ಕೈಕಂಬ: ಪ್ರತಿಯೊಬ್ಬ ಪ್ರಜೆಯಲ್ಲೂ ರಾಷ್ಟ್ರೀಯತೆಯನ್ನು ಗೌರವಿಸುವ ಸಂಸ್ಕಾರ ಇರಬೇಕು. ಹಾಗೂ ಸಾಮಾಜಿಕ ಕಳಕಳಿಯ ಸೇವಾ ಮನೋಭಾವದ ಮೌಲ್ಯಗಳನ್ನು ಪ್ರತಿಯೊಬ್ಬರು ರೂಡಿಸಿಕೊಂಡಾಗ ಸಾಮಾಜಿಕವಾಗಿ ಸಕರಾತ್ಮಕ ಪರಿವರ್ತನೆ ಸಾಧ್ಯ ಹಾಗೂ ಈ ಮೂಲಕ ಇತರರಿಗೆ ನಾವು ಪ್ರೇರಣೆಯಾಗಬಹುದು ಎಂದು ಕರ್ನಾಟಕ ಅಖಿಲ ಭಾರತೀಯ ವಿದ್ಯಾರ್ಥಿಪರಿಷತ್ ಉಪಾರ್ಧಯಕ್ಷ ಕೇಶವ ಬಂಗೇರ ಹೇಳಿದರು ಅವರು ಗುರುಪುರ “ಸೇವಾ ಬ್ರಿಗೇಡ್” ಇದರ ವತಿಯಿಂದ ಭಾನುವಾರ ಗುರುಪುರದಲ್ಲಿ ಅಂಬ್ಯುಲೆನ್ಸ್ ಸಮರ್ಪಿಸುವ ಸರಳ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಈ ಸಂದರ್ಭ ಬಜಪೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಟಿ. ಡಿ ನಾಗರಜ್ ಅವರು ಮಾತನಾಡಿ ಬಹಳಷ್ಟು ಸಾರ್ವಜನಿಕರು ನಿಯಮ ಪಾಲನೆಯ ಬಗ್ಗೆ ನಿರ್ಲಕ್ಷ ವಹಿಸುತ್ತಾರೆ. ಹೆಲ್ಮೆಟ್ ಬಳಕೆಯ ವಿಷಯದಲ್ಲೂ ಇದೇ ರೀತಿ ನಿರ್ಲಕ್ಷವಹಿಸುತ್ತಿದ್ದು ಸಾಕಷ್ಟು ಅನಾಹುತಗಳಿಗೆ ಕಾರಣವಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೆ ಸಾಮಾಜಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸೇವಾ ಸಂಸ್ಥೆಗಳು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಚಟುವಟಿಕೆಗಳು ನಿರಂತರ ನಡೆಯಬೇಕು ಎಂದು ಹೇಳಿದರು.
ಜಗತ್ತಿನಿಂದ ನಾವು ಬೇಕಾದುದನ್ನೆಲ್ಲ ಪಡೆದು ನಮ್ಮ ಸಮಾಜದ ಜನರಿಗೆ ಅಳಿಲ ಸೇವೆ ನೀಡಬೇಕೆಂಬ ಉದ್ದೇಶದಿಂದ ಗುರುಪುರದ ಯುವಕರು ಒಂದು ವರ್ಷದ ಮೊದಲು ಹುಟ್ಟು ಹಾಕಿದ ” ಸೇವಾ ಬ್ರಿಗೇಡ್” ಎಂಬ ಸಂಘಟನೆಯಿಂದ ಊರಿನ ಹಾಗೂ ಪರವೂರಿನ ಧಾನಿಗಳಿಂದ ಪ್ರಾಣಾಂತಿಕ ಸ್ಥಿತಿಯಲ್ಲಿರುವ, ಹಾಗೂ ಕಡುಬಡವರನ್ನು, ರೋಗಿಗಳನ್ನು ಆಸ್ಪತ್ರೆಗೊಯ್ಯಲು ಅಂಬ್ಯುಲೆನ್ಸ್ ವಾಹನವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸೇವಾಬ್ರಿಗೇಡ್ ನ ರಮಾನಂದ ಶೆಟ್ಟಿ ಮಠದಬಳಿ , ಪುರಂದರಮಲ್ಲಿ ಮರಂಕರಿಯ, ರತ್ನಾಕರ ಮಠದ ಬಳಿ ಉಪಸ್ಥಿತರಿದ್ದರು. ನಾಗೇಶ್ ಕೊಟ್ಟಾರಿ ಸ್ವಾಗತಿಸಿ ಶ್ಯಾಮ್ ಜಲ್ಲಿಗುಡ್ಡೆ ವಂದಿಸಿದರು. ಜಯಪ್ರಕಾಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.





