ ಅಭಿಪ್ರಾಯಪಟ್ಟರು.
ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್‍ನ ಸೆಂಟರ್ ಫಾರ್ ಇಕೋಲೋಜಿಕಲ್ ಸೈನ್ಸಸ್‍ನ ಎನರ್ಜಿ ಆ್ಯಂಡ್ ವೆಟ್‍ಲ್ಯಾಂಡ್ ರೀಸರ್ಚ್ ಗ್ರೂಪ್ ಮತ್ತು ಮೂಡಬಿದಿರೆಯ ಆಳ್ವಾಸ್ ಕಾಲೇಜು ಮತ್ತು ಆಳ್ವಾಸ್ ಇನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಇವುಗಳ ಸಹಭಾಗಿತ್ವದಲ್ಲಿ ಬುಧವಾರ ವಿದ್ಯಾಗಿರಿಯಲ್ಲಿ ಪ್ರಾರಂಭವಾದ ಘಟ್ಟದ ಜೈವಿಕ ಸೂಕ್ಷ್ಮ ಸಂವೇದಿ ಪ್ರದೇಶಗಳ ಸಂರಕ್ಷಣೆ ಮತ್ತು ಸುಸ್ಥಿರ ನಿರ್ವಹಣೆ ಕುರಿತಾದ ಮೂರು ದಿನಗಳ `ಲೇಕ್ 2016′ ಅಂತಾರಾಷ್ಟ್ರೀಯ ಮಟ್ಟದ 10ನೇ ದ್ವೈವಾರ್ಷಿಕ ಸಮ್ಮೇಳನದಲ್ಲಿ ಆಶೀರ್ವಚನವಿತ್ತರು.
ಕೆರೆಗಳನ್ನು ಉಳಿಸದಿದ್ದರೆ ನಮಗೆ ಉಳಿಗಾಲವಿಲ್ಲ. ನೀರಿನ ಸೆಲೆಯುಳಿಸಿ ಜೀವನಾಧಾರವಾಗಿ ನಮಗೊದಗಿ ಬಂದ ಕೆರೆಗಳನ್ನು ಒತ್ತುವರಿ ಮಾಡಿದ ಪ್ರಕರಣಗಳು ನ್ಯಾಯಾಲಯದಲ್ಲಿ ಬಿದ್ದು ಹೋಗಲು ಸರ್ಕಾರಿ ದಾಖಲೆಗಳು ಸಮರ್ಪಕವಾಗಿಲ್ಲದಿರುವುದೇ ಕಾರಣ’
ಮೂಡಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿದರು. ಪಶ್ಚಿಮ ಘಟ್ಟದ ತಪ್ಪಲ್ಲಿನಲ್ಲಿರುವ ಕರಾವಳಿಗೆ ಬೇಕಾಗಿರುವುದು ವಿಶೇಷ ಆರ್ಥಿಕ ವಲಯವಲ್ಲ, ಪರಿಸರ ಸ್ನೇಹಿ ಆರ್ಥಿಕವಲಯಯ ಇಲ್ಲಿ ವೈಜ್ಞಾನಿಕ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು. ಪ್ರತಿ ಗ್ರಾಮದಲ್ಲೂ ಮಳೆ ನೀರಿನ ಕೊಯ್ಲು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂದರು.
ಮಂಗಳೂರು ವಿ.ವಿ. ಉಪಕುಲಪತಿ ಪ್ರೊ. ಕೆ. ಭೈರಪ್ಪ ಸಮ್ಮೇಳನವನ್ನು ಉದ್ಘಾಟಿಸಿ, ಪರಿಸರಕ್ಕೆ ಹಾನಿ ಮಾಡುವಂತಹ ಶಕ್ತಿಗಳನ್ನು ಬಳಸುವ ಬದಲು ಸೌರಶಕ್ತಿ, ಪವನಶಕ್ತಿಯನ್ನು ನಾವು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂದರು.
ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಧಾನ್ಯಸಿರಿಯನ್ನು ಅನಾವರಣಗೊಳಿಸಿದರು.
ಲೇಕ್ 2016ರ ಸಭಾಪತಿ ಡಾ. ಟಿ.ವಿ. ರಾಮಚಂದ್ರ ದಿಕ್ಸೂಚಿ ಭಾಷಣ ಮಾಡಿ, ಪಶ್ಚಿಮ ಘಟ್ಟದಲ್ಲಿ ಜೀವ ವೈಜ್ಞಾನಿಕವಾಗಿ ಸೂಕ್ಷ್ಮಸಂವೇದಿ ಸ್ಥಿತಿಯಲ್ಲಿರುವ ಪ್ರದೇಶಗಳ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. 43 ವರ್ಷಗಳಲ್ಲಿ ಬಹುತೇಕ ಹಸಿರಾಗಿದ್ದ ಪ್ರದೇಶವಿಂದು ಕನಿಷ್ಟ ಕಾಡನ್ನು ಹೊಂದಿರುವ ದಾರುಣ ಚಿತ್ರಣವನ್ನು ಅವರು ಸಾದೃಶ್ಯವಾಗಿ ವಿವರಿಸಿದರು.
ಸಮ್ಮಾನ: ಪರಿಸರ ಸಂರಕ್ಷಣೆಯ ವಿವಿಧ ವಿಭಾಗಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿರುವ ಉಡುಪಿಯ ಕೆ. ಗೋಪಾಲಕೃಷ್ಣ ಭಟ್, ವಾಗ್ದೇವಿ ಫೌಂಡೇಶನ್‍ನ ಸಿಇಓ ಹರೀಶ್ ಕೃಷ್ಣಮೂರ್ತಿ, ಜೈವಿಕ ಶಾಸ್ತ್ರಜ್ಞ ಬೆಂಗಳೂರು ಐಐಎಸ್‍ನ ವಿಷ್ಣು ಮುಕ್ರಿ, ವರ್ತೂರು ಕೆ.ಕೆ .ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಆಲ್ಲಿ ರಾಣಿ ಅವರನ್ನು ಸಮ್ಮಾನಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ, ಪರಿಸರ ಸಂಬಂಧಿ ಸಿಡಿ ಬಿಡುಗಡೆಗೊಳಿಸಿದರು.
ಪರಿಸರವಾದಿ ಸುರೇಶ್ ಹಬ್ಳೀಕರ್, ಪರಿಸರ ಚಿಂತಕ ಅನಂತ ಹೆಗಡೆ ಅಶೀಸರ, ಬೆಂಗಳೂರು ವಿದ್ಯಾನಿಕೇತನ ಶಾಲೆಯ ಸಿಇಓ ವಿಜಯ್ ರಾಜಗೋಪಾಲನ್, ಆಳ್ವಾಸ್ ಟ್ರಸ್ಟಿ ವಿವೇಕ ಆಳ್ವ ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸ್ವಾಗತಿಸಿದರು. ದೀಪಾ ರತ್ನಾಕರ್ ನಿರೂಪಿಸಿದರು. ಅಫ್ಘಾನಿಸ್ತಾನ, ಆಫ್ರಿಕಾ, ಯುಎಇ, ಫಿನ್ಲೆಂಡ್, ಕೆನಡಾ ಮೊದಲಾದ ದೇಶಗಳಿಂದ 150 ಮಂದಿ, ಭಾರತದ ವಿವಿಧ ರಾಜ್ಯಗಳಿಂದ 50 ಮಂದಿ ಪರಿಸರ ಸಂಶೋಧಕರು, ವಿವಿಧ ಪದವಿ ವಿಭಾಗಳಿಂದ ಸುಮಾರು 700 ಮಂದಿ ಸೇರಿದಂತೆ ಒಟ್ಟು 1300 ಪ್ರತಿನಿ„ಗಳು ಮೂರುದಿನಗಳ ಈ ಸಮ್ಮೇಳನದಲ್ಲಿನ ಪಾಲ್ಗೊಳ್ಳುತ್ತಿದ್ದಾರೆ.
(ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸ್ವಚ್ಛತೆ, ನೀರಿಂಗಿಸುವ ಕಾರ್ಯ ಶ್ರದ್ಧೆಯಿಂದ ನಡೆಯುತ್ತಿದ್ದು ಎನ್ನೆಸೆಸ್, ಎನ್‍ಸಿಸಿ ಘಟಕಗಳ ಮೂಲಕ ಹಳ್ಳಿಗಳ ತೋಡುಗಳಿಗೆ ಒಡ್ಡು ಕಟ್ಟುವ ಕಾರ್ಯವನ್ನು ನಡೆಸಲಾಗುತ್ತಿದೆ; ಮಿಜಾರ್‍ನಲ್ಲಿ ಮೂರು ಕೆರೆಗಳ ಹೂಳೆತ್ತಲಾಗುವುದು, ಒಟ್ಟಿನಲ್ಲಿ ಪರಿಸರ ಸಂರಕ್ಷಣೆ, ಸಸ್ಯ ಸಂವರ್ಧನೆಯನ್ನು ಆಳ್ವಾಸ್ ಸಂಸ್ಥೆ ಮಾಡಲಿದೆ. )
-ಡಾ.ಎಂ ಮೋಹನ ಆಳ್ವ
ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ

