ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ,ಸರಕಾರಿ ಪ್ರೌಢ ಶಾಲೆ ಕೊಯಿಲ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನ.8 ಮಂಗಳವಾರದಂದು ಬಂಟ್ವಾಳ ತಾಲೂಕು ಕೊಯಿಲ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿ,ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗೆ ಅತ್ಯುತ್ತಮ ಕ್ರೀಡಾಂಗಣ ಹಾಗೂ ವಿವಿಧ ಕಾಮಗಾರಿ ನಡೆದಿದ್ದು, ಅಭಿವೃದ್ಧಿಗೆ ಪ್ರತಿಯೊಂದು ಹಂತ ಹಂತದಲ್ಲಿಯೂ ಯೋಜನೆಗಳು ನಡೆಯುತ್ತಿದೆ. ರಾಜ್ಯದಲ್ಲಿ 224 ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಅತೀ ಹೆಚ್ಚು ಅನುದಾನ ಪಡೆದಿದೆ. ಬಂಟ್ವಾಳ ತಾಲೂಕಿನ ರಸ್ತೆ ಅಭಿವೃದ್ಧಿ ಕಾರ್ಯಗಳು ಸಹ ನಡೆಯುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಸಚಿವ ಬಿ.ರಮಾನಾಥ ರೈ ಇವರು ಕೆ.ಉಮಾಬಾಯಿ ಶಾಲಾ ಕ್ರೀಡಾಂಗಣವನ್ನು ಉದ್ಘಾಟಿಸಿದರು.
ಜಿ.ಪಂ ಸದಸ್ಯ ಪದ್ಮಶೇಖರ ಜೈನ್, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ತಾ.ಪಂ. ಸದಸ್ಯೆ ಮಂಜುಳಾ ಸದಾನಂದ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಿಯೂಷ್ ಎಲ್.ರೊಡ್ರಿಗಸ್,ಬಂಟ್ವಾಳ ತಾಲೂಕು ಅಕ್ರಮ-ಸಕ್ರಮ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕೊಯಿಲ ಸ.ಪ್ರೌ. ಶಾಲೆ ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಪದ್ಮರಾಜ ಬಲ್ಲಾಳ್, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ವಿಜಯ ಬ್ಯಾಂಕ್ ವ್ಯವಸ್ಥಾಪಕ ಬೇಬಿ ಕುಂದರ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಮೇಶ್ ನಾಯಕ್, ಸೀನಿಯರ್ ಅಡ್ಟೊಕೇಟ್ ಹಾಗೂ ಇಂಟರ್ ನ್ಯಾಷನಲ್ ಮಾಸ್ಟರ್ ಅತ್ಲೆಟ್ ಲ.ಪದ್ಮನಾಭ ಕುಮಾರ್, ಕೊಯಿಲ ಸ.ಪ್ರೌ. ಶಾಲೆಯ ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ದೇವಪ್ಪ ಕರ್ಕೇರ, ಕೊಯಿಲ ಸ.ಪ್ರೌ. ಶಾಲೆಯ ಮುಖ್ಯ ಶಿಕ್ಷಕ ಸುಧೀರ್ ಜಿ., ಕೊಯಿಲ ಸ.ಪ್ರೌ. ಶಾಲೆಯ ದೈಹಿಕ ಶಿಕ್ಷಕ ಜನಾರ್ದನ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಮತ್ತಿತ್ತರರು ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಗುರುನಾಥ ಬಾಗೇವಾಡಿ ಪ್ರಸ್ತಾವಿಸಿದರು.ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ ಸ್ವಾಗತಿಸಿದರು. ಕೊಯಿಲ ಸ.ಪ್ರೌ. ಶಾಲೆಯ ಸಹ ಶಿಕ್ಷಕ ನಾಗರಾಜ ವಂದಿಸಿದರು. ಕೊಯಿಲ ಸ.ಪ್ರೌ. ಶಾಲೆಯ ಸಹ ಶಿಕ್ಷಕ ರಮೇಶ ಮಯ್ಯ ಕಾರ್ಯಕ್ರಮ ನಿರೂಪಿಸಿದರು.

