ಮೂಡುಬಿದಿರೆ: ಬೆಳುವಾಯಿಯ ಖಂಡಿಗ ದರ್ಖಾಸಿನಲ್ಲಿರುವ ನನ್ನ ಮನೆಯಲ್ಲಿ ಕಳೆದ 8 ತಿಂಗಳ ಕಳೆದ ಎಂಟು ತಿಂಗಳಿನಿಂದ ಕರುವನ್ನು ಸಾಕುತ್ತಿದ್ದು, ಬಜರಂಗದಳದ ಕಾರ್ಯಕರ್ತರು ಹಾಗೂ ಮೂಡುಬಿದಿರೆ ಪೊಲೀಸರು ಸೆ.13ರಂದು ಮಧ್ಯರಾತ್ರಿ ಮನೆಗೆ ಅಕ್ರಮ ಪ್ರವೇಶ ಮಾಡಿ, ಕುಟುಂಬದವರಿಗೆ ಮಾನಸಿಕ ಹಿಂಸೆ ನೀಡಿದ್ದಾರೆ.
ಜೀವನೋಪಾಯಕ್ಕೆ ನಾನು ಮಾಡುತ್ತಿರುವ ಹೊಟೇಲ್ ಉದ್ಯಮವನ್ನು ನಿಲ್ಲಿಸುವ ಹುನ್ನಾರದಿಂದ ಗೋಮಾಂಸ ಮಾರುತ್ತಿದ್ದೇನೆ ಎನ್ನುವುದನ್ನು ಬಿಂಬಿಸಲು ಹೊರಟ್ಟಿದ್ದಾರೆ ಎಂದು ಬೆಳುವಾಯಿ ಹೊಟೇಲ್ ಮಾಲೀಕ ಅಬ್ದುಲ್ ಶಾಕೀರ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಮನೆಯಲ್ಲಿ ನಾನು, ತಾಯಿ, ಹೆಂಡತಿ ಹಾಗೂ ಮೂವರು ಸಣ್ಣಪುಟ್ಟ ಮಕ್ಕಳಿದ್ದಾರೆ. ಆದರೆ ಬಜರಂಗದಳದವರ ಜೊತೆ ಸೇರಿ, ಪೊಲೀಸರು ಧಿಡೀರ್ ದಾಳಿ ನಡೆಸಿರುವುದರಿಂದ ನನ್ನ ಕುಟುಂಬದವರಿಗೆ ಗಾಬರಿಯಾಗಿದೆ. ಇದರಿಂದಾಗಿ ನನ್ನ ತಾಯಿ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದಾರೆ. ಪೊಲೀಸರು ಕರುವನ್ನು ವಶಪಡಿಸಿಕೊಂಡಿದ್ದು, ಹಣಕೊಟ್ಟು ಖರೀದಿಸಿದ ಕರು ನನಗೆ ಸಿಗದಂತಾಗಿದೆ. ಪೊಲೀಸರ ದೌರ್ಜನ್ಯ, ಬಜರಂಗದಳದವರ ಹುನ್ನಾರ ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ನಾನು ದನದ ಮಾಂಸವನ್ನು ಮಾರುವುದು ಬಿಡಿ, ಅದನ್ನು ತಿನ್ನುವುದು ಇಲ್ಲ. ಈ ಹಿಂದೆಯು ಬಜರಂಗದಳದವರು ನನ್ನ ಹೊಟೇಲ್ಗೆ ನುಗ್ಗಿ ದಾಂದಲೆ ಮಾಡಿದ್ದಾರೆ. ಇದಕ್ಕಾಗಿ ನಾನು ಹೊಟೇಲ್ಗೆ ಸಿ.ಸಿ ಕ್ಯಾಮರ ಅಳವಡಿಸಿದ್ದೇನೆ. ಆದನ್ನಿ ಅರಿತು ಅವರು, ಮನಗೆ ಅಕ್ರಮ ಪ್ರವೇಶ ಮಾಡುವುದರ ಮೂಲಕ ನನಗೆ ಹಾಗೂ ನನ್ನ ಕುಟುಂಬದವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಕೀರ್, ಸುದ್ದಿಗಾರರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರಕರಣ ಸಂಬಂಧಪಟ್ಟಂತೆ ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ, ಪಡುಮಾರ್ನಾಡಿ ಗ್ರಾ.ಪಂ ಅಧ್ಯಕ್ಷ ಶ್ರೀನಾಥ್, ಸುಚೇತನ್ ಜೈನ್, ಜಗ್ಗ, ಪ್ರಸಾದ್, ಶಿವ ಇವರಿಂದ ನನಗೆ ಹಾಗೂ ಕುಟುಂಬದ ಪ್ರಾಣಕ್ಕೆ ಅಪಾಯವಾಗುವ ಸಂಭವವಿದೆ ಎಂದು ಆರೋಪಿಸಿದ್ದಾರೆ.

