ಬಂಟ್ವಾಳ: ಸುಮಾರು 78 ವರ್ಷಗಳ ಇತಿಹಾಸ ಮತ್ತು ರಾಜ್ಯದ ಏಕೈಕ ಸರ್ಕಸ್ ಕಂಪೆನಿ ಎಂಬ ಖ್ಯಾತಿ ಹೊಂದಿರುವ ‘ಗ್ರೇಟ್ ಪ್ರಭಾತ್ ಸರ್ಕಸ್’ ಪ್ರದರ್ಶನಕ್ಕೆ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತ ಬಳಿ ಇರುವ ಗದ್ದೆಯಲ್ಲಿ ಶುಕ್ರವಾರ ರಾತ್ರಿ ವರ್ಣರಂಜಿತ ಚಾಲನೆ ದೊರೆಯಿತು.
ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪುರಸಭಾ ಸದಸ್ಯರಾದ ವಸಂತಿ ಚಂದಪ್ಪ, ಚಂಚಲಾಕ್ಷಿ, ಜೆಸಿಂತ ಡಿಸೋಜ, ಪ್ರಭಾ ಆರ್. ಸಾಲ್ಯಾನ್, ಬಿಜೆಪಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮ್‍ದಾಸ್ ಬಂಟ್ವಾಳ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಕಳ್ಳಿಗೆ ಗ್ರಾಮ ಪಂಚಾಯಿತಿ ಸದಸ್ಯ ಮಧುಸೂದನ್ ಶೆಣೈ, ಸಂಸ್ಥೆ ಮುಖ್ಯಸ್ಥ ಸಾಯಿಬಾಬ, ಮೆನೇಜರ್ ದೇವರಾಜ್ ಮತ್ತಿತರರು ಇದ್ದರು.

ಪ್ರದರ್ಶನ:
ಸುಮಾರು 150ಕ್ಕೂ ಮಿಕ್ಕಿ ಕಲಾವಿದರಿಂದ ನಡೆದ ವಿವಿಧ ದೈಹಿಕ ಕಸರತ್ತು ಪ್ರೇಕ್ಷಕರನ್ನು ರಂಜಿಸಿತು. ದಕ್ಷಿಣ ಆಫ್ರಿಕಾದ ನಾಲ್ವರು ಯುವ ಕಲಾವಿದರ ಹಾಸ್ಯ ಭರಿತ ದೈಹಿಕ ಕಸರತ್ತು, ಗ್ಲೋಬೋ ರೈಡಿಂಗ್, ಜಿಮ್ನಾಸ್ಟಿಕ್, ಫೈಯಿಂಗ್ ಟ್ರೂಪಿಸ್, ಮೋಟರ್ ಬೈಕ್ ಜಂಪಿಂಗ್, ಸ್ಕೈವಾಕ್, ಬೇಬಿರೋಪ್, ಸೈಕಲ್ ಬ್ಯಾಲೆನ್ಸ್, ಆಸ್ಟ್ರೇಲಿಯನ್ ಗಿಳಿಗಳು, ಜೂಲಿ ನಾಯಿ, ಒಂಟೆಗಳು ಹೀಗೆ ವಿವಿಧ ಕಸರತ್ತು ಮನರಂಜಿಸಿತು. ನಾಲ್ಕು ಆನೆಗಳಿಂದ ನಡೆದ ಶಿವಲಿಂಗ ಪೂಜೆ ವಿಶೇಷ ಜನಾಕರ್ಷಣೆ ಪಡೆಯಿತು.

