ಬಂಟ್ವಾಳ: ಚೆಲ್ಲಂಗಾರು ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಸ್ಪೋಟಕವಿಟ್ಟು ದನವೊಂದರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯೊಬ್ಬರನ್ನು ರಿಕ್ಷಾ ಸಹಿತ ವಿಟ್ಲ ಪೊಲೀಸರು ಇರ್ದೆಯಲ್ಲಿ ಬಂಧಿಸಿದ್ದಾರೆ.
ದೂಮಡ್ಕ ಚೂರಿಮೂಲೆ ನಿವಾಸಿ ರಿಕ್ಷಾ ಚಾಲಕ ವಿಜಯ ಜಾನ್ (30) ಬಂಧಿತ ಆರೋಪಿಯಾಗಿದ್ದಾರೆ. ಪುತ್ತೂರು ತಾಲೂಕಿನ ಇರ್ದೆಯಲ್ಲಿ ತಯಾರಿಸಿದ ಸ್ಫೋಟಕವನ್ನು ರಿಕ್ಷಾದಲ್ಲಿ ಸಾಗಾಟ ನಡೆಸಲು ಸಹಕರಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಸ್ಪೋಟಕ ಸಾಗಾಟಕ್ಕೆ ಬಳಸಿದೆ ಎಂದು ಹೇಳಲಾದ ರಿಕ್ಷಾವನ್ನೂ ವಶಕ್ಕೆ ಪಡೆಯಲಾಗಿದೆ.
ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕ ಅವರನ್ನು ಬಂಧಿಸಿ ವಿಚಾರಿಸಿದ ಸಂಬಧಿಯಾಗಿರುವ ಸಮಯ ಇರ್ದೆ ದೂಮಡ್ಕ ಪೆಲತ್ತಾಜೆ ನಿವಾಸಿ ಶೀನಪ್ಪ ನಾಯ್ಕ ಸ್ಪೋಟಕ ತಯಾರಿಸಿ ಗುಡ್ಡದಲ್ಲಿ ಇರಿಸುತ್ತಿದ್ದ ಪ್ರಮುಖ ಆರೋಪಿಯೆಂದೂ, ಹಾಸನ ಹಾಲೂರು ನಿವಾಸಿ ವಿನೋದ್ ಶೆಟ್ಟಿ ಸಹಕರಿಸಿ, ವಿಜಯ ಜಾನ್ ತನ್ನ ರಿಕ್ಷಾದಲ್ಲಿ ಇವರನ್ನು ಕರೆದು ತರುತ್ತಿದ್ದರೆಂಬ ಮಾಹಿತಿಯನ್ನು ನೀಡಿದ್ದಾರೆನ್ನಲಾಗಿದೆ.
ವಿಚಾರಣೆಯ ಮಾಹಿತಿಗಳ ಆಧಾರದಲ್ಲಿ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಸಹಾಯಕ ಉಪನಿರೀಕ್ಷಕ ಆನಂದ ಪೂಜಾರಿ, ಪ್ರವೀಣ್ ರೈ, ರಮೇಶ್, ಜಯಕುಮಾರ್, ರಕ್ಷಿತ್ ರೈ, ಬಾಲಕೃಷ್ಣ ಗೌಡ ಕಾರ್ಯಾಚರಣೆ ನಡೆಸಿದ್ದಾರೆ. ಶೀನಪ್ಪ ನಾಯ್ಕ ಹಾಗೂ ವಿನೋದ್ ಶೆಟ್ಟಿ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

