ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇದರ ವತಿಯಿಂದ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರಿನಲ್ಲಿ ದ. ಕ. ಜಿಲ್ಲೆಯ ಚಿತ್ರಕಲಾ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರವು ಡಿ.10ರಂದು ಜರಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ ಗಣೇಶ್ ಭಟ್ ವಿ ಅವರು ಮಾತನಾಡುತ್ತಾ ನಿರ್ಜೀವ ಶಿಲೆಯಲ್ಲೂ , ಬಿಳಿಹಾಳೆಯಲ್ಲೂ ಜೀವವನ್ನು ತುಂಬುವರು ಕಲಾವಿದರು. ಚಿತ್ರಕಲೆ ಕಲಾ ಅಭಿವ್ಯಕ್ತಿಯ ತುತ್ತ ತುದಿಯ ಪ್ರಕ್ರಿಯೆಯಾಗಿದೆ , ಕಲೆಯ ಜೊತೆ ಮಾನವೀಯತೆ ಸೇರಿದಾಗ ಕಲೆ ಜೀವಂತವಾಗಿ ಉಳಿಯತ್ತದೆ, ಬೆಳಗುತ್ತದೆ. ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಚಿತ್ರಕಲಾ ಶಿಕ್ಷಕಿ ಶಾಲಿನೀ ಅವರು ದಿವ್ಯಾಂಗ ಮಕ್ಕಳಲ್ಲಿ ಪ್ರತಿಭೆಯನ್ನು ಅರಳಿಸುತ್ತಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಪ್ರೌಢ ಶಾಲೆಯ ಮುಘ್ಯೋಪಾಧ್ಯಾಯ ಅಶೋಕ್ ಕುಮಾರ್ ಶೆಟ್ಟಿ ಅವರು ಮಾತನಾಡಿ ಕಲೆಯು ಭಾಶೆಗಳ ಎಲ್ಲೆಗಳನ್ನು ಮೀರಿದೆ, ಶಾಲೆಗಳಲ್ಲಿ ಚಿತ್ರಕಲೆಗೆ ಹಾಗೂ ಮಕ್ಕಳ ಚಿತ್ರಕಲಾ ಅಭಿವ್ಯಕ್ತಿಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ಕೊಡಬೇಕಾಗಿದೆ ಎಂದು ನುಡಿದರು.
ಮಂಗಳಜ್ಯೋತಿ ಚೈಲ್ಡ್ ಫಂಡ್ ಯೋಜನಾಧಿಕಾರಿ ಪುನೀತ್ ಡಿ, ಹಾಗೂ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಮಾರ್ಯಟ್ ಮಸ್ಕರೇನಸ್, ಇವರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಹಾಬಲ ಕುಳ ಇವರು ವಹಿಸಿದ್ದರು. ಜಿಲ್ಲಾ ಸಂಘದ ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಶಿಕ್ಷಕ ಸುಂದರ ತೋಡಾರ್ ಸ್ವಾಗತಿಸಿ, ದಿನೇಶ್ ಕುಂದರ್ ವಂದನಾರ್ಪಣೆಗೈದರು. ರಮೇಶ್ ಆಚಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುಮನ ಅವರು “ ಕಾಗದ ಕಸವಲ್ಲ- ಇದೊಂದು ಕಲೆ” ಎಂಬ ವಿಷಯದಲ್ಲಿ ಪ್ರಾತ್ಯಕ್ಷಿಕೆ ಸಹಿತವಾದ ಶೈಕ್ಷಣಿಕ ಕಾರ್ಯಾಗಾರವನ್ನು ನಡೆಸಿಕೊಟ್ಟರು.

