ಶಾಲೆಗಳನ್ನು ಗುರುಕುಲ, ವಿದ್ಯಾಮಂದಿರ, ವಿದ್ಯಾದೇಗುಲ ಎನ್ನುವ ನಾವು ಮಕ್ಕಳನ್ನು ದೇವರೆಂದು ಕರೆಯುವವರು. ವಿದ್ಯೆಯ ದೇವತೆ ಶಾರದೆ. ಈ ಹಿನ್ನೆಲೆಯಲ್ಲಿಯಾದರೂ ಶಾಲೆಗಳಲ್ಲಿ ಆಗಾಗ್ಗೆ ಶೈಕ್ಷಣಿಕ ಉತ್ಸವ, ಹಬ್ಬಗಳು ಎಲ್ಲಾ ಜಾತಿ ಮತ ಧರ್ಮದವರು ಸೇರಿಕೊಂಡು ನಡೆಸಬೇಕಾದುದು ಅಗತ್ಯವೇ. ದೇವಾಲಯಗಳು, ಧರ್ಮದ ಪುನರುತ್ಹಾನ ಎಂಬ ನೆಪದಲ್ಲಿ ಆಗಾಗ್ಗೆ ನಡೆಯುವ ಅಭಿವೃದ್ಧಿ ಕಾರ್ಯಗಳಷ್ಟೇ ಶಾಲೆಗಳು, ಶಿಕ್ಷಣದ ಪುನರುತ್ಹಾನವು ನಡೆಯಬೇಕಾಗಿರುವುದು ಇಂದಿನ ಅನಿವಾರ್ಯ. ನವರಾತ್ರಿ ಉತ್ಸವದ ಈ ದಿನಗಳಲ್ಲಿ ನಮ್ಮೂರಿನ ಪವಿತ್ರ ದೇಗುಲವಾದ ಶಾಲೆಗಳ ಸಮಗ್ರ ಅಭಿವೃದ್ಧಿಯ ಆ ಮೂಲಕ ನಮ್ಮೂರಿನ ಶ್ರೇಯೋಭಿವೃದ್ಧಿಯ ಸಂಕಲ್ಪ ಮಾಡಲು ಇದೇ ಸಕಾಲವಲ್ಲವೇ?.
ಯಾವ ಊರಿನಲ್ಲಿ ದೇವಸ್ಥಾನಗಳ ಗಂಟೆ ಹೆಚ್ಚು ಮೊಳಗುತ್ತದೊ ಆ ಊರಿನಲ್ಲಿ ಅಜ್ಞಾನ ಮತ್ತು ಬಡತನವಿದೆ, ಯಾವ ಊರಿನಲ್ಲಿ ಶಾಲೆಗಳ ಗಂಟೆ ಹೆಚ್ಚು ಮೊಳಗುತ್ತದೊ ಅಲ್ಲಿ ಜ್ಞಾನ ಮತ್ತು ಶ್ರೀಮಂತಿಕೆ ಇದೆ…ಈ ಮಾತು ಮತ್ತೆ ಮತ್ತೆ ನಮ್ಮನ್ನು ಎಚ್ಚರಿಸಬೇಕಾದದ್ದು, ಜಾಗೃತ ಸ್ಥಿತಿಗೆ ಕೊಂಡೊಯ್ಯಬೇಕಾದದ್ದು. ಅಂದಿಗೂ, ಇಂದಿಗೂ, ಎಂದೆಂದಿಗೂ ಸತ್ಯವಾದ ಈ ಮಾತು ನಿಜಾರ್ಥದಲ್ಲಿ ಅನುಷ್ಟಾನವಾಗುತ್ತಿದ್ದರೆ ನಮ್ಮೂರಿನ ಎಲ್ಲಾ ಸರಕಾರಿ ಶಾಲೆಗಳು ಉಳಿಯುತ್ತಿತ್ತು, ಬೆಳೆಯುತ್ತಿತ್ತು. ಆದರೆ ಆಗಾಗಲಿಲ್ಲ, ಊರಿನ ವಿದ್ಯಾಲಯಗಳ ಪ್ರಗತಿಗಿಂತ, ಅಲ್ಲಿನ ಮಕ್ಕಳ ಕಲ್ಯಾಣಕ್ಕಿಂತ ನಮಗೆ ನಮ್ಮೂರಿನ ದೇವಾಲಯಗಳ ಅಭಿವೃದ್ಧಿ, ಅಲ್ಲಿನ ದೇವರಿಗೆ ಕೊಡಬೇಕಾದದ್ದೇ ಹೆಚ್ಚಾಯಿತು…ಇದರ ಫಲ ಬಹುತೇಕ ಶಾಲೆಗಳಲ್ಲಿ ಈಗ ಗಂಟೆಗಳೇ ಮೊಳಗುತ್ತಿಲ್ಲ, ಆದರೆ ಹಳ್ಳಿ ಬೀದಿ ಪಟ್ಟಣದೆಲ್ಲೆಡೆ ಆರಾಧನಾಲಯಗಳ ಗಂಟೆಗಳ ಶಬ್ಧ ಮಿತಿ ಮೀರಿದೆನ್ನುವಂತಿದೆ.
ಊರಿನ ದೇವಾಲಯ ಹೇಗೆ ಪವಿತ್ರವೋ ಶ್ರೇಷ್ಠವೋ ವಿದ್ಯಾಲಯಗಳೂ ಅಷ್ಟೇ ಪವಿತ್ರವಾದುದು-ಶ್ರೇಷ್ಠವಾದುದು. ದೇವಸ್ಥಾನದಲ್ಲಿ ನಡೆಯುವ ಪೂಜೆ ಉತ್ಸವಾದಿಗಳಿಗೆ ಹಾಜರಾಗದಿದ್ದರೂ ಅಲ್ಲಿರುವ ದೇವರು ದೇವಿ ದೈವ ಕ್ಷಮಿಸಿಯಾರು-ಆದರೆ ಶಾಲೆಯಲ್ಲಿ ನಡೆಯುವ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತ ಸಭೆಗಳಿಗೆ ಪೋಷಕರು ಗೈರು ಹಾಜರಾದರೆ ಶಾಲೆಯಲ್ಲಿರುವ ನೂರಾರು ದೇವರು( ಮಕ್ಕಳು) ಖಂಡಿತ ಕ್ಷಮಿಸುವುದಿಲ್ಲ..ನಿಜಕ್ಕೂ ಊರಿನಲ್ಲಿ ಶಾಲೆಗಳು ಹೆಚ್ಚು ನಿರ್ಮಾಣವಾಗಬೇಕೋ, ಆರಾಧನಾಲಯಗಳು ಹೆಚ್ಚು ನಿರ್ಮಾಣವಾಗಬೇಕೋ ಎಂದು ಯಾರಾದರೂ ಕೇಳಿದರೆ ಶಾಲೆಗಳೇ ಹೆಚ್ಚು ನಿರ್ಮಾಣವಾಗಬೇಕು ಎನ್ನುವ ಉತ್ತರ ಕೊಡುವಷ್ಟು ಬುದ್ಧಿವಂತಿಕೆ ಮನುಷ್ಯರಾದ ನಮ್ಮಲ್ಲಿ ಯಾಕೆ ಇನ್ನೂ ಬೆಳೆದಿಲ್ಲವೋ ಅರ್ಥವಾಗುತ್ತಿಲ್ಲ.
ಹಾಗೆಂದು ದೇವಸ್ಥಾನಗಳು ನಿರ್ಮಾಣವಾಗಬಾರದೆಂದು ಅರ್ಥವಲ್ಲ. ಅದೂ ಬೇಕು, ಯಾಕಾಗಿ? ಮನುಷ್ಯನ ಶಾಂತಿ ನೆಮ್ಮದಿಗಾಗಿ, ಒಂದಷ್ಟು ಹೊತ್ತು ಆರಾಮವಾಗಿ ಕುಳಿತು ಮೌನ ಧ್ಯಾನ ಭಜನೆಯ ಮೂಲಕ ಮಾನಸಿಕ ದೈಹಿಕ ಒತ್ತಡವನ್ನು ದೂರಮಾಡುವುದಕ್ಕಾಗಿ, ಎಲ್ಲಾ ಜನರು ಪರಸ್ಪರ ಒಂದಾಗಿ ಬೆರೆತು ಬೆಸೆದು ಪ್ರೀತಿಯ ಸೌರ್ಹಾದತೆಯ ಸಾಮರಸ್ಯದ ಸ್ವಸ್ಥ ಬದುಕನ್ನು ಕಟ್ಟುವ ಸಂಸ್ಕಾರ ಸಂಸ್ಕøತಿಯನ್ನು ನೀಡುವುದಕ್ಕಾಗಿ. ಆದರೆ ಈಗ ನಮ್ಮ ಪರಿಸರದಲ್ಲಿರುವ ಎಲ್ಲಾ ಆರಾಧನಾಲಯಗಳು ಶಾಂತಿ, ನೆಮ್ಮದಿ, ಸಹಭಾಳ್ವೆಯ ತಾಣಗಳಾಗಿದೆಯೇ? ದೇವಸ್ಥಾನಗಳು ಹೆಚ್ಚಿರುವ ಊರುಗಳು ಸುಭೀಕ್ಷವಾಗಿ ಕ್ಷೇಮವಾಗಿ ಇದೆಯೇ? ಎಂಬುದು ನಮ್ಮ ಮುಂದಿರುವ ಪ್ರಶ್ನೆ.
ಹಿಂದೆ ಇದ್ದ ಧಾರ್ಮಿಕ ಕೇಂದ್ರಗಳು ಪುನರ್‍ಜೀವನಗೊಳ್ಳುವುದು, ಈಗಾಗಲೇ ಇರುವ ಹಳೆಯ ದೇವಸ್ಥಾನಗಳು ಸ್ವಚ್ಚವಾಗಿರುವುದು, ಸುಂದರವಾಗಿರುವುದು, ನಿಜಾರ್ಥದಲ್ಲಿ ಭಕ್ತರ ದೇವಸ್ಥಾನಗಳಾಗುವುದು, ಮಾನವತೆಯ ಸಾಕಾರದೊಂದಿಗೆ ಊರಿನ ಸಾಮರಸ್ಯದ ಕೊಂಡಿಯಾಗುವುದು ಅಗತ್ಯ. ಆದರೆ ಮತ್ತೆ ಮತ್ತೆ ಊರು, ಬೀದಿ, ಹಳ್ಳಿ ಗಲ್ಲಿಗಳಲ್ಲಿ ಹೊಸ ಹೊಸ ಮಠ ಮಂದಿರ ಮಸೀದಿ ಬಸದಿ ಗುಡಿ ಗರಡಿ ನಿರ್ಮಾಣಗೊಳ್ಳುವುದು ಅಭಿವೃದ್ಧಿಯ ಸಂಕೇತವೆಂದರೆ ದುರಂತವಲ್ಲದೆ ಮತ್ತೇನು? ನಿಜಕ್ಕೂ ಊರಲ್ಲಿ ಇವೆಲ್ಲವೂ ಹೆಚ್ಚು ಹೆಚ್ಚು ನಿರ್ಮಾಣಗೊಂಡಷ್ಟು ಹೆಚ್ಚೆಚ್ಚು ಉತ್ಸವಗಳು ಸೇರ್ಪಡೆಗೊಂಡಷ್ಟು ಗ್ರಾಮದಲ್ಲಿ ಮತ್ತಷ್ಟು ಬಡತನಕ್ಕೆ ಹಾದಿಯಾಗುತ್ತಿದೆಯೇ ವಿನಃ ಬಡವರ ಉದ್ಧಾರವಾಗುವುದಿಲ್ಲ ಎನ್ನುವುದು ಸತ್ಯ. ಕೆಲವೆಡೆ ಕೆಲವರ ಅಜ್ಞಾನವು ಎಲ್ಲೆ ಮೀರಿ ಅಶಾಂತಿಗೂ ಕಾರಣವಾಗುತ್ತಿರುವುದು ಶೋಚನೀಯ. ಅಗಾಗ್ಗೆ ಕಾಡುತ್ತಿರುವ ಅನಾರೋಗ್ಯ, ನಿರುದ್ಯೋಗ ಸಮಸ್ಯೆಯ ಜತೆಜತೆಗೆ ದೇವರ ಮೇಲಿನ ಅತಿಯಾದ ನಂಬಿಕೆ ಹರಕೆಗಳು ಗ್ರಾಮೀಣ ಜನತೆಯನ್ನು ಮತ್ತಷ್ಟು ಅಜ್ಞಾನಕ್ಕೆ ಬಡತನಕ್ಕೆ ತಳ್ಳುವುದಾದರೆ ಅದರ ಬದಲಾಗಿ ವಿದ್ಯಾಲಯಗಳು ಅಭಿವೃದ್ಧಿಗೊಂಡು ಊರಿನ ಎಲ್ಲಾ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉದ್ಯೋಗಸ್ಥರಾಗಿ ನೆಮ್ಮದಿಯ ಜೀವನ ನಡೆಸುವುದು ಒಳಿತಲ್ಲವೇ?.
ಇಲ್ಲಿ ಮತ್ತೂ ಒಂದು ಗಮನಿಸಬೇಕಾದದ್ದು-ಇತಿಹಾಸ ಕಾಲದಿಂದ ಆರಂಭಗೊಂಡು ಇದುವರೆಗೂ ಅತೀ ಹೆಚ್ಚು ಕಳ್ಳತನ, ದರೋಡೆಗಳೆಲ್ಲವೂ ನಡೆದದ್ದು ಆರಾಧನಾಲಯಗಳಲ್ಲಿಯೇ ಹೊರತು ವಿದ್ಯಾಲಯಗಳಲ್ಲಿ ಅಲ್ಲ. ನಂಬಿ ಬರುವ ಭಕ್ತ ಜನತೆಗೆ ಶಾಂತಿ ನೆಮ್ಮದಿ ಕೊಡಬೇಕಾದ ತಾಣಗಳು ಸಂಪತ್ತು ಸಂಗ್ರಹಿಸುವ ಬಂಗಲೆಯಾದರೆ, ನಿರಾಕಾರ ನಿರಾಡಂಬರ ಸ್ವರೂಪಿ ಭಗವಂತ ಚಿನ್ನದ ಗಣಿಯಾದರೆ ಮತ್ತೆನಾದೀತು? ಭಕ್ತರು ಭಕ್ತಿಯಿಂದ ಸಮರ್ಪಿಸಿದ ಧನ ಧಾನ್ಯ, ಬೆಳ್ಳಿ ಬಂಗಾರ ಕಳ್ಳಕಾಕರ ಕೈಸೇರಿ ಬೀರು ಬಾರುಗಳ ಪಾಲಾಗುವುದು ಧರ್ಮೋದ್ಧಾರವೇ? ಶಾಲೆಯಲ್ಲಿ ಸಿಗುವುದು ಸಿಗಬೇಕಾದದ್ದು ಸಂಗ್ರಹವಾಗಬೇಕಾದದ್ದು ಜ್ಞಾನವೆಂಬ ಸಂಪತ್ತು. ಇಂತಹ ಶಾಲೆಗೆ ಕನ್ನ ಹಾಕಿದರೆ ಏನು ಸಿಕ್ಕೀತು?
ಹೌದು..ಆರಾಧನಾಲಯಗಳ ಅಭಿವೃದ್ಧಿಗೆ ಲಕ್ಷ ಕೋಟಿಗಟ್ಟಲೆ ದುಡ್ಡು ಕೊಡುವವರು ಅಲ್ಲಲ್ಲಿ ಕಾಣುತ್ತಾರೆ…ಬೆಳ್ಳಿ ಚಿನ್ನದ ವಸ್ತುಗಳನ್ನು ದಾನ ಕೊಡುವವರು ಸಾಕಷ್ಟು ಮಂದಿ ಇದ್ದಾರೆ. ಕಷ್ಟ ನಿವಾರಣೆ ಇಷ್ಟಾರ್ಥ ಸಿದ್ಧಿಯ ನೆಪದಲ್ಲಿ ಏನೇನೋ ಹರಕೆ ಒಪ್ಪಿಸುವವರು/ ಲಕ್ಷಾನುಗಟ್ಟಲೆ ಖರ್ಚು ಮಾಡಿ ಹೋಮ ನೇಮ ಮಾಡಿಸುವವರು ಧಾರಾಳವಾಗಿದ್ದಾರೆ. ಆರಾಧನಾಲಯಗಳಲ್ಲಿ ನಡೆಯುವ ಪೂಜೆ ಉತ್ಸವಾದಿಗಳಿಗೆ ಚಾಚೂ ತಪ್ಪದೆ ತಂಡೋಪತಂಡವಾಗಿ ಭಕ್ತರು ಧಾವಿಸುತ್ತಾರೆ…ಪ್ರತಿವರ್ಷ ಊರೂರಲ್ಲಿ ಹೊಸ ದೇವಸ್ಥಾನ ದೈವಸ್ಥಾನಗಳು ನಿರ್ಮಾಣಗೊಳ್ಳುತ್ತಿದೆ…ಹಳೆಯ ಕಾಲದ ಪ್ರಕೃತಿ ಸಹಜ ಪರಿಸರದಲ್ಲಿದ್ದ ಸಾಂಪ್ರಧಾಯಿಕ ವಿನ್ಯಾಸದ ಗುಡಿ ಗೋಪುರಗಳು ಅಭಿವೃದ್ಧಿಯ ಹೆಸರಿನಲ್ಲಿ ಕೆಡವಿ, ನಿಸರ್ಗ ನಾಶವಾಗಿ ಆಧುನಿಕ ಕಾಂಕ್ರೀಟ್ ಮಾಲ್‍ಗಳಂತಹ ದೇವಸ್ಥಾನಗಳು ನಿರ್ಮಾಣಗೊಳ್ಳುತ್ತಲೇ ಇದೆ…ವಾರವಿಡೀ ಉತ್ಸವ ಬ್ರಹ್ಮಕಲಶೋತ್ಸವ ಆಡಂಬರವಾಗಿ ವೈಭವಯುತವಾಗಿ ಸಂಪನ್ನಗೊಳ್ಳುತ್ತಿದೆ…ಹರಕೆ ಹೊರೆಕಾಣಿಕೆ ಹುಂಡಿ ಕಾಣಿಕೆ ಎಲ್ಲವೂ ಭಕ್ತರಿಂದ ಹರಿದು ಬರುತ್ತದೆ…ಇರಲಿ ಅವರವರ ಭಾವಕೆ ಅವರವರ ಭಕುತಿ…! ಆದರೆ ಇದರ ಒಂದು ಪಾಲನ್ನು ಊರಿನ ವಿದ್ಯಾಲಯಗಳಿಗೆ ದಾನ ಮಾಡಿದರೆ ಹರಕೆಯ ರೂಪದಲ್ಲಿ ನೀಡಿದರೆ ಅದೂ ಪುಣ್ಯ ಕಾರ್ಯವೇ ಎಂದು ನಮಗೆ ಅರ್ಥವಾಗಬೇಕಷ್ಟೇ.
.ಶತಮಾನ ಕಂಡ, ಸಹಸ್ರಾರು (ದೇವರು) ಮಕ್ಕಳು ನಲಿದಾಡಿದ ಅದೆಷ್ಟೋ ಶಾಲೆಗಳು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ..ಊರಿನಲ್ಲಿ ಮೂರೋ ನಾಲ್ಕೋ ಇದ್ದ ಸರಕಾರಿ ಪ್ರಾಥಮಿಕ ಶಾಲೆಗಳು ವರ್ಷಕ್ಕೊಂದರಂತೆ ಮುಚ್ಚುತ್ತಿದೆ..ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ಒಂದೂರಿನ ಮಕ್ಕಳು ದೂರದೂರಿಗೆ ಪಯಣಿಸಬೇಕಾದ ಸ್ಥಿತಿ ಇದೆ..ಒಂದೆರೆಡು ದೇವರಿಗೆ ಅರ್ಚನೆ ಮಾಡಲು ದೇವಾಲಯಗಳಲ್ಲಿ ಮೂರ್ನಾಲ್ಕು ಅರ್ಚಕರಿದ್ದರೆ ಇತ್ತ ಶಾಲೆಯಲ್ಲಿ ನೂರಾರು ದೇವರುಗಳಿಗೆ ಅರ್ಚನೆ ಮಾಡಲು ಒಬ್ಬರೇ ಅರ್ಚಕರಿರುವ ಪರಿಸ್ಥಿತಿ ಇನ್ನೂ ಕೆಲವೆಡೆ ಇದೆ. ಖಾಸಗಿ ವ್ಯಕ್ತಿಗಳು ಖಾಸಗಿ ವ್ಯವಹಾರಕ್ಕಾಗಿ ಆಂಗ್ಲ ಮಾಧ್ಯಮಗಳೆಂಬ ಮಹಲುಗಳನ್ನು ಅಲ್ಲಲ್ಲಿ ತೆರೆಯುವುದು ಬಿಟ್ಟರೆ ಸಾಮುದಾಯಿಕವಾಗಿ ಸೇವಾ ಮನೋಭಾವನೆಯಿಂದ ಹೊಸ ಶಾಲೆಗಳು ತೆರೆಯುವುದು ತೀರಾ ಅಪರೂಪವಾಗಿದೆ. ಬಹುತೇಕ ಸರಕಾರಿ ಶಾಲೆಗಳಲ್ಲಿ ಇನ್ನೂ ಮಕ್ಕಳ ಗುಣಾತ್ಮಕ ಮೌಲ್ಯಧಾರಿತ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲ. ಶಾಲೆಗಳಲ್ಲಿ ನಡೆಯುವ ಪೋಷಕರ ಸಭೆಗೂ ಯಾರದೋ ಒತ್ತಾಯಕ್ಕೆ ಕಟ್ಟು ಬಿದ್ದು ಹೋಗಿ ಸಹಿ ಹಾಕಿ ಬರುವ ಸಂಸ್ಕೃತಿಯೇ ಬೆಳೆಯುತ್ತಿದೆ. ಯಾಕೆ ಹೀಗೆ?
ನಮ್ಮೂರಿನ ಸರಕಾರಿ ಶಾಲೆಗಳು ಯಾಕೆ ಜೀರ್ಣೋದ್ಧಾರಗೊಳ್ಳುತ್ತಿಲ್ಲ? ಇಲ್ಲಿಗ್ಯಾಕೆ ಹರಕೆ ಹೊರೆಕಾಣಿಕೆ ಹುಂಡಿ ಕಾಣಿಕೆ ಧನ ಧಾನ್ಯಾದಿ ಸಂಪತ್ತುಗಳು ಹರಿದು ಬರುತ್ತಿಲ್ಲ? ಇಲ್ಲಿ ಯಾಕೆ ಉತ್ಸವ ಬ್ರಹ್ಮಕಲಶೋತ್ಸವ ನಡೆಯುತ್ತಿಲ್ಲ? ಇಲ್ಲಿ ನಡೆಯುವ ಸಭೆ ಸಮಾರಂಭಗಳು ಪೂಜೆ ಭಜನೆ ಅರ್ಚನೆಯಂತೆ ಪವಿತ್ರವೆನಿಸುವುದಿಲ್ಲ ಯಾಕೆ? “ಮಕ್ಕಳೆಂದರೆ ದೇವರು” ಎನ್ನುವ ನಾವು ಅಂತಹ ದೇವರುಗಳಿರುವ ವಿದ್ಯಾಲಯ ಅರ್ಥಾತ್ ದೇವಾಲಯವನ್ನು ಪ್ರೀತಿಸುವುದು, ಗೌರವಿಸುವುದು, ಬೆಳೆಸುವುದು, ಉಳಿಸುವುದು ಬೇಡವೇ? ಶಾಲೆಯೊಂದು ತೆರೆದರೆ, ಅಲ್ಲಿಯೂ ಎಲ್ಲಾ ವ್ಯವಸ್ಥೆ ಇದ್ದರೆ, ಅಲ್ಲಿಯೂ ಸಾಕಷ್ಟು ಅರ್ಚಕ(ಶಿಕ್ಷಕ)ರಿದ್ದರೆ, ಅಲ್ಲಿಗೂ ಅಪಾರ ಸಂಖ್ಯೆಯಲ್ಲಿ ಭಕ್ತರು( ಪೋಷಕರು) ಬಂದರೆ, ಅಲ್ಲಿನ ಗಂಟೆಯೂ ಜೋರಾಗಿ ಮೊಳಗಿದರೆ ಮತ್ತೇನು ಬೇಕು ನಮ್ಮೂರಿಗೆ. ಇಲ್ಲೇ ಇದ್ದಾರಲ್ವ ಎಲ್ಲಾ ಜಾತಿ, ಮತ, ಪಂಥ, ಧರ್ಮದ ದೇವರು…!
ಆಲದಪದವು ಗೋಪಾಲ ಅಂಚನ್
(ಪತ್ರಕರ್ತ)
ತರಬೇತುದಾರ, ರಂಗ ನಿರ್ದೇಶಕ
