ಬೆಂಗಳೂರು: ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೆಂಗಳೂರಿನ ದಿ ತಾಜ್ ವೆಸ್ಟೆಂಡ್ ಹೊಟೇಲ್ ನಲ್ಲಿ ಕಲಾ ನಿರ್ದೇಶಕ ಅರುಣ್ ಸಾಗರ್ ಅವರು ಭವ್ಯ ವೇದಿಕೆ ಸಿದ್ಧಪಡಿಸಿದ್ದು, ಗಣ್ಯರ ಸಮ್ಮುಖದಲ್ಲಿ ಯಶ್ ರಾಧಿಕಾ ಪಂಡಿತ್ ಅವರ ಕೈಹಿಡಿದರು.


ಸೋಮನಾಥೇಶ್ವರ ಮಾದರಿಯ ಸೆಟ್ ನಲ್ಲಿ ಯಶ್ ಹಾಗೂ ರಾಧಿಕಾ ಅವರ ಮದುವೆ ನೆರವೇರಿದ್ದು, ಸೋಮನಾಥಪುರದ ಟೆಂಪಲ್ ರೀತಿ ಸೆಟ್ ಹಾಕಿದ್ದು ಶಿವ-ಪಾರ್ವತಿ ಮೂರ್ತಿಗಳ ಮುಂದೆ ಸಪ್ತಪದಿ ತುಳಿದರು. ಕುಟುಂಬದವರು, ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಪ್ರಕೃತಿಯ ನಡುವೆ ಮುಹೂರ್ತ ಧಾರೆ ನಡೆದಿದ್ದು, ವಿಶೇಷವಾದ ಸೆಟ್ ಗಳು ಕಲಾಕೃತಿಗಳಿಂದ ಹೊಸ ಲೋಕವನ್ನೇ ಸೃಷ್ಠಿಸಲಾಗಿತ್ತು.


ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಸೇರಿದಂತೆ ಹಲವು ಗಣ್ಯರು, ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬಸ್ಥರು, ಆಪ್ತರು ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು.
ಬೆಳಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳು:
ಬೆಳಗ್ಗೆಯಿಂದಲೇ ತಾಜ್ ಹೋಟೆಲ್’ನಲ್ಲಿ ವಿವಾಹ ಸಂಬಂಧಿ ಕಾರ್ಯಕ್ರಮಗಳು ನಡೆಯಿತು. 12.10 ರ ಶುಭ ಮುಹೂರ್ತದಲ್ಲಿ ಯಶ್ ಮತ್ತು ರಾಧಿಕಾ ಸತಿ-ಪತಿ ಆದರು. ಗುರು ಹಿರಿಯರು ಮತ್ತು ಆಪ್ತರು ಹಾಗೇನೆ, ಸಿನಿರಂಗದ ಸಮ್ಮಖದಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅರಮನೆ ಮೈದಾನದಲ್ಲಿ ಆರತಕ್ಷತೆ:
ಇಂದಿನಿಂದ 3 ದಿನಗಳ ಕಾಲ ಮದುವೆ ಸಮಾರಂಭ ನಡೆಯಲಿದೆ. ಇನ್ನು ನಾಳೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಸಂಭ್ರಮದಲ್ಲಿ ಭಾಗಿಯಾಗಲು ಇಡೀ ಇಂಡಸ್ಟ್ರೀಗೆ ಆಹ್ವಾನ ಕೊಡಲಾಗಿದೆ.

ಡಿಸೆಂಬರ್ 6 ರಂದು ಖಾಸಗಿ ರೆಸಾರ್ಟ್ ನಲ್ಲಿ ನಡೆದ ಮೆಹಂದಿ, ಸಂಗೀತ ಕಾರ್ಯಕ್ರಮದಲ್ಲಿ ಕುಟುಂಬದವರು ಆತ್ಮೀಯರು, ಕಲಾವಿದರು ಪಾಲ್ಗೊಂಡಿದ್ದರು. ಡಿಸೆಂಬರ್ 10 ರಂದು ಸಂಜೆ ತ್ರಿಪುರವಾಸಿನಿಯಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 11 ರಂದು ಅಭಿಮಾನಿಗಳು ಮತ್ತು ಒಕ್ಕೂಟದ ಕಾರ್ಮಿಕರಿಗೆ ಔತಣಕೂಟ ಏರ್ಪಡಿಸಲಾಗಿದೆ. ತ್ರಿಪುರ ವಾಸಿನಿಯಲ್ಲಿಯೇ ಮತ್ತೊಮ್ಮೆ ರೆಸೆಪ್ಷನ್ ಮಾಡಿಕೊಳ್ಳುತ್ತಿದ್ದಾರೆ. ಯಶ್, ಅಭಿಮಾನಿಗಳನ್ನು ಆಹ್ವಾನಿಸಿದ್ದು, ಡಿಸೆಂಬರ್ 11 ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಿಮಗಾಗಿ ಹಾಗೂ ಒಕ್ಕೂಟದ ಕಾರ್ಮಿಕರಿಗಾಗಿ ಔತಣಕೂಟ ಏರ್ಪಡಿಸಿದ್ದು, ಯಾವುದೇ ಉಡುಗೊರೆ, ಹಾರ ತರಬೇಡಿ ಪ್ರೀತಿಯಿಂದ ಬಂದು ಹಾರೈಸಿ ಎಂದು ಹೇಳಿದ್ದಾರೆ.
