ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಕೈಕಂಬ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆಯ ಎರಡೂ ಬದಿ ಹೊಂಡು ಕೊರೆದು ಒಂದೂವರೆ ತಿಂಗಳು ಕಳೆದರೂ ಇಲ್ಲಿನ ಜನಪ್ರತಿನಿಧಿಗಳು ಮತ್ತು ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಮೌನವಹಿಸಿರುವುದನ್ನು ಖಂಡಿಸಿ ಜ.2ರಂದು ಬೆಳಿಗ್ಗೆ ಕೆಲಹೊತ್ತು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಬಂಟ್ವಾಳ ತಾಲ್ಲೂಕು ಬ್ಯಾರಿ ಫೌಂಡೇಶನ್ ಅಧ್ಯಕ್ಷ ಪಿ.ಎ.ರಹೀಂ ಎಚ್ಚರಿಸಿದ್ದಾರೆ.
ಬಿ.ಸಿ.ರೋಡ್‍ನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದೇ 19ರಂದು ನಡೆದ ದಿಢೀರ್ ಪ್ರತಿಭಟನೆ ಸಂದರ್ಭದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದರು. ಈ ನಡುವೆ ಬಂಟ್ವಾಳ ಪುರಸಭೆ ಮತ್ತು ನಗರ ಪೊಲೀಸ್ ಠಾಣೆಗೆ ದೂರಿಕೊಂಡರೂ ಯಾವುದೇ ಇದುವರೆಗೆ ಪ್ರಯೋಜನವಾಗಿಲ್ಲ.
ಈಗಾಗಲೇ ಇಲ್ಲಿನ ಹೊಂಡಗಳಿಗೆ ಮಹಿಳಾ ಪ್ರಯಾಣಿಕರು ಸಹಿತ ಹಲವು ಮಂದಿ ಶಾಲಾ ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಬಿದ್ದು ಗಾಯಗೊಂಡಿದ್ದಾರೆ. ಇಲ್ಲಿನ ರಿಕ್ಷಾ ಚಾಲಕರಿಗೂ ದುಡಿಮೆಯೇ ಇಲ್ಲದಂತಾಗಿದೆ ಎಂದು ಅವರು ಆರೋಪಿಸಿದರು.
ಇಲ್ಲಿನ ಸಂಚಾರಿ ಠಾಣಾಧಿಕಾರಿ ಚಂದ್ರಶೇಖರಯ್ಯ ಅವರು ಕಳೆದ ಒಂದೂವರೆ ತಿಂಗಳ ಹಿಂದೆ ಏಕಾಯೇಕಿ ರಸ್ತೆ ಬದಿ ಅಗೆದು ಹಾಕುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದು, ಇದೀಗ ಹೊಂಡ ಮುಚ್ಚುವಲ್ಲಿ ಮಾತ್ರ ತೀರಾ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು. ಬ್ಯಾರಿ ಫೌಂಡೇಶನ್ ಉಪಾಧ್ಯಕ್ಷ ಕೆ.ಎಚ್.ಅಬೂಬಕ್ಕರ್, ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಯಾಕೂಬ್, ವರ್ತಕ ಅಜರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

