ಮೂಡುಬಿದಿರೆ: ಮೂರು ದಶಕಗಳಿಂದ ಅಭಿವೃದ್ಧಿ ಕಾಣದೆ, ಗ್ರಾಮಸ್ಥರು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿರುವ ಅಶ್ವತ್ಥಪುರ-ಬಂಗೇರಪದವು ಸಂಪರ್ಕ ರಸ್ತೆ ನಾದುರಸ್ತಿಯ ಕುರಿತು ಗ್ರಾಮಸ್ಥರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಪ್ರಧಾನ ಮಂತ್ರಿ ಕಚೇರಿಯಿಂದ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ರಸ್ತೆ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ಬಂದಿದೆ.
ಸ್ಥಳೀಯ ಪ್ರತಿನಿಧಿಗಳಿಂದ ಕಡೆಗಣನೆ:
ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ರಸ್ತೆಯನ್ನು 1981ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ ಮುಖಾಂತರ ನಿರ್ಮಿಸಲಾಗಿತ್ತು. ಬಳಿಕ ಅಭಿವರದ್ಧಿಯ ಭಾಗ್ಯ ಕಂಡದ್ದು ತೀರ ವಿರಳ. ಅಶ್ವತ್ಥಪುರ-ಕೊಂಡೆಬೆಟ್ಟು-ಪಿದಮಲೆ-ಮಂಜನಬೈಲು-ಬಂಗೇರ ಪದವು ಪ್ರದೇಶಗಳನ್ನು ಸಂಪರ್ಕಿಸುವ 5.5 ಕಿ.ಮೀ ರಸ್ತೆ ನಾದುರಸ್ತಿಯನ್ನು ವಾಹನ ಸವಾರರು, ಕೃಷಿಕರು ಒಟ್ಟಿನಲ್ಲಿ ಗ್ರಾಮಸ್ಥರು ನಾಲು ದಶಕಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದರು. 100ಕ್ಕೂ ಅಧಿಕ ಕೃಷಿ ಕುಟುಂಬಗಳು ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೂರು ದಿನಗಳ ಸಾಧನೆಯ ಮುಖವಾಣಿ, ಎರಡು ವರ್ಷಗಳ ಹಿಂದೆ ಪ್ರಕಟವಾದ `ನೂರು ಹೆಜ್ಜೆ’ ಪುಸ್ತಕದಲ್ಲಿ ಉಲ್ಲೇಖಗೊಂಡಿದ್ದು, ಪ್ರದಾನಮಂತ್ರಿ ಗ್ರಾಮ ಸಡಕ್ ಯೋಜನೆ ಪ್ರಸ್ತಾವನೆಯ ಕುರಿತು ಮಾಹಿತಿಯಿತ್ತು.ಆದರೆ ಯಾವುದೇ ಅನುದಾನ ಬಿಡುಗಡೆಯಾಗದೆ, ರಸ್ತೆ ದುರಸ್ತಿಯಿಂದ ವಿಮುಖವಾಯಿತು. ಸ್ಥಳೀಯ ಶಾಸಕ ಕೆ.ಅಭಯಚಂದ್ರ ಜೈನ್ ಹಾಗೂ ಪಂಚಾಯಿತಿಯವರಿಗೆ ಮನವಿ ಮಾಡಿದರೂ ಯಾವುದೇ ಪೂರಕ ಸ್ಪಂದನೆ ಸಿಗಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಆಶ್ವಾಸನೆಯಿಂದ ರೋಸಿ ಹೋಗಿರುವ ಗ್ರಾಮಸ್ಥರು ಪ್ರದಾನ ಮಂತ್ರಿಗೆ ಪತ್ರ ಬರೆಯಲು ಮುಂದಾಗಿದ್ದರು.

ಪ್ರದಾನಿ ಕಚೇರಿಯಿಂದ ಸ್ಪಂದನೆ:
ರಸ್ತೆ ದುರಸ್ತಿ ಹೋರಾಟದ ಪ್ರಮುಖರಾದ ಬಿ.ಎಲ್ ದಿನೇಶ್ ಕುಮಾರ್ ಅವರು ಅಕ್ಟೋಬರ್ 10ರಂದು ಪ್ರದಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ರಸ್ತೆಯ ಅವ್ಯವಸ್ಥೆ, ಕೃಷಿಕರು, ಗ್ರಾಮಸ್ಥರು ಪಡುತ್ತಿರುವ ಪಾಡು, ಸ್ಥಳೀಯ ಜನಪ್ರತಿನಿಧಿಗಳ ಅಸಹಕಾರ, ಅಶ್ವಾಸನೆ ಒಳಗೊಂಡತೆ ಪತ್ರ ಬರೆದಿದ್ದರು. ಪ್ರದಾನ ಮಂತ್ರಿ ಸಡಕ್ ಯೋಜನೆ ಮುಖಾಂತರ ಡಾಂಬರು ರಸ್ತೆ ನಿರ್ಮಿಸುವಂತೆ ಮನವಿ ಮಾಡಿದ್ದರು. ರಸ್ತೆ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರದಾನ ಮಂತ್ರಿ ಕಚೇರಿಯಿಂದ ಅ.24ರಂದು ಕರ್ನಾಟಕ ಸರ್ಕಾರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರದ ರವಾನೆ ಮಾಡಲಾಗಿದೆ.
ಅಶ್ವತ್ಥಪುರ-ಬಂಗೇರಪದವು ಸಂಪರ್ಕ ರಸ್ತೆ ನಾದುರಸ್ತಿಯಿಂದಾಗುತ್ತಿರುವ ತೊಂದರೆ ಕುರಿತು ಸ್ಥಳೀಯ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಸದರು, ಶಾಸಕರು ಕೇವಲ ಆಶ್ವಾಸನೆಯನ್ನು ನೀಡಿದ್ದಾರೆ ಹೊರತು ಅನುದಾನ ಬಿಡುಗಡೆಗೊಳಿಸಿಲ್ಲ. ಈ ಕಾರಣಕ್ಕಾಗಿ ನೇರವಾಗಿ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯಲು ನಿರ್ಧರಿಸಿದ್ದೇವೆ. ಪ್ರದಾನ ಮಂತ್ರಿ ಕಚೇರಿಯಿಂದ ಸಕಾರತ್ಮಕ ಸ್ಪಂದನೆ ಬಂದಿದ್ದು, ರಸ್ತೆ ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ.
– ಬಿ.ಎಲ್ ದಿನೇಶ್ ಕುಮಾರ್
ಗ್ರಾಮಸ್ಥ

