ಮೂಡುಬಿದಿರೆ: ಬತ್ತಿಹೋದ ಕೃಷಿಭೂಮಿಗೆ ಮತ್ತೆ ಮರುಜೀವ ನೀಡುವ ಪ್ರಯತ್ನ. ತೋಡು-ಅಣೆಕಟ್ಟುವಿಗೆ ಗ್ರಾಮಸ್ಥರೇ ಕಾಯಕಲ್ಪ ನೀಡಿ, ಅಲ್ಪ ಸಮಯದಲ್ಲೇ ನೀರು ಇಂಗಿಸುವ ಕಾಯಕ. ಗ್ರಾಮಸ್ಥರೇ ಭಗಿರಥರಾಗಿ ಗ್ರಾಮದ ಕೃಷಿಕರಿಗೆ ನೀರಿನ ಕೊಡುಗೆ ನೀಡಿದ ಅಪರೂಪದ ಪ್ರಸಂಗವಿದು.
ಹಲವಾರು ದಶಕಗಳಿಂದ ಕೃಷಿ ಪ್ರದಾನವಾಗಿದ್ದ ಪಾಲಡ್ಕ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿಂದ ಕೃಷಿಕರು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪಾಲಡ್ಕ ಚರ್ಚಿನ ಧರ್ಮಗುರು ರೆ.ಫಾ ಐವನ್ ಮೈಕಲ್ ರೊಡ್ರಿಗಸ್ ಅವರು ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳನ್ನು ಒಗ್ಗೂಡಿಸಿ ಕೃಷಿಕರಿಗೆ ಮತ್ತೆ ಉತ್ಸಾಹ ತುಂಬಬೇಕು ಎನ್ನುವ ಚಿಂತನೆ ನಡೆಸಿದರು. ಎರುಗುಂಡಿ ಪ್ರದೇಶದ ಅರ್ಬಿಕಟ್ಟೆ ಅಣೆಕಟ್ಟು, ಪೂರಕವಾಗಿ ತೋಡುಗಳಿಗೆ ಶ್ರಮದಾನದ ಮೂಲಕ ಕಾಯಕಲ್ಪ ನೀಡಿ ನೀರು ಇಂಗಿಸುವ ಪ್ರಯತ್ನವನ್ನು ಗ್ರಾಮಸ್ಥರಾಗಿದ್ದು ಚಿಂತನೆ ಅನುಷ್ಠಾನಗೊಂಡಿದೆ.

arbikatte-1

arbikatte-2

arbikatte-3
ನೀರಿನ ದಾರಿಗೆ ಊರಿನ ಶ್ರಮ:
ಪಾಲಡ್ಕ ಗ್ರಾಮಸ್ಥರು, ಸ್ಥಳೀಯ ಪಂಚಾಯಿತಿಗಳ ಸದಸ್ಯರನ್ನು ಒಳಗೊಂಡಂತೆ ಪಾಲಡ್ಕ ಚರ್ಚಿನ ಧರ್ಮಗುರು ಮೈಕಲ್ ರೊಡ್ರಿಗಸ್ ಅವರ ನೇತೃತ್ವದಲ್ಲಿ ಅರ್ಬಿಕಟ್ಟೆ ಅಣೆಕಟ್ಟು, ತೋಡು ದುರಸ್ತಿ ಸಮಿತಿಯನ್ನು ರಚಿಸಲಾಯಿತು. ಕಾಮಗಾರಿಗೆ ಬೇಕಾದ ರೂಪುರೇಷೆ, ಪೂರ್ವಸಿದ್ಧತೆ ನಡೆಸಲಾಗಿದ್ದು, ಈ ಮೂರು ಸಭೆಗಳಿಗೆ ನೂರಕ್ಕೂ ಅಧಿಕ ಗ್ರಾಮಸ್ಥರು ಒಗ್ಗೂಡಿರುವುದು ವಿಶೇಷ. ಸೆಪ್ಟೆಂಬರ್ 28ರಂದು ಕಾಮಗಾರಿಗೆ ಚಾಲನೆ ನೀಡಿದ್ದು, ನೂರಕ್ಕೂ ಅಧಿಕ ಗ್ರಾಮಸ್ಥರು ಶ್ರಮದಾನದಲ್ಲಿ ಪಾಲ್ಗೊಂಡರು. ಸಾಮಾನ್ಯವಾಗಿ ಮೂರು ತಿಂಗಳು ನಡೆಯಬೇಕಾಗಿದ್ದ ಕಾಮಗಾರಿ ಗ್ರಾಮಸ್ಥರ ಸಹಕಾರದಿಂದ ಕೇವಲ 11 ದಿನಗಳಲ್ಲಿ ನಡೆದಿರುವುದು ಮತ್ತೊಂದು ವಿಶೇಷ.
ತೋಡುಗಳ ಹೂಳು ತೆಗೆದು, ಅರ್ಬಿಕಟ್ಟೆಗೆ ಅಡಕೆ ಮರ, ತಾರ್ಪಲ್ ಉಪಯೋಗಿಸಿ ತಾತ್ಕಲಿಕ ರೀತಿಯಲ್ಲಿ ಅಣೆಕಟ್ಟು ಕಟ್ಟಿ ನೀರನ್ನು ಇಂಗಿಸಲಾಗಿದೆ. ಊರವರ ಶ್ರಮಕ್ಕೆ ದಾನಿಗಳ ನೆರವು, ಐಸಿವೈಎಂನಂತಹ ಸಂಘಗಳು ಸಾಥ್ ನೀಡಿರುವುದರಿಂದ ಸರ್ಕಾರದ ಇಲಾಖೆಯ ಮಟ್ಟದಲ್ಲಿ ಟೆಂಡರ್‍ನಂತಹ ಹಲವಾರು ಪ್ರಕ್ರಿಯೆಗಳ ಜಂಜಾಟವಿಲ್ಲದೆ ನಿರಂತರವಾಗಿ ಕೆಲಸ ನಡೆದಿದೆ.
ಮುನ್ನೂರು ವರ್ಷಗಳ ಇತಿಹಾಸವಿರುವ ಎರುಗುಂಡಿ ಕಳೆದ ಅರ್ಬಿಕಟ್ಟೆ 12 ವರ್ಷಗಳಿಂದ ನಿರುಪಯುಕ್ತವಾಗಿದ್ದು, ಗ್ರಾಮಸ್ಥರ ಶ್ರಮದಿಂದ ಪಾಲಡ್ಕ, ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಮಾತ್ರವಲ್ಲದೆ ಗಡಿಪ್ರದೇಶದಲ್ಲಿರುವ ಕಲ್ಲಮುಂಡ್ಕೂರಿನ ಗ್ರಾಮದ ರೈತರಿಗೂ ಕೃಷಿಗೆ ನೀರು ಲಭಿಸಲಿದೆ. ಊರಿನ ಶ್ರಮಕ್ಕೆ ತಕ್ಕ ಪ್ರತಿಫಲ ಈಗಾಗಲೇ ಗಮನಕ್ಕೆ ಬರುತ್ತಿದ್ದು ಪಾಲಡ್ಕ ತಿರ್ತಂಗಡಿ ಪ್ರದೇಶ ರೈತರೊಬ್ಬರ ಮನೆಯಲ್ಲಿ ಬತ್ತಿಹೋದ ಬೋರ್‍ವೆಲ್ ಮರುಜೀವ ಪಡೆದಿದೆ. ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶದದಲ್ಲಿರುವ ಬಾವಿಗಳಲ್ಲಿ ಅಂತರ್ಜಲದ ಮಟ್ಟದ ಏರಿಕೆಯಾಗಿದೆ. ಅಣೆಕಟ್ಟುವಿನಿಂದ ರೈತರಿಗೆ ಪ್ರಮುಖವಾಗಿ ಉಪಯೋಗವಾದರೆ ಈ ಭಾಗದ ಜನರಿಗೆ ಬೇಸಿಗೆ ಕಾಲದಲ್ಲಿ ತೀವ್ರವಾಗಿ ಕಾಡುವ ನೀರಿನ ಸಮಸ್ಯೆಗೂ ಸ್ವಲ್ಪ ಮಟ್ಟಿನ ಪರಿಹಾರ ಸಿಕ್ಕಂತಾಗಿದೆ.
—
ಅನುದಾನ ಅಗತ್ಯ:
ಊರಿನ ರೈತರ ಏಳಿಗೆಗಾಗಿ ಗ್ರಾಮಸ್ಥರ ಪರಿಶ್ರಮದಿಂದ ಅಣೆಕಟ್ಟುವಿಗೆ ತಾತ್ಕಲಿಕವಾದ ಕಾಯಕಲ್ಪವಾಗಿದೆ. ಆದರೆ ಇದು ಬಹು ವರ್ಷ ಉಳಿಯಬೇಕಾದರೆ ಸರ್ಕಾರ ಅನುದಾನದ ಅವಶ್ಯಕತೆಯೂ ಇದೆ. ಸರ್ಕಾರ ಅಣೆಕಟ್ಟು ಕಾಮಗಾರಿಗೆ ಬೇಕಾದ ಅನುದಾನವನ್ನು ಒದಗಿಸಿದಲ್ಲಿ, ಪುತ್ತಿಗೆ,ಪಾಲಡ್ಕ ಗ್ರಾಮಗಳಿಗೆ ಶಾಶ್ವತ ಯೋಜನೆಯೊಂದು ಲಭಿಸಿದಂತಾಗುತ್ತದೆ. ಊರಿನವರ ಶ್ರಮಕ್ಕೂ ಸಾರ್ಥಕತೆ ದೊರೆಯುತ್ತದೆ.
—
ಧಾರ್ಮಿಕ ಸಾಮರಸ್ಯ:
ರೈತರಿಗೆ ನೀರು ಒದಗಿಸುವುದರ ಮೂಲಕ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿರುವ ಕೆಲಸ ಕೇವಲ ಅಭಿವೃದ್ಧಿ ಚಟುವಟಿಕೆಗಳಲ್ಲ. ಧಾರ್ಮಿಕ ಸಾಮರಸ್ಯಕ್ಕೂ ಪೂರಕವಾಗಿದೆ. ಕಳೆದ ವರ್ಷ ಶತಮಾನೋತ್ಸವವನ್ನು ಆಚರಿಸಿಕೊಂಡ ಪಾಲಡ್ಕದ ಸಂತ ಇಗ್ನೇಶಿಯಸ್ ಲೊಯಲಾ ಚರ್ಚ್‍ನ ಅಭಿವೃದ್ಧಿ ಚಟುವಟಿಕೆಗಳಲ್ಲಿ ಹಿಂದೂ ಹಾಗೂ ಕ್ರೈಸ್ತರು ಒಟ್ಟಿಗೆ ಶ್ರಮಿಸಿದ್ದು, ಅದೇ ರೀತಿಯಲ್ಲಿ ಅರ್ಬಿಕಟ್ಟೆ ಅಣೆಕಟ್ಟು ಕಾಮಗಾರಿಯಲ್ಲೂ ಸಾಂಘಿಕ ಪ್ರಯತ್ನ ಮುಂದುವರಿದೆ. ಎಲ್ಲ ಪಕ್ಷದ ಸ್ಥಳೀಯ ಮುಖಂಡರು, ವಿವಿಧ ಪಕ್ಷಗಳ ಬೆಂಬಲದಿಂದ ಚುನಾಯಿತರಾದ ಸ್ಥಳೀಯ ಪಂಚಾಯಿತಿಗಳ ಸದಸ್ಯರು ಕೂಡ ಗ್ರಾಮಸ್ಥರೊಂದಿಗೆ ಕೈಜೋಡಿಸಿದ್ದಾರೆ. ಧಾರ್ಮಿಕ ಯುವ ಸಂಘಟನೆಗಳು ಕೂಡ ಶ್ರಮದಾನದಲ್ಲಿ ಪಾಲ್ಗೊಂಡಿವೆ.
—
ನನಗೆ ಬಂದು ಯೋಚನೆಯನ್ನು ಗ್ರಾಮಸ್ಥರ ಮುಂದಿಟ್ಟಾಗ ಅದು ಯೋಜನೆಯಾಗಿ ಪರಿವರ್ತನೆಗೊಂಡಿತು. ಗ್ರಾಮಸ್ಥರ ಪರಿಶ್ರಮ,ದಾನಿಗಳ ನೆರವಿನಿಂದ ಅಣೆಕಟ್ಟು, ತೋಡುಗಳಿಗೆ ಪುನಶ್ಚೇತ ನೀಡುವ ಕಾಮಗಾರಿ ನಡೆದಿದೆ. ಗ್ರಾಮಸ್ಥರು ಪರಿಶ್ರಮವು ಯಶಸ್ವಿಯಾಗಿದ್ದು, ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಸುಚರಿತ ಶೆಟ್ಟಿಯವರು ಕೂಡ ಬೆಂಗಾವಲಾಗಿ ಇದ್ದಾರೆ. ಸರ್ಕಾರ ಇದಕ್ಕೆ ಅನುದಾನ ಒದಗಿಸಿದರೆ ಶಾಶ್ವತ ಯೋಜನೆಯಾಗಲಿದೆ.
– ರೆ.ಫಾ ಐವನ್ ಮೈಕಲ್ ರೊಡ್ರಿಗಸ್
ಅಣೆಕಟ್ಟು ತೋಡು ದುರಸ್ತಿ ಕಾಮಗಾರಿಯ ರೂವಾರಿ
ಪಾಲಡ್ಕ ಚರ್ಚ್‍ನ ಧರ್ಮಗುರು
—
ಗ್ರಾಮಸ್ಥರ ಶ್ರಮ ಮಾದರಿ ಕೆಲಸ. ಅಣೆಕಟ್ಟು ಅಭಿವೃದ್ಧಿ ಕುರಿತು ಜಿಲ್ಲಾ ಪಂಚಾಯಿತಿಯಲ್ಲೂ ಪ್ರಸ್ತಾಪಿಸಿದ್ದೇನೆ. ಸ್ಥಳೀಯ ಶಾಸಕರು ಕೂಡ ಸ್ಥಳ ಪರಿಶೀಲನೆ ಮಾಡಿ, ಅಣೆಕಟ್ಟು ಯೋಜನೆಗೆ ಸರ್ಕಾರದಿಂದ ಅನುದಾನ ಒದಗಿಸುವಲ್ಲಿ ಶ್ರಮಿಸುವುದಾಗಿ ತಿಳಿಸಿದ್ದಾರೆ.
– ಕೆ.ಪಿ ಸುಚರಿತ ಶೆಟ್ಟಿ
ಸದಸ್ಯ, ದ.ಕ ಜಿ.ಪಂ
—

By Suddi9

Leave a Reply

Your email address will not be published. Required fields are marked *