ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ವಿಸ್ತರಣೆ ಮತ್ತು ಅಭಿವೃದ್ಧಿಗೆ ಈಗಾಗಲೇ ರೂ 2ಕೋಟಿ ಮೊತ್ತದ ಅನುದಾನ ವಿನಿಯೋಗಿಸಲಾಗಿದ್ದು, ಇಲ್ಲಿನ ಮೆಲ್ಕಾರ್ -ಮಾರ್ನಬೈಲು ರಸ್ತೆ ಮತ್ತು ಸಜಿಪಮೂಡ-ಮಾರ್ನಬೈಲು ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿಗೆ ತಲಾ ರೂ 1.35 ಕೋಟಿ ಮತ್ತು ರೂ 1.75ಲಕ್ಷ ಹೀಗೆ ಒಟ್ಟು ರೂ 5.10ಕೋಟಿ ಮೊತ್ತದ ಅನುದಾನದಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಮತ್ತು ಮಾರ್ನಬೈಲು ಸಂಪರ್ಕ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಸೋಮವಾರ ಸಂಜೆ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹೈಟೆಕ್ ಬಸ್‍ನಿಲ್ದಾಣ:
ಇನ್ನೊಂದೆಡೆ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತ ಬಳಿ ಈಗಾಗಲೇ ಗುರುತಿಸಲಾಗಿರುವ ಜಮೀನಿನಲ್ಲಿ ಸುಸಜ್ಜಿತ ಹೈಟೆಕ್ ಬಸ್‍ನಿಲ್ದಾಣ ನಿರ್ಮಿಸಲು ತ್ವರಿತಗತಿಯಲ್ಲಿ ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದೆ. ಬಿ.ಸಿ.ರೋಡ್ ಮುಖ್ಯವೃತ್ತದಿಂದ ಗೂಡಿನಬಳಿ, ಪಾಣೆಮಂಗಳೂರು, ನಂದಾವರ ಮೂಲಕ ಮಾರ್ನಬೈಲು ಸಂಪರ್ಕ ರಸ್ತೆ ರೂ 3.5ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅವರು ವಿವರಿಸಿದರು. ಮೆಲ್ಕಾರ್‍ನಲ್ಲಿ ಕೂಡಾ ಸುಸಜ್ಜಿತ ಬಸ್‍ನಿಲ್ದಾಣ ರಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಮೆಲ್ಕಾರ್‍ಗೆ ಬೆಂಗಳೂರು ಲುಕ್:
ಮೆಲ್ಕಾರ್‍ನಿಂದ ಮಾರ್ನಬೈಲ್‍ವರೆಗೆ ಸರಕಾರದ ಅಪೆಂಡಿಕ್ಸ್ ಯೋಜನೆಯನ್ವಯ ಚತುಷ್ಪಥ ಕಾಮಗಾರಿ ಭರದಿಂದ ಸಾಗಿದ್ದು ಇಕ್ಕೆಲಗಳ ರಸ್ತೆಗಳಿಗೂ ದಾರಿ ದೀಪ ಅಳವಡಿಸುವುದರ ಮೂಲಕ ಮುಂದಿನ ದಿನಗಳಲ್ಲಿ ಮೆಲ್ಕಾರ್‍ನ ಈ ರಸ್ತೆ ಬೆಂಗಳೂರು ಮಾದರಿಯಲ್ಲಿ ಕಂಗೊಳಿಸಲಿದೆ ಎಂದು ಸಚಿವ ಬಿ.ರಮಾನಾಥ ರೈ ಹೇಳಿದರು.
ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ, ಸ್ಥಳೀಯ ಪುರಸಭಾ ಸದಸ್ಯರಾದ ಸಂಜೀವಿ, ಜೆಸಿಂತಾ ಡಿಸೋಜ, ಮಾಜಿ ಸದಸ್ಯರಾದ ದಾಮೋದರ ಮೆಲ್ಕಾರ್, ಮಹಮ್ಮದ್ ರಫೀಕ್, ಪಕ್ಷದ ಪ್ರಮುಖರಾದ ಮಾಧವ ಎಸ್.ಮಾವೆ, ಉಮೇಶ ಬೋಳಂತೂರು, ಯೂಸುಫ್ ಕರಂದಾಡಿ, ಮಧುಸೂದನ ಶೆಣೈ, ತಹಶೀಲ್ದಾರ್ ಪುರಂದರ ಹೆಗ್ಡೆ, ಹೆದ್ದಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಬ್ದುಲ್ ರಹಿಮಾನ್, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ ಭಟ್, ಸಹಾಯಕ ಎಂಜಿನಿಯರ್ ಅರುಣ್ ಪ್ರಕಾಶ್, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಮತ್ತಿತರರು ಇದ್ದರು.

