ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸುಮಾರು 2ಸಾವಿರಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳಿಂದ ವಿವಿಧ ದೈಹಿಕ ಕಸರತ್ತು ಮತ್ತು ಸಾಹಸ ಪ್ರದರ್ಶನದಿಂದ ಕೂಡಿದ ಹೊನಲು ಬೆಳಕಿನ ವಾರ್ಷಿಕ ಕ್ರೀಡೋತ್ಸವವು ಇದೇ 11ರಂದು ಭಾನುವಾರ ಸಂಜೆ 6.15ರಿಂದ ನಡೆಯಲಿದೆ ಎಂದು ಸಂಸ್ಥೆ ಮುಖ್ಯಸ್ಥ ಡಾ.ಕೆ.ಪ್ರಭಾಕರ ಭಟ್ ಹೇಳಿದ್ದಾರೆ.
ಕಲ್ಲಡ್ಕದಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಸಂಜೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಡಾ.ಧರ್ಮೇಂದ್ರ ಪ್ರಧಾನ್, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶರದ್ ಪವಾರ್, ಕೇಂದ್ರ ಸಚಿವ ಅನಂತಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರ ಗಣ್ಯರು ಮತ್ತು ದಾನಿಗಳು ಭಾಗವಹಿಸುವರು.
ಇಲ್ಲಿನ ವಿಶಾಲ ಮೈದಾನದಲ್ಲಿ ಶಿಶುನೃತ್ಯ, ಘೋಷ್ ಪ್ರದರ್ಶನ, ಜಡೆ ಕೋಲಾಟ, ದೀಪಾರತಿ, ನಿಯುದ್ಧ, ಯೋಗಾಸನ, ನೃತ್ಯಭಜನೆ, ಮಲ್ಲಕಂಭ, ನೃತ್ಯ ವೈವಿಧ್ಯ, ಚಕ್ರ ಸಮತೋಲನ, ಬೆಂಕಿ ಸಾಹಸ, ಕಾಲ್ಚಕ್ರ, ಕೂಪಿಕಾ ಸಹಿತ ವಿವಿಧ ದೈಹಿಕ ಕಸರತ್ತು ಹಾಗೂ ದೇಶಭಕ್ತಿ ಉದ್ದೀಪನಗೊಳಿಸುವ ವೈಶಿಷ್ಟ್ಯಮಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ ಎಂದು ಅವರು ವಿವರಿಸಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಸಂಸ್ಕಾರಯುತ ಶಿಕ್ಷಣ ನೀಡುವ ಮಹತ್ಕಾರ್ಯದಲ್ಲಿ ತೊಡಗಿಕೊಂಡಿದೆ. ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಇಲ್ಲಿನ ಮಣ್ಣಿನ ಬಗ್ಗೆ ಜ್ಞಾನ ಮೂಡಿಸಲು ಐದು ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೂಡಾ ಪ್ರಾಯೋಗಿಕವಾಗಿ ನಡೆಸುವ ಮೂಲಕ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
8ರಂದು ‘ವಸುಧಾರಾ’ ಗೋಶಾಲೆ ಲೋಕಾರ್ಪಣೆ:
ಇಲ್ಲಿನ ವಿದ್ಯಾಕೇಂದ್ರ ಬಳಿ ನೂತನವಾಗಿ ನಿರ್ಮಾಣಗೊಂಡ ಸ್ವದೇಶಿ ಗೋವುಗಳ ಗೋಶಾಲೆಯನ್ನು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮಿ ಅವರು ಇದೇ 8ರಂದು ಗುರುವಾರ ಬೆಳಿಗ್ಗೆ ಗಂಟೆ 9.30ಕ್ಕೆ ಲೋಕಾರ್ಪಣೆಗೊಳಿಸುವರು ಎಂದು ಅವರು ಇದೇ ವೇಳೆ ತಿಳಿಸಿದರು. ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು.

