ಬಿ.ಸಿ.ರೋಡು : ಅರುವತ್ತು ವರ್ಷಗಳ ಇತಿಹಾಸವುಳ್ಳ ನಮ್ಮ ದೇಶದ ಪ್ರಸಿದ್ಧ ಗ್ರೇಟ್ ಪ್ರಭಾತ್ ಸರ್ಕಲ್ ಬಿ.ಸಿ.ರೋಡಿನಲ್ಲಿ ಡಿ. 2ರಂದು ಆರಂಭಗೊಳ್ಳಲಿದೆ ಎಂದು ಸರ್ಕಸ್ ಕಂಪೆನಿಯ ಮಾಲಕ ಸಾಯಿಬಾಬಾ ಗುರುವಾರ ಸರ್ಕಸ್ ನಡೆಯುವ ಸ್ಥಳದಲ್ಲಿ ಪತ್ರಿಕಾಗೋಷ್ಠಿ ಕರೆದು ತಿಳಿಸಿದರು.



ನಮ್ಮ ತಂಡದ ಪ್ರಸಿದ್ಧ ಕಲಾವಿದರಿಂದ ಸರ್ಕಸ್ ಹಾಗೂ ಮನೋರಂಜನಾ ಕಾರ್ಯಕ್ರಮಗಳು ಪ್ರತಿನಿತ್ಯ ಮಧ್ಯಾಹ್ನ 1, ಸಂಜೆ 4 ಹಾಗೂ ರಾತ್ರಿ 7ಕ್ಕೆ ಮೂರು ಪ್ರದರ್ಶನಗೊಳ್ಳಲಿದೆ. ನೂರೈವತ್ತಕ್ಕೂ ಹೆಚ್ಚು ಕಲಾವಿದರನ್ನೊಳಗೊಂಡಿರುವ ಈ ಸರ್ಕಸ್‍ನಲ್ಲಿ ನಿರಂತರವಾಗಿ ಗ್ಲೋಬ್ ರೈಡಿಂಗ್, ಜಿಮ್ನಾಸ್ಟಿಕ್, ಫ್ಲೈಯಿಂಗ್ ಟ್ರೂಪೀಸ್, ಮೋಟಾರ್ ಬೈಕ್ ಜಂಪಿಂಗ್, ಸ್ಕೈವಾಕ್, ಬೇಬಿ ರೋಪ್, ಸೈಕಲ್ ಬ್ಯಾಲೆನ್ಸ್, ಜೋಕರ್ಸ್ ಕಾಮಿಡಿ, ಪ್ರಾಣಿಗಳ ವಿವಿಧ ಕಸರತ್ತುಗಳು, ಆಕರ್ಷಕವಾಗಿ ಪ್ರದರ್ಶನಗೊಳ್ಳಲಿದೆ ಎಂದರು.
ನಮ್ಮ ಸಂಸ್ಥೆಯನ್ನು 60 ವರ್ಷಗಳ ಹಿಂದೆ ರಾಜ್ಯದ ಕನಕಪುರ ರಾಮನಗರ ಜಿಲ್ಲೆಯ ಶ್ರೀ ಪ್ರಬಾತ್‍ರವರು ಆರಂಬಿಸಿದ್ದು ಅವರ ನಿಧನನಂತರ ಮಗನಾದ ನಾನು ಸರ್ಕಸ್ ಕಂಪೆನಿಯ ನೇತೃತ್ವ ವಹಿಸಿದ್ದೇನೆ. ಈಗ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಈ ಕಂಪೆನಿಯಲ್ಲಿ 4 ಆನೆ, 3 ಒಂಟೆ, ಆಸ್ಟ್ರೇಲಿಯನ್ ಗಿಳಿಗಳು, ತಪಾಸಣೆಗೊಳಪಟ್ಟ ನಾಯಿಗಳಿದ್ದು ಪ್ರಾಣಿಗಳ ಹಲವಾರು ಕಲಾತ್ಮಕ ಪ್ರದರ್ಶನಗಳು ನಡೆಯುತ್ತಿದೆ.



ರಾಜವಂಶದಿಂದ ಬಂದ ಈ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಮುಂದುವರಿಸುತ್ತಾ ಬರುತ್ತಿದ್ದೇನೆ. ಇಂದಿನ ಫ್ಯಾಶನ್ ಯುಗದಲ್ಲಿ ಸರ್ಕಸನ್ನು ಪ್ರೋತ್ಸಾಹಿಸುವವರು ಕಡಿಮೆ ಜೊತೆಗೆ ಸಂಸ್ಥೆಯ ಸರಂಜಾಮುಗಳನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ಕೊಂಡೊಯ್ಯುವುದು ಬಹಳಕಷ್ಟಕರವಾದರೂ ಬಿ.ಸಿ.ರೋಡಿನಲ್ಲಿ ಎರಡನೇ ಸಲ ಈ ಪ್ರದರ್ಶನವನ್ನು ನಡೆಸುತ್ತಾ ಇದ್ದೇವೆ. ನಲುವತ್ತು ದಿವಸಗಳ ಕಾಲ ಮಾತ್ರ ಈ ಊರಿನಲ್ಲಿ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸಂಸ್ಥೆಯ ಮ್ಯಾನೇಜರ್ ದೇವರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
