ಮೂಡುಬಿದಿರೆ: ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಚ್ಯುತಿಯಾದಾಗ ಅದರ ರಕ್ಷಣೆಗೆಂದೆ ಕಾನೂನು ಇರುತ್ತದೆ. ಕಾನೂನಿನ ಪಾಲನೆಯ ಜತೆಗೆ ಅದರ ಅರಿವು ಕೂಡ ನಮ್ಮಲ್ಲಿ ಇರಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ ಪಾಟೀಲ್ ಹೇಳಿದರು.

bidire

ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಅಂಗವಾಗಿ ಇಲ್ಲಿನ ಅರಣ್ಯ ಇಲಾಖೆ ಆವರಣದಲ್ಲಿ ಶುಕ್ರವಾರ ನಡೆದ ಜನಸಾಮಾನ್ಯರಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಪುರಾಣಗಳಲ್ಲಿ ಹೆಣ್ಣನ್ನು ದೇವರಿಗೆ ಸಮಾನವಾಗಿ ಕಾಣಲಾಗುತ್ತದೆ. ಆದರೆ ಈಗಲು ಹೆಣ್ಣಿನ ಬಗ್ಗೆ ಪೂಜ್ಯ ಭಾವನೆ ಇದ್ದರು ಅದು ಆಚರಣೆಗೆ ಬರುತ್ತಿಲ್ಲ. ಭ್ರೂಣ ಹತ್ಯೆಯಿಂದಾಗಿ ಹೆಣ್ಮಕ್ಕಳ ಸಂಖ್ಯೆ ಕಡಿಮೆಯಾಗಿ ಗಂಡು ಹೆಣ್ಣು ಸಂಖ್ಯೆಯಲ್ಲಿ ಅಸಮತೋಲನ ಸೃಷ್ಟಿಯಾಗಿದೆ ಎಂದರು. ಬಾಲಕಾರ್ಮಿಕ ಪದ್ದತಿ, ಬಾಲ್ಯವಿವಾಹ ಇವೆಲ್ಲ ಕಾನೂನಿಗೆ ವಿರುದ್ಧವಾಗಿದ್ದು ವಿದ್ಯಾರ್ಥಿಗಳಲ್ಲಿ ಇವುಗಳ ಬಗ್ಗೆ ಜಾಗೃತಿ ಮೂಡಬೇಕು ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಆರ್ ಸುಬ್ರಹ್ಮಣ್ಯ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ವಕೀಲ ಪ್ರವೀಣ್ ಲೋಬೊ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಭಾರತದಲ್ಲಿ ಒಟ್ಟು 69.8 ಮಿಲಿಯನ್ ಹೆಕ್ಟೇರ್ ಭೂಮಿ ಅರಣ್ಯ ಪ್ರದೇಶವಾಗಿದೆ. 1865ರಲ್ಲಿ ಮೊದಲ ಬಾರಿಗೆ ಅರಣ್ಯ ಕಾ ಜಾರಿಗೆ ಬಂದಿತ್ತು. 1978ರಲ್ಲಿ ಇದಕ್ಕೆ ತಿದ್ದುಪಡಿ ತಂದು ಅರಣ್ಯ ಕಾನೂನನ್ನು ಕಠಿಣಗೊಳಿಸಲಾಗಿತ್ತು. ಆದರೆ 2008ರಲ್ಲಿ ಅರಣ್ಯ ಬುಡಕಟ್ಟು ಜನಾಂಗ ಮತ್ತು ಇತರ ಪಾರಂಪರಿಕ ಜನರ ರಕ್ಷಣೆ ಕಾಯ್ದೆಯಿಂದಾಗಿ ಅರಣ್ಯವಾಸಿಗಳಿಗೆ ಭೂಹಕ್ಕನ್ನು ಪಡೆಯಲು ಸಾಧ್ಯವಾಯಿತು ಎಂದರು.

ವಲಯ ಅರಣ್ಯ ಅಧಿಕಾರಿ ಜಿ.ಡಿ ದಿನೇಶ್, ವಕೀಲ ಪದ್ಮಪ್ರಸಾದ್ ಜೈನ್ ಉಪಸ್ಥಿತರಿದ್ದರು. ಪ್ರಮೋದ್ ಕುಮಾರ್ ನಿರೂಪಿಸಿದರು. ಉಪ ವಲಯ ಅರಣ್ಯ ಅಧಿಕಾರಿ ಕೆ.ಸಿ ಮ್ಯಾಥ್ಯು ಸ್ವಾಗತಿಸಿದರು. ಪ್ರಕಾಶ್ ವಂದಿಸಿದರು.

By suddi9

Leave a Reply

Your email address will not be published. Required fields are marked *