ಮೂಡುಬಿದಿರೆ: ಅನನಾಸು ಕೃಷಿಗೆ ಹೆಸರು ಪಡೆದ ಮೂಡುಬಿದಿರೆ ಸಮೀಪದ ಬನ್ನಡ್ಕದ ಸೋನ್ಸ್ ಫಾರ್ಮ್ ಹಾಗೂ ಇತಿಹಾಸ ಪ್ರಸಿದ್ಧ ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಸೋಮವಾರ ವಿದೇಶಿ ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಆಸ್ವಾದಿಸಿದರು.
ಸೋಮವಾರ ಪೂರ್ವಾಹ್ನ ಸೋನ್ಸ್ ಫಾರ್ಮ್ಗೆ ಭೇಟಿ ನೀಡಿದ ವಿದೇಶಿ ತಂಡ ಜಿಲ್ಲೆಯ ವಿಶೇಷ ಬೆಳೆಗಳಾದ ಅನನಾಸು, ಪಪ್ಪಾಯಿ, ಹಲಸಿನ ಹಣ್ಣು, ಸಾಂಬಾರು ಪದಾರ್ಥಗಳ ಬೆಳೆಗಳನ್ನು ಕುತೂಹಲದಿಂದ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ನಂತರ ಅಲ್ಲಿದ್ದ ವಿವಿಧ ನರ್ಸರಿಗಳ ಕುರಿತು ವಿವರ ತಿಳಿದುಕೊಂಡರು. ಸೋನ್ಸ್ ಫಾರ್ಮ್ನ ಎಲ್.ಸಿ ಸೋನ್ಸ್, ಐ.ವಿ ಸೋನ್ಸ್, ವಿವೇಕ್ ಸೋನ್ಸ್ ಪ್ರವಾಸಿಗರಿಗೆ ಮಾಹಿತಿ ನೀಡಿದರು.

ನಂತರ ಈ ತಂಡ ಮೂಡುಬಿದಿರೆಯ ಸಾವಿರ ಕಂಬ ಬಸದಿಗೆ ಭೇಟಿ ನೀಡಿ ಅಲ್ಲಿನ ಶಿಲ್ಪ ಕಲೆಗಳನ್ನು ಕುತೂಹಲದಿಂದ ವೀಕ್ಷಿಸಿ ಬಳಿಕ ಚಂದ್ರನಾಥಸ್ವಾಮಿಯ ದರ್ಶನ ಪಡೆದರು. ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಿದರು. ಯು.ಎಸ್.ಎ, ಆಸ್ಟ್ರೇಲಿಯಾ ಹಾಗೂ ಯೂರೋಪ್ ರಾಷ್ಟ್ರಗಳಿಂದ ಜಿಲ್ಲೆಗೆ ಸುಮಾರು 2500 ಪ್ರವಾಸಿಗರು ಆಗಮಿಸಿದ್ದು ಅವರ ಪೈಕಿ ಒಂದು ತಂಡ ಮೂಡುಬಿದಿರೆಗೆ ಭೇಟಿ ನೀಡಿದರು.

