ಮಂಗಳೂರು : ಕೋಸ್ಟಲ್‍ವುಡ್‍ನ ಬಹುನಿರೀಕ್ಷಿತ `ಪಿಲಿಬೈಲು ಯಮುನಕ್ಕ’ ಚಿತ್ರ ಡಿಸೆಂಬರ್ 9ರಂದು ಬಿಡುಗಡೆಯಾಗುತ್ತಿದೆ. ಇದು ಲಕುಮಿ ಸಿನೆ ಕ್ರಿಯೇಶನ್ಸ್ ಬ್ಯಾನರಿನಡಿ ಸಿದ್ಧಗೊಂಡಿರುವ ಚಿತ್ರವಾಗಿದ್ದು, ಇದರಲ್ಲಿ ಮನುಷ್ಯನ ಜೀವನ ಮತ್ತು ಆಸೆಗಳು ವ್ಯಕ್ತವಾಗಿವೆ. ಹಲವು ಪ್ರಯೋಗಗಳಿಗೆ ಕಾರಣವಾಗಿರುವ ಈ ಚಿತ್ರದಲ್ಲಿ ಬಾಲಿವುಡ್ ಗಾಯಕರಾದ ಕುನಾಲ್ ಗಾಂಜಾವಾಲಾ, ಶ್ರೇಯಾ ಘೋಷಾಲ್, ಅಮನ್ ತ್ರಿಶಾ, ನಕಾಶ್ ಅಜೀಜ್, ಪ್ರಕಾಶ್ ಮಹಾದೇವನ್ ಹಾಡಿದ್ದಾರೆ. ಇನ್ನು, ತೆಂಕುತಿಟ್ಟು ಯಕ್ಷಗಾನಲೋಕದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಪಟ್ಲ ಸತೀಶ್ ಶೆಟ್ಟಿ ಕೂಡಾ ಈ ಚಿತ್ರದಲ್ಲಿ ಹಾಡು ಹಾಡಿದ್ದು ಈ ಹಾಡು ಈಗಾಗಲೇ ಹಿಟ್ ಆಗಿದೆ.

ಇನ್ನು, ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ `ಯಮುನಕ್ಕ’ನಾಗಿ ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಚಂದ್ರಕಲಾ ಮೋಹನ್‌ರವರು ಅಭಿನಯಿಸಿದ್ದಾರೆ. ಚಂದ್ರಕಲಾ ಮೋಹನ್ ಮೊದಲ ಬಾರಿಗೆ ತುಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಭಾಷೆಯ ಕಾರಣಕ್ಕೆ ಭಯದಿಂದಲೇ ಒಪ್ಪಿಕೊಂಡಿದ್ದ ಚಂದ್ರಕಲಾ ಈಗ ತುಳುನಾಡನ್ನು ತುಂಬಾ ಇಷ್ಟಪಡುತ್ತಿದ್ದಾರೆ. ನೀರುದೋಸೆ ಮತ್ತು ಮೀನುಸಾರು ಚಂದ್ರಕಲಾರನ್ನು ಬಹುವಾಗಿ ಸೆಳೆದಿದೆಯಂತೆ.

ಲಕುಮಿ ಕ್ರಿಯೇಶನ್ ಹಾಗೂ ಶ್ರೀ ದುರ್ಗಾ ಎಂಟರ್ ಟೈನ್‍ಮೆಂಟ್‍ನ ಎಕ್ಕಸಕ ಖ್ಯಾತಿಯ ಕೆ.ಸೂರಜ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರ. ನಾಯಕರಾಗಿ ನಾಗರಾಜ್ ಅಂಬರ್, ನಾಯಕಿಯಾಗಿ ಸೋನಾಲಿ ಮೊಂತೆರೋ, ನವೀನ್.ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸತೀಶ್ ಬಂದಲೆ, ದೀಪಕ್ ರೈ, ಉಮೇಶ್ ಮಿಜಾರು, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಉದಯ ಶೆಟ್ಟಿ ಇನ್ನಾ, ರೂಪ ವರ್ಕಾಡಿ, ನಮಿತಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ರೋಹನ್ ಶೆಟ್ಟಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ನೀಡಿದ್ದು, ಮಯೂರ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ಜತೆಗೆ ಒಟ್ಟು 106 ಕಲಾವಿದರು ಅಭಿನಯಿಸಿದ್ದು ಈ ಚಿತ್ರದ ವಿಶೇಷ.

ಈಗಾಗಲೇ ಇಂಪಾದ ಸಂಗೀತ ಜನ ಮನಸೂರೆಗೊಂಡಿರುವ ಪಟ್ಲ ಸತೀಶ್ ಶೆಟ್ಟಿಯವರ `ಮಾಯಕಡೊಂಜಿ ಪೊನ್ನಗಾಳಿ ಬೀಸುಂಡುಗೆ’ ಹಾಡು, ಪ್ರಥಮವಾಗಿ ಬಾಲಿವುಡ್‌ನ ಹೆಸರಾಂತ ಗಾಯಕರ ಧ್ವನಿಯಲ್ಲಿ ಮೂಡಿಬಂದಿರುವ ಗೀತೆಗಳು ಜನರ ಮೆಚ್ಚುಗೆ ಪಡೆದಿವೆ.
ಲಕುಮಿ ಸಿನಿ ಕ್ರಿಯೇಷನ್ ಬ್ಯಾನರ್‌ನಲ್ಲಿ ಹಾಗೂ ಶ್ರೀ ದುರ್ಗಾ ಎಂಟರ್‌ಟೇನ್‌ಮೆಂಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು `ಎಕ್ಕಸಕ’ ಕೆ. ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ರೋಹನ್ ಶೆಟ್ಟಿ ನಿರ್ಮಾಪಕರು, ಹರೀಶ್ ರಾವ್ ಮತ್ತು ಸಂದೇಶ್‌ರಾಜ್ ಬಂಗೇರಾ ಸಹ ನಿರ್ಮಾಪಕರು. ಕಿಶೋರ್ ಶೆಟ್ಟಿ ಸಂಗೀತ ನಿರ್ದೇಶನ ಒದಗಿಸಿದ್ದಾರೆ.

ಸಾಹಿತ್ಯ ಹಾಗೂ ಸಹ ನಿರ್ದೇಶನದ ಜವಾಬ್ದಾರಿಯನ್ನು ಮಯೂರ್ ಆರ್. ಶೆಟ್ಟಿ ನಿರ್ವಹಿಸಿದ್ದು, ಕೀರ್ತನ್ ಪೂಜಾರಿ ಕ್ಯಾಮರಾ, ಕೆ.ಆರ್. ಲಿಂಗರಾಜು ಸಂಕಲನ ನೀಡಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಸನ್ ಕೆಲಸ ಮುಂಬೈನ ಹೆಸರಾಂತ ಸ್ಟುಡಿಯೋದಲ್ಲಿ ನಡೆದಿದೆ ಎಂದು ಲಕುಮಿ ಕ್ರಿಯೇಷನ್‌ನ ಕಿಶೋರ್ ಡಿ. ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಚಿತ್ರವು ಹಿಂಸೆ ಮತ್ತು ಅಶ್ಲೀಲ ಸಂಭಾಷಣೆಯಿಂದ ಹೊರತಾಗಿದ್ದು, ಕುಟುಂಬ ಸಹಿತ ನೋಡಬಹುದಾಗಿದೆ. ಇದು ದ ಕ ಮತ್ತು ಉಡುಪಿ ಜಿಲ್ಲೆಯ ಕೆಲವು ಚಿತ್ರಮಂದಿರಗಳಲ್ಲಿ ಡಿ.9ರಂದು ಬಿಡುಗಡೆಗೊಳ್ಳಲಿದೆ.
