ಗುಜರಾತ್: ಧರ್ಮಗಳು ಸಮಾಜ ಜೀವನದ ಅವಿಭಾಜ್ಯ ಅಂಗವಾಗಿದ್ದು ಸಂಸ್ಕಾರಯುತ ಬದುಕಿಗೆ ಧರ್ಮಗಳೇ ಪ್ರೇರಕವಾಗಿವೆ. ಧರ್ಮನಿಷ್ಠೆವಿಲ್ಲದ ಬದುಕು ಶೂನ್ಯವಾಗಿರುತ್ತದೆ. ಧರ್ಮಗಳೇ ಬದುಕಿನ ಕೈಗನ್ನಡಿ ಆಗಿದ್ದು ಕ್ರೈಸ್ತ ಧರ್ಮಗಳು ಉಜ್ವಲ ಸಂಪ್ರದಾಯಗಳನ್ನು ಹೊಂದಿವೆ ಎಂದು ಗುಜರಾತ್‍ನ ಅಸನ್ಸೊಲ್ ಪ್ರಾಂತ್ಯದ ಬಿಷಪ್ ರೈ| ರೆ| ಸಿಪ್ರಿಯನ್ ಮೊನಿಸ್ ನುಡಿದರು.

ನ.11 ರಂದು ಶುಕ್ರವಾರ ಪೂರ್ವಾಹನ ಗುಜರಾತ್ ರಾಜ್ಯದ ಬರೋಡಾ ಮಹಾನಗರದಲ್ಲಿನ ಅವರ್ ಲೇಡಿ ಆಫ್ ರೋಸರಿ ಕಾಥೆದ್ರಾಲ್‍ನಲ್ಲಿ ಅಪೋಸ್ತಲಿಕ್ ಆಡಳಿತಾಧಿಕಾರಿ, ಬರೋಡ ಧರ್ಮಪ್ರಾಂತ್ಯದ ನಿವೃತ್ತ ಆರ್ಚ್‍ಬಿಷಪ್ ರೈ| ರೆ| ಸ್ಟನಿಸ್ಲಾಸ್ ಫೆರ್ನಾಂಡಿಸ್ ಮುಂದಾಳುತ್ವದಲ್ಲಿ ಜರುಗಿಸಲ್ಪಟ್ಟ ಧಾರ್ಮಿಕ ದೀಕ್ಷೆ ಪ್ರದಾನ ಕಾರ್ಯಕ್ರಮದಲ್ಲಿ ಅಸನ್‍ಸ್ಸೊಲ್ ಪ್ರಾಂತ್ಯದ ಬಿಷಪ್ ರೈ| ರೆ| ಸಿಪ್ರಿಯನ್ ಮೊನಿಸ್ ಅವರು ಬಂಟ್ವಾಳ ಮೂಲದ ಫಾ| ಲೆಸ್ಲೀ ರಿತೇಶ್ ಕುಟಿನ್ಹೋ ಅವರಿಗೆ ಧರ್ಮಗುರು ದೀಕ್ಷೆ ಅನುಗ್ರಹಿಸಿ ಶುಭಾರೈಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಅಲ್ಲಿನ ಮಂಚಿ ಮೂಲತಃ ಲೂಕಾಸ್ ಕುಟಿನ್ಹೋ ಮತ್ತು ರುಫಿನ್ ಕುಟಿನ್ಹೋ ದಂಪತಿ ಸುಪುತ್ರ ಫಾ| ಲೆಸ್ಲೀ ಕುಟಿನ್ಹೋ ಜಮ್ಶೇದ್‍ಪುರ್ ಪ್ರೊವಿನ್ಸ್ ಮುಖೇನ ಧರ್ಮಗುರು ಸಂಸ್ಕಾರ ಸ್ವೀಕರಿಸಿದರು.

ಈ ಶುಭಾವಸರದಲ್ಲಿ ಜಮ್ಶೇದ್‍ಪುರ್ ಜೆಜ್ವಿತ್ ಸಮೂಹದ ಪ್ರೊವಿನ್ಸಿಯಲ್, ರೋಸರಿ ಕಾಥೆದ್ರಾಲ್‍ನ ಪ್ರಧಾನ ಧರ್ಮಗುರು ರೆ| ಫಾ| ವಿಲಿಯಂ ಕರ್ವಾಲೋ, ಸಹಾಯಕ ಗುರು ಫಾ| ಪಾವ್ಲ್ ಡಿ’ಸಿಲ್ವಾ, ರೆ| ಫಾ| ಪ್ರವೀಣ್ ವೇಗಸ್, ಫಾ| ಸಿರಿಲ್ ಫೆರ್ನಾಂಡಿಸ್, ರೆ| ಫಾ| ಕೆ.ಎನ್ ಜೋಸೆಫ್, ಶ್ರೀಮತಿ ಮೇರಿ ಡಿ’ಸೋಜಾ ಕುಲ್ಶೇಕರ್,ಲ್ಯಾನ್ಸಿ ಕುಟಿನ್ಹೋ, ಲೋಯ್ಡ್ ಕುಟಿನ್ಹೋ, ಟೋನಿ ಕ್ವಾಡ್ರಸ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನಂತರ ಸ್ಕೈಲಾರ್ಕ್ ಚರ್ಚ್ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ದೀಕ್ಷಾ ಸಂಭ್ರಮ ಮತ್ತು ಅಭಿನಂದನಾ ಸಮಾರಂಭದಲ್ಲಿ ಫಾ| ಲೆಸ್ಲೀ ರಿತೇಶ್ ಕುಟಿನ್ಹೋ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಕಾರ್ ಜೆರಾಲ್ ರೆ| ಫಾ| ಜೋಯಲ್ ಪಾಯ್ಸ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ರೆ| ಫಾ| ಜೆರೋಮ್ ಸಿಕ್ವೇರಾ ಪ್ರಾರ್ಥನೆಯನ್ನಾಡಿದರು. ಫಾ| ರಿತೇಶ್ ಕುಟಿನ್ಹೋ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿ ವಂದನಾರ್ಪಣೆಗೈದರು.
